Bengaluru KIA: ಏಳು ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣ
ಬೆಂಗಳೂರು, ಆಗಸ್ಟ್ 10: ಕರ್ನಾಟಕ ರಾಜ್ಯ ರಾಜಧಾನಿ ತನ್ನದೇ ಆದ ವಿಶೇಷತೆಗಳಿಂದ ಜಗತ್ತಿನಾದ್ಯಂತ ಗಮನ ಸೆಳೆಯುತ್ತಲೇ ಬಂದಿದೆ. ವಾರ್ಷಿಕವಾಗಿ ಮಿಲಿಯನ್ ಗಟ್ಟಲೇ ಜನರಿಗೆ ಸೇವೆ ನೀಡುರತ್ತಿರುವ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ವಿವಿಧ ವಿಭಾಗಗಳಲ್ಲಿ ಒಟ್ಟು 'ಸಪ್ತ ಪ್ರಶಸ್ತಿ'ಗಳನ್ನು ಮುಡಿಗೇರಿಸಿಕೊಂಡಿದೆ. ಹಾಗಾದರೆ ಯಾವುದರಲ್ಲಿ ಈ ಪ್ರಶಸ್ತಿಗಳಿಗೆ ಬೆಂಗಳೂರು ಏರ್‌ಪೋರ್ಟ್ ಭಾಜನವಾಗಿದೆ, ಏನು ಸಾಧನೆ? ಇಲ್ಲಿದೆ ಮಾಹಿತಿ.
ಕ್ಯಾಲಿಫೋರ್ನಿಯಾದ ಪ್ರಮುಖ ನಗರವೊಂದರಲ್ಲಿ ನಡೆದ ಪ್ರತಿಷ್ಠಿತ ಏರ್‌ಪೋರ್ಟ್ ಫುಡ್ ಆಂಡ್ ಬೆವರೇಜ್ (ಎಫ್‌ಎಬಿ) ಜೊತೆಗೆ ಹಾಸ್ಪಿಟಾಲಿಟಿ ಕಾನ್ಫರೆನ್ಸ್ ಪ್ರಶಸ್ತಿಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) 07 ಪ್ರಶಸ್ತಿಗಳು ಲಭಿಸಿವೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರು ಕೆಐಎ ನಿರ್ವಾಹಕರು ಹಾಗೂ ಏರ್‌ಪೋರ್ಟ್ ಕ್ಯಾಲಿಫೋರ್ನಿಯಾದ ಒಂಟಾರಿಯೊ ಬೃಹತ್ ಸಮಾವೇಶದಲ್ಲಿ ಸರಣಿ ಪ್ರಶಸ್ತಿಗಳನ್ನು ಪಡೆದ ಮೊದಲ ಭಾರತೀಯ ವಿಮಾನ ಇದಾಗಿದೆ ಎಂದು ಹೇಳಲಾಗಿದೆ.
ಫುಡ್ & ಬೆವರೇಜ್ ರಂಗದಲ್ಲಿ ಸಾಧನೆ
ವಿಮಾನ ನಿಲ್ದಾಣದ ಫುಡ್ ಆಂಡ್ ಬೆವರೇಜ್ ಮತ್ತು ಹಾಸ್ಪಿಟಾಲಿಟಿ ರಂಗದಲ್ಲಿ ಬೆಂಗಳೂರು ಏರ್‌ಪೋರ್ಟ್ ಸಾಧನೆ ಕಂಡು ಈ ಪ್ರಶಸ್ತಿಗಳು ಧಕ್ಕಿವೆ. ಈ ವಿಭಾಗದಲ್ಲಿ ವಿಶ್ವದಲ್ಲಿ ಪ್ರಮುಖ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಏರ್‌ಪೋರ್ಟ್ ಫುಡ್ ಆಂಡ್ ಬೆವರೇಜ್ ಉದ್ಯಮದಲ್ಲಿ ಉನ್ನತ ಗುಣಮಟ್ಟ ಹೊಂದಿರುವ ಕೆಐಎಗೆ ಎಫ್‌ಎಬಿ ಪುರಸ್ಕಾರ ನೀಡಲಾಯಿತು. ಬೆಂಗಳೂರು ಏರ್‌ಪೋರ್ಟ್‌ಗೆ ಬಂದ ಈ ಪ್ರಶಸ್ತಿಗಳು ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದೆ.
ಬೆಂಗಳೂರು ಏರ್‌ಪೋರ್ಟ್‌ಗೆ ಟರ್ಮಿನಲ್ ಎರಡರಲ್ಲಿ ಹೊಸದಾಗಿ 080 ಡೊಮೆಸ್ಟಿಕ್ ಲೌಂಜ್ ತೆರೆಯಲಾಗಿದ್ದು, ಇದು ಈ ಬಾರಿಯ 'ವರ್ಷದ ಏರ್‌ಪೋರ್ಟ್ ಲೌಂಜ್' ಪ್ರಶಸ್ತಿ ಪಡೆಯಲು ಸಹಾಯವಾಯಿತು ಎಂದು BIAL ತಿಳಿಸಿದೆ.
ಕೆಐಎ ಲೌಂಜ್‌ಗಳು ರಾಜ್ಯದ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಹ ವಿನ್ಯಾಸ ಹೊಂದಿವೆ. ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುತ್ತದೆ. ಇನ್ನೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ 'ಮಿಟ್ಟಿ ಕೆಫೆಗಳ' ಸ್ಥಾಪಿಸಲಾಗಿದೆ. ಇದು ಅಂಗವಿಕಲ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಮಿಟ್ಟಿ ಕೆಫೆ ಮತ್ತು ಬಿಐಎಎಲ್ ಸಹಯೋಗದ ಗೌರವಾರ್ಥ 'ಮಾನವೀಯ ಪ್ರಶಸ್ತಿ'ಗೆ ಏರ್‌ಪೋರ್ಟ್ ಭಾಜನವಾಗಿದೆ.
ಪ್ರಶಸ್ತಿ ಸ್ವೀಕಾರ: ಬಿಐಎಎಲ್ ಮುಖ್ಯಸ್ಥರು ಹೇಳಿದ್ದೇನು?
ಸಪ್ತ ಪ್ರಶಸ್ತಿಗಳನ್ನು ಪಡೆದಿದ್ದಕ್ಕೆ ಬಿಐಎಎಲ್ ಮುಖ್ಯಸ್ಥ ಕೆನ್ನೆತ್ ಗುಲ್ಡ್‌ಬ್ಜೆರ್ಗ್ ಅವರು ಪ್ರತಿಕ್ರಿಯಿಸಿ, ಎಫ್‌ಎಬಿ ಅವಾರ್ಡ್ಸ್‌ನಲ್ಲಿ ನಮ್ಮ ಏರ್‌ಪೋರ್ಟ್ ಪ್ರಮುಖ ಪ್ರಶಸ್ತಿ ಹಾಗೂ ಗೌರವಗಳನ್ನು ಪಡೆದುಕೊಂಡಿದೆ. ಹೀಗೆ ಗೌರವ ಪಡೆದ KIA ಮೊದಲ ಭಾರತೀಯ ವಿಮಾನ ನಿಲ್ದಾಣ ಎನ್ನಲು ಹೆಮ್ಮೆ ಇದೆ ಎಂದರು.
ಈ 080 ಡೊಮೆಸ್ಟಿಕ್ ಲೌಂಜ್ ವಿಶಾಲವಾಗಿದ್ದು, ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತಿಬಿಂಬವಾಗಿದೆ. ಆಧುನಿಕ ಸೌಕರ್ಯದಿಂದಲೇ ವಿನ್ಯಾಸಗೊಂಡರೂ ಸಹಿತ ಸಾಂಪ್ರದಾಯಿಕ ಅಂಶಗಳ ಒಳಗೊಂಡಿದೆ. ಹೀಗಾಗಿಯೇ ಇದೊಂದು ವಿಶೇಷತೆ ನಮ್ಮಲ್ಲಿದೆ ಎಂದು ತಿಳಿಸಿದರು.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಾರ್ಷಿಕ 25 ಮಿಲಿಯನ್ ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ವಿಶೇಷ ವಿನ್ಯಾಸ, ಥೀಮ್ ನಲ್ಲಿ ಸ್ಥಾಪಿಸಲಾದ ಕೆಐಎ ಟರ್ಮಿನಲ್ 2 ಶುರುವಾದ ಬಳಿಕ ಅತ್ಯಧಿಕ ಪುರಸ್ಕಾರಗಳು ಸಂದಿವೆ. ಇನ್ನು ದೇಶದ ಮೂರನೇ ಅತೀ ದೊಡ್ಡ ಜನನಿಬಿಡ ಏರ್‌ಪೋರ್ಟ್‌ಗಳ ಸಾಲಿನಲ್ಲಿ ಬೆಂಗಳೂರು ಇದೆ.
ಇನ್ನು ಬೆಂಗಳೂರು ವಿಮಾನ ನಿಲ್ದಾಣವು ಅತ್ಯಧಿಕ ಮಾವು ರಫ್ತು ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. 822 ಮೆಟ್ರಿಕ್ ಟನ್ ಮಾವು ರಫ್ತಿನ ಮೂಲಕ ಈ ಬಾರಿ ಕೆಐಎ ಶೇಕಡಾ 20ರಷ್ಟು ಅಧಿಕ ರಫ್ತು ಪ್ರಮಾಣ ಹೆಚ್ಚಿಸಿಕೊಂಡಿದೆ ಎಂದು BIAL ತಿಳಿಸಿದೆ.












Click it and Unblock the Notifications