Bengaluru Bandh: ಸೆ. 26ರ ಬಂದ್, ಸಂಘಟನೆಗಳಲ್ಲಿ ಅಪಸ್ವರ
ಬೆಂಗಳೂರು, ಸೆ 24: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಗಳು ಕರೆ ನೀಡಿರುವ ಸೆಪ್ಟಂಬರ್ 26ರ ಬೆಂಗಳೂರು ಬಂದ್‌ಗೆ ಕನ್ನಡ ಪರ ಸಂಘಟನೆಗಳಲ್ಲಿ ಒಮ್ಮತ ಮೂಡುತ್ತಿಲ್ಲ. ರಕ್ಷಣಾ ವೇದಿಕೆಯ ಒಂದು ಬಣ, ಸೆ. 26ರ ಬಂದ್‌ಗೆ ವಿರೋಧ ವ್ಯಕ್ತ ಪಡಿಸಿದೆ.
ಸದ್ಯಕ್ಕೆ ಬೆಂಗಳೂರು ಬಂದ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಇದೊಂದು ಆತುರದ ನಿರ್ಧಾರ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಪ್ರಮುಖರು ಹೇಳಿದ್ದಾರೆ. ಜೊತೆಗೆ, ಶುಕ್ರವಾರ ಸೆಪ್ಟಂಬರ್ 29ರಂದು ಮತ್ತೊಂದು ಬಂದ್ ಕರೆಯಲು ನಿರ್ಧರಿಸುವ ಸಾಧ್ಯತೆಯಿದೆ.

ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಜಲ ಸಂರಕ್ಷಣಾ ಸಮಿತಿಯಿಂದ ಮಂಗಳವಾರ ಬಂದ್‌ಗೆ ಈಗಾಗಲೇ ಕರೆ ನೀಡಲಾಗಿದೆ. ವಿವಿಧ ಕನ್ನಡ ಪರ ಸಂಘಟನೆಗಳು (Pro-Kannada Organization) ಈ ವಿಚಾರದಲ್ಲಿ ತಟಸ್ಥ ಧೋರಣೆ ತಾಳುವ ಸಾಧ್ಯತೆಯಿದೆ.
ಬೇರೆ ದಿನಾಂಕದಂದು ಬಂದ್ ಘೋಷಣೆಯಾಗಿದ್ದರೆ, ಪೂರ್ವ ತಯಾರಿ ನಡೆಸಬಹುದಿತ್ತು. ಬಂದ್ ಕರೆ ನೀಡಿದ ಮೇಲೆ ಅದು ಯಶಸ್ವಿಯಾಗಬೇಕು, ಸುಮ್ಮನೆ ಕಾಟಾಚಾರಕ್ಕೆ ಬಂದ್ ಮಾಡಿದರೆ ಅದರಿಂದ ಉಪಯೋಗವಿಲ್ಲ. ತರಾತುರಿಯಲ್ಲಿ ಬಂದ್ ಕರೆದರೆ ಎಲ್ಲರನ್ನೂ ಒಗ್ಗೂಡಿಸುವುದು ಸವಾಲಿನ ಕೆಲಸವಾಗಲಿದೆ ಎಂದು ಪ್ರವೀಣ್ ಶೆಟ್ಟಿ ಬಣದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಕರವೇ ನಾರಾಯಣಗೌಡ ಬಣ ಈಗಾಗಲೇ ಬಂದ್‌ಗೆ ವಿರೋಧವನ್ನು ವ್ಯಕ್ತ ಪಡಿಸಿದೆ. ಇನ್ನು, ವಾಟಾಳ್ ನಾಗರಾಜ್ ನೇತೃತ್ವದ ಸಂಘಟನೆ, ಕರವೇ ಪ್ರವೀಣ್ ಶೆಟ್ಟಿ ಬಣ, ಕರವೇ ಶಿವರಾಮೇಗೌಡ ಬಣ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ, ಸೇರಿ ಹಲವು ಕನ್ನಡಪರ ಸಂಘಟನೆಗಳು ಮತ್ತೊಂದು ಸುತ್ತಿನ ಸಭೆಯನ್ನು ಕರೆದು ಸೆಪ್ಟಂಬರ್ 29ರಂದು ಬಂದ್‌ಗೆ ಕರೆ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಸಂಘಟನೆಗಳು ತೆಗೆದುಕೊಂಡಿಲ್ಲ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಶನಿವಾರ (ಸೆ 23) ಕರೆಯಲಾಗಿದ್ದ ಮಂಡ್ಯ ಜಿಲ್ಲಾ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು. ಮಂಡ್ಯ, ಮದ್ದೂರು, ನಾಗಮಂಗಲ ಮುಂತಾದೆಡೆ ಜನರೇ ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಬೆಂಗಳೂರು ಬಂದ್‌ಗೆ ತಮ್ಮ ಬಾಹ್ಯ ಬೆಂಬಲ ಇರಲಿದೆ ಎಂದು ಬಿಜೆಪಿ ಈಗಾಗಲೇ ಹೇಳಿದೆ.
ಸೆ.26ರ ಬಂದ್‌ಗೆ ವಿವಿಧ ಕಾರ್ಮಿಕ ಸಂಘಟನೆಗಳೂ ಬೆಂಬಲ ಸೂಚಿಸಿವೆ, ಹಾಗಾಗಿ ಬಿಎಂಟಿಸಿ ಮತ್ತು ಮೆಟ್ರೋ ಸೇವೆ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆಯಿದೆ. ಕರವೇ ಕನ್ನಡ ಸೇನೆ, ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ, ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ, ಕರುನಾಡ ಕಾವಲು ಪಡೆ, ಆಮ್ ಆದ್ಮಿ ಪಕ್ಷ, ಓಲಾ ಹಾಗೂ ಉಬರ್ ಮಾಲೀಕರ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ತಮಿಳು ಸಂಘ ಸೇರಿದಂತೆ ವಿವಿಧ 49 ಸಂಘಟನೆಗಳು ಈಗಾಗಲೇ ಬಂದ್‌ಗೆ ಬೆಂಬಲ ಸೂಚಿಸಿವೆ.












Click it and Unblock the Notifications