Namma Metro: ಜೂನ್ ಅಂತ್ಯದೊಳಗೆ ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗ ಸಿದ್ಧ- ಮಾಹಿತಿ, ವರದಿ, ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 27: ವೈಟ್‌ಫೀಲ್ಡ್ ( Whitefield ) ಮತ್ತು ಕೃಷ್ಣರಾಜಪುರಂ ( KR Puram ) ನಡುವಿನ 13.71-ಕಿಮೀ ನಮ್ಮ ಮೆಟ್ರೊ ಮಾರ್ಗವು ಪ್ರಧಾನಿ ನರೇಂದ್ರ ಮೋದಿ ( Narendra Modi ) ಅವರಿಂದ ಯಶಸ್ವಿಯಾಗಿ ಉದ್ಘಾಟನೆಯಾಗಿದೆ. ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿಯನ್ನು ಸಂಪರ್ಕಿಸುವ ಮೆಟ್ರೊ ಮಾರ್ಗವು ಜೂನ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ( BMRCL ) ಮಾಹಿತಿ ನೀಡಿದೆ.
ವೈಟ್‌ಫೀಲ್ಡ್ ( ಕಾಡುಗೋಡಿ ) - ಕೆಆರ್ ಪುರಂ ಮೆಟ್ರೋ ಮಾರ್ಗವನ್ನು ತೆರೆಯುವುದರೊಂದಿಗೆ, ಬೆಂಗಳೂರಿನ 'ಮೊದಲ ಐಟಿ ಕಾರಿಡಾರ್' ಕಾರ್ಯಾರಂಭ ಮಾಡಿದೆ. ವೈಟ್‌ಫೀಲ್ಡ್ ಪ್ರದೇಶವು ಮೆಟ್ರೋ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದೆ ಎಂದು ಹೇಳಲಾಗಿದ್ದರೂ, ವಾಸ್ತವದಲ್ಲಿ, ಈ ಮಾರ್ಗವು ಪ್ರಯಾಣಿಕರನ್ನು ಪ್ರಮುಖ ಏರಿಯಾಗಳಿಗೆ ಸಂಪರ್ಕಿಸುತ್ತಿಲ್ಲ ಎಂಬ ಬಗ್ಗೆ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. ವೈಟ್‌ಫಿಲ್ಡ್ ಹಾಗೂ ಕೆಆರ್ ಪುರಂ ಮೆಟ್ರೋ ಮಾರ್ಗವು ಬೈಯಪ್ಪನಹಳ್ಳಿ ಮೆಟ್ರೋಗೆ ಸಂಪರ್ಕಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ಈ ಮಿಸ್ಸಿಂಗ್ ಲಿಂಕ್ ಜೂನ್ ನಂತರ ಕಾರ್ಯನಿರ್ವಹಿಸುತ್ತದೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿದೆ. ಈ ಮೂಲಕ ಪ್ರಯಾಣಿಕರು ವೈಟ್‌ಫಿಲ್ಡ್‌ನಿಂದ ಕೆಂಗೇರಿಗೆ ಸುಮಾರು 34 ನಿಲ್ದಾಣಗಳನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ಕೊನೆಯ 2 ಕಿ.ಮೀ ಉದ್ದದ ಕಾಮಗಾರಿಯೂ ಈ ವರ್ಷ ಪೂರ್ಣಗೊಳ್ಳಲಿದೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಸಂಪೂರ್ಣ ನೇರಳೆ ಮಾರ್ಗ ಕಾರ್ಯಾರಂಭ ಮಾಡಲಿದೆ.
ಕೆ ಆರ್ ಪುರಂ- ಬೈಯಪ್ಪನಹಳ್ಳಿ ಮೆಟ್ರೊ ಮಾರ್ಗದ ವಿಸ್ತೃತ ಯೋಜನಾ ವರದಿ ( ಡಿಪಿಆರ್ ) 2014ರ ಫೆಬ್ರವರಿಯಲ್ಲಿ ಅನುಮೋದನೆಗೊಂಡು 2020ರ ಗಡುವು ನಿಗದಿಪಡಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬವಾಯಿತು.

ವಿಳಂಬದ ಕಾರಣಗಳ ಬಗ್ಗೆ ಮಾತನಾಡಿರುವ ಪರ್ವೇಜ್, ' ಇದು ಸುಮಾರು 2.5 ವರ್ಷಗಳಷ್ಟು ವಿಳಂಬ. ಇದಕ್ಕೆ ಕಾರಣ ಭೂಸ್ವಾಧೀನ ಪ್ರಕ್ರಿಯಯಲ್ಲಿ ಆದ ತೊಡಕುಗಳು' ಎಂದು ಹೇಳಿದ್ದಾರೆ. ಮರಗಳನ್ನು ಕಡಿಯಲು ಅನುಮತಿಗಳನ್ನು ಪಡೆದುಕೊಳ್ಳುವುದು ಮತ್ತು ಕೋವಿಡ್ - 19 ಪ್ರೇರಿತ ಸಾಂಕ್ರಾಮಿಕ ರೋಗಗಳೂ ಇದಕ್ಕೆ ಕಾರಣವಾಗಿವೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
' ಈ ಕಾರಣಗಳೆಲ್ಲವೂ ನಮ್ಮ ನಿಯಂತ್ರಣವನ್ನು ಮೀರಿವೆ. ಆದಾಗ್ಯೂ, ಅನುಮತಿಗಳು ದೊರೆತ ದಿನದ ನಂತರ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಾವು ಹಗಲಿರುಳು ಶ್ರಮಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರಂ ನಡುವಿನ ಸಾರ್ವಜನಿಕ ಪ್ರಯಾಣಕ್ಕೆ ಫೀಡರ್ ಬಸ್ ವ್ಯವಸ್ಥೆಯನ್ನು BMRCL ಮಾಡಿದೆ.

ನಮ್ಮ ಮೆಟ್ರೋಗಾಗಿ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್
ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಅಥವಾ ಎನ್‌ಸಿಎಂಸಿ ಕಾರ್ಡ್ ಕುರಿತು ಮಾತನಾಡಿದ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್, 'ಒಂದು ವಾರದೊಳಗೆ ಕಾರ್ಡ್ ಅನ್ನು ಸಾರ್ವಜನಿಕರು ಬಳಸಬಹುದು' ಎಂದು ಹೇಳಿದ್ದಾರೆ.
'ನಮ್ಮ ಮೆಟ್ರೋ ನೆಟ್‌ವರ್ಕ್‌ನಾದ್ಯಂತ ಕಾರ್ಡ್ ಅನ್ನು ಬಳಸಲು ಮೂಲ ಸೌಕರ್ಯವನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಹಂತಹಂತವಾಗಿ ಮಾಡಲಾಗುತ್ತದೆ ಮತ್ತು ಶೀಘ್ರದಲ್ಲೇ ಪೂರ್ಣಗೊಳಿಸಲು ನಾವು ಯತ್ನಿಸುತ್ತಿದ್ದೇವೆ. ಇದನ್ನು ಭಾರತದಾದ್ಯಂತ ಸೌಲಭ್ಯ ಹೊಂದಿರುವ ಎಲ್ಲಾ ಮೆಟ್ರೋಗಳು ಮತ್ತು ಬಸ್‌ಗಳಲ್ಲಿ ಬಳಸಬಹುದು' ಎಂದು ಅವರು ಹೇಳಿದ್ದಾರೆ.
ಆದರೆ, ಬಿಎಂಟಿಸಿ ( ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ) ಮತ್ತು ಕೆಎಸ್‌ಆರ್‌ಟಿಸಿ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ) ಇನ್ನೂ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.












Click it and Unblock the Notifications