Bengaluru Metro: ನೇರಳೆ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆ ಯಾವಾಗ? ಇಲ್ಲಿದೆ ಉತ್ತರ
ಬೆಂಗಳೂರು ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗದದಲ್ಲಿ ಸಂಪೂರ್ಣ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಸಂಪೂರ್ಣ 43 ಕಿಮೀ ಉದ್ದದ ನೇರಳೆ ಮಾರ್ಗ ಅಕ್ಟೋಬರ್ ತಿಂಗಳಿನಲ್ಲಿ ರೈಲು ಸಂಚಾರಕ್ಕೆ ಮುಕ್ತವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮುಂದಿನ ತಿಂಗಳಿನಿಂದ ಪರ್ಪಲ್ ಲೈನ್ ಮೆಟ್ರೋದ ಉಳಿದ ಭಾಗದಲ್ಲಿ ಸೇವೆಯನ್ನು ಆರಂಭಿಸಲು ಉತ್ಸುಕವಾಗಿದೆ. ಈಗಾಗಲೇ ಕೆಆರ್ ಪುರ - ಬೈಯಪ್ಪನಹಳ್ಳಿ ಮಾರ್ಗದ ಸುರಕ್ಷತಾ ತಪಾಸಣೆ ಮುಕ್ತಾಯವಾಗಿದ್ದು ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮೆಟ್ರೊ ರೈಲ್ವೇ ಸುರಕ್ಷತೆಯ ಕಮಿಷನರ್ (ಸಿಎಮ್‌ಆರ್‌ಎಸ್) ಎಎಮ್ ಚೌಧರಿ ಅವರ ನೇತೃತ್ವದ ತಂಡ ಸುರಕ್ಷತಾ ತಪಾಸಣೆಯನ್ನು ನಡೆಸಿದ್ದು, ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ಚಲ್ಲಘಟ್ಟ - ಕೆಂಗೇರಿ ನಡುವಿನ ಮಾರ್ಗದ ಸುರಕ್ಷತಾ ತಪಾಸಣೆ ಸೆಪ್ಟೆಂಬರ್ 29ರಂದು ನಡೆಸಲಾಗುತ್ತದೆ.
ಒಂದೇ ಬಾರಿ ಎರಡೂ ಮಾರ್ಗಗಳ ಉದ್ಘಾಟನೆ
ಬಿಎಂಆರ್‌ಸಿಎಲ್ ಈ ಮೊದಲು ಚಲ್ಲಘಟ್ಟ - ಕೆಂಗೇರಿ, ಕೆಆರ್ ಪುರ - ಬೈಯಪ್ಪನಹಳ್ಳಿ ನಡುವೆ ಒಂದೇ ಬಾರಿ ರೈಲು ಸಂಚಾರ ಆರಂಭಿಸಲು ಯೋಜಿಸಿತ್ತು. ಆದರೆ ಕೆಆರ್ ಪುರ - ಬೈಯಪ್ಪನಹಳ್ಳಿ ನಡುವೆ ಸುರಕ್ಷತಾ ತಪಾಸಣೆ ನಡೆಸಿದ ಬಳಿಕ ಮೊದಲು ಈ ಮಾರ್ಗದ ಉದ್ಘಾಟನೆ ಮಾಡಿ ನಂತರ ಚಲ್ಲಘಟ್ಟ - ಕೆಂಗೇರಿ ಮಾರ್ಗವನ್ನು ಉದ್ಘಾಟಿಸುತ್ತದೆ ಎಂದು ಹೇಳಲಾಗಿತ್ತು, ಆದರೆ ಈಗ ಸಿಎಂಆರ್‍ಎಸ್ ಸೆ.28ರಂದು ಕೆಂಗೇರಿ - ಚಲ್ಲಘಟ್ಟ ನಡುವಿನ ಮಾರ್ಗದ ಸುರಕ್ಷತಾ ತಪಾಸಣೆ ನಡೆಸಲಿದ್ದು, ಒಂದೇ ಬಾರಿಗೆ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
ನ್ಯೂಸ್ 18 ವರದಿ ಮಾಡಿರುವ ಪ್ರಕಾರ, "ಈ ಮೊದಲು, ಸುರಕ್ಷತಾ ತಪಾಸಣೆ ದಿನಾಂಕವನ್ನು ನಿಗದಿಪಡಿಸದ ಕಾರಣ ಎರಡೂ ಮಾರ್ಗಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಸಂಚಾರ ಆರಂಭಿಸಲು ಯೋಜಿಸಲಾಗಿತ್ತು, ಆದರೆ, ಕೆಂಗೇರಿ-ಚಲ್ಲಘಟ್ಟ ಮಾರ್ಗದ ಸುರಕ್ಷತಾ ಪರಿಶೀಲನಾ ದಿನಾಂಕವನ್ನು ಸಿಎಂಆರ್‌ಎಸ್ ಸೆಪ್ಟೆಂಬರ್ 29 ರಂದು ನಿಗದಿಪಡಿಸಿದ್ದು, ಅದು ಪೂರ್ಣಗೊಂಡ ನಂತರ ಚಲ್ಲಘಟ್ಟದಿಂದ ಕಾಡುಗೋಡಿ (ವೈಟ್‌ಫೀಲ್ಡ್) ವರೆಗೆ ಸಂಪೂರ್ಣ ಮಾರ್ಗವನ್ನು ತೆರೆಯಲು ನಿರ್ಧರಿಸುವುದು ಉತ್ತಮ." ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೆಂಗೇರಿ - ಚಲ್ಲಘಟ್ಟ ಮಾರ್ಗ
ಬೈಯಪ್ಪನಹಳ್ಳಿಯಿಂದ ಕೆಆರ್ ಪುರಕ್ಕೆ ಸಂಪರ್ಕ ಕಲ್ಪಿಸುವ ಮೊದಲ ಮಾರ್ಗವು ಈಗಾಗಲೇ ಎಎಂ ಚೌಧರಿ ಅವರಿಂದ ಸುರಕ್ಷತಾ ಅನುಮತಿಯನ್ನು ಪಡೆದಿದೆ ಮತ್ತು ವಾಣಿಜ್ಯ ಬಳಕೆಗಾಗಿ ಸಿದ್ಧವಾಗಿದೆ ಎಂದು ವರದಿ ಹೇಳುತ್ತದೆ. ಇದರ ಮಧ್ಯೆ, ಕೆಂಗೇರಿಯನ್ನು ಸಂಪರ್ಕಿಸುವ ಎರಡನೇ ಹಂತಕ್ಕೆ ಸಿಎಂಆರ್‌ಎಸ್ ಸುರಕ್ಷತಾ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.
ಅಕ್ಟೋಬರ್ ಮೊದಲ ಅಥವಾ ಎರಡನೇ ವಾರ ಚಲ್ಲಘಟ್ಟದಿಂದ ಕಾಡುಗೋಡಿ (ವೈಟ್‌ಫೀಲ್ಡ್) ವರೆಗಿನ ಸಂಪೂರ್ಣ 43 ಕಿಮೀ ಉದ್ದದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಇದರಿಂದ ಈ ಭಾಗದ ಉದ್ಯೋಗಿಗಳು, ಪ್ರಯಾಣಿಕರು, ಸಾರ್ವಜನಿಕರಿಗೆ ಭಾರಿ ಅನುಕೂಲ ಮಾಡಿಕೊಡಲಿದೆ.












Click it and Unblock the Notifications