Bengaluru Kambala: ಅದ್ದೂರಿ ಕಂಬಳದಲ್ಲಿ ಲಕ್ಷಾಂತರ ಮಂದಿ ಭಾಗಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳದ ಮೊದಲ ದಿನ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಭಾನುವಾರ ಬೆಂಗಳೂರಿನ ಕಂಬಳಕ್ಕೆ ತೆರೆ ಬೀಳಲಿದ್ದು, ಮೊದಲ ದಿನಕ್ಕಿಂತ ಹೆಚ್ಚಿನ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಇದೇ ಮೊದಲ ಬಾರಿಗೆ ಕರ್ನಾಟಕ ಕರಾವಳಿ ಪ್ರದೇಶದಿಂದ ಹೊರಗಡೆ ಕಂಬಳವನ್ನು ಆಯೋಜಿಸಲಾಗಿದೆ. 140ಕ್ಕೂ ಹೆಚ್ಚು ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗವಹಿಸಿದ್ದು, ಭಾರಿ ಸ್ಪರ್ಧೆ ನಡೆಯುತ್ತಿದೆ.

ಬೆಂಗಳೂರು ಕಂಬಳಕ್ಕೆ ಶನಿವಾರ ಪುನಿತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ಚಾಲನೆ ನೀಡಿದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಗೀತ ನಿರ್ದೇಶಕ ಗುರುಕಿರಣ್, ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶನಿವಾರ ಸಂಜೆ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್, ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಭಾಗವಹಿಸಿ ಕಂಬಳ ವೀಕ್ಷಣೆ ಮಾಡಿದರು.
ಮೊದಲ ದಿನ ಜನ ಸಾಗರ
ವಾರಾಂತ್ಯದ ದಿನವಾದ ಕಾರಣ ಕಂಬಳದ ಮೊದಲ ದಿನಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕರಾವಳಿ ಭಾಗದ ಸಂಸ್ಕೃತಿಯನ್ನು ಅರಮನೆ ಮೈದಾನದಲ್ಲಿ ಅನಾವರಣ ಮಾಡಲಾಗಿತ್ತು. ಕರಾವಳಿ ಭಾಗದ ವಿಶೇಷ ಖಾದ್ಯಗಳು, ತಿನಿಸುಗಳು ಕೂಡ ಜನರ ಗಮನ ಸೆಳೆದವು.
ಇನ್ನು ಟ್ರಾಫಿಕ್ ಪೊಲೀಸರು ಕೂಡ ಯಾವುದೇ ಸಂಚಾರ ದಟ್ಟಣೆಗೆ ಅವಕಾಶ ಆಗದಂತೆ ವ್ಯವಸ್ಥೆ ಮಾಡಿದ್ದರು. ಸುಗಮ ಸಂಚಾರಕ್ಕೆ ಮಾರ್ಗ ಬದಲಾವಣೆ, ಪಾರ್ಕಿಂಗ್, ವಾಹನಗಳು ಒಳಬರುವ ಮತ್ತು ಹೊರಹೋಗುವ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದರು.
ಆದರೂ ಕಂಬಳ ವೀಕ್ಷಣೆಗೆ ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಎಂದು ಅಸಮಾಧಾನ ಕೂಡ ವ್ಯಕ್ತವಾಗಿದೆ. ವಿಐಪಿಗಳಿಗೆ ಮಾತ್ರ ಕಂಬಳ ನೋಡಲು ಆಸನ ವ್ಯವಸ್ಥೆ ಮಾಡಿದ್ದರೆ, ಸಾಮಾನ್ಯ ಜನ ನಿಂತುಕೊಂಡೇ ಕಂಬಳವನ್ನು ವೀಕ್ಷಣೆ ಮಾಡಿದರು.
ಭಾನುವಾರ ಬೆಳಗ್ಗೆಯಿಂದ ಕೂಡ ಕೋಣಗಳ ಸ್ಪರ್ಧೆ ನಡೆಯುತ್ತಿದೆ. ಸಂಜೆ ವೇಳೆಗೆ ಎಲ್ಲಾ ಕೋಣಗಳ ಓಟ ಮುಗಿಯಲಿದ್ದು, ಯಾವ ಕೋಣಗಳು ಚಿನ್ನದ ಪದಕ ಗೆಲ್ಲುತ್ತವೆ ಎನ್ನುವುದು ಕುತೂಹಲಕಾರಿಯಾಗಲಿದೆ. ಸಂಜೆ ವೇಳೆಗೆ ದಾಖಲೆಯ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಮಾಡಲಾಗಿದೆ. ರಾಜಕೀಯ ಗಣ್ಯರು, ಸಿನಿಮಾ ನಟರು ಸಂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಿದರೆ ಜನ ನೋಡುತ್ತಾರೆ. ಇದೊಂದು ಮನರಂಜನೆಯ ಕ್ರೀಡೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications