ಬಿಬಿಎಂಪಿಯಿಂದ ಜಯನಗರದಲ್ಲಿ ಒತ್ತುವರಿ ತೆರವು: ಕಾರ್ಯಾಚರಣೆಯ ಅಂಶಗಳು
ಬೆಂಗಳೂರು, ನವೆಂಬರ್ 07: ಬೆಂಗಳೂರಿನ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಜಯನಗರ ವಾಣಿಜ್ಯ ಸಂಕೀರ್ಣದ ಸುತ್ತಮುತ್ತಲಿನ ವಿವಿಧ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಆಗಿದ್ದ ಒತ್ತುವರಿಯನ್ನು ಮಂಗಳವಾರ ಬಿಬಿಎಂಪಿ ತೆರವು ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಾರ್ಷಲ್ ಸೇರಿದಂತೆ ಅಧಿಕಾರಿಗಳ ತಂಡ ಜಯನಗರ ವಾಣಿಜ್ಯ ಸಂಕೀರ್ಣ ಬಳಿಯ 9ನೇ ಮುಖ್ಯರಸ್ತೆ, 10ನೇ ಮುಖ್ಯರಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆ ನಡೆಸಿದರು.

ರಾಜ್ಯ ಉಚ್ಛ ನ್ಯಾಯಾಲಯ (ಹೈಕೊರ್ಟ್) ಹೊರಡಿಸಿರುವ ಆದೇಶದನುಸಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಆದೇಶದಂತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ಈ ಮೂಲಕ ಪಾದಚಾರಿ ಮಾರ್ಗದಲ್ಲಿ ಇಟ್ಟಿರುವ ಅನಧಿಕೃತ ಪೆಟ್ಟಿ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆ ಆಗಂತೆ ಮಾಡಲಾಯಿತು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಅನಧಿಕೃತ ವ್ಯಾಪಾರ ಅಂಗಡಿಗಳು ತೆರವು: ಪಾಲಿಕೆ
ಕಾರ್ಯಾಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ತಿಳಿಸಲಾಗಿದ್ದರೂ ಕೂಡ ಮೇಲ್ಕಾಣಿಸಿದ ರಸ್ತೆಗಳಲ್ಲಿ ಸುಮಾರು 01 ಕೀಲೋ ಮೀಟರ್ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ತೆರವು ಕಾರ್ಯದಲ್ಲಿ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿಗಳು, ಮಾರುಕಟ್ಟೆ ವಿಭಾಗದ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು/ ಸಂಚಾರಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಮಾರ್ಷಲ್‌ಗಳು, ಗ್ಯಾಂಗ್‌ಮನ್‌ಗಳು ಪಾಲ್ಗೊಂಡಿದ್ದರು.

ದೀಪಾವಳಿ ಭರ್ಜರಿ ವ್ಯಾಪಾರದ ನಿರೀಕ್ಷೆ ಹುಸಿ
ದೀಪಾವಳಿ ಹಬ್ಬದ ಎದುರಾದ ಹೊತ್ತಿನಲ್ಲಿ ಬಿಬಿಎಂಪಿ ಕೈಗೊಂಡಿರುವ ಈ ಒತ್ತುವರಿ ತೆರವು ಕಾರ್ಯಾಚರಣೆಯಿಂದ ವ್ಯಾಪಾರಿಗಳಿಗೆ ಸಂಕಷ್ಟ ಉಂಟಾಗಿದೆ. ಹಬ್ಬದ ನಿಮಿತ್ತ ಉತ್ತಮ ವ್ಯಾಪಾರ ವಹೀವಾಟು ನೀರಿಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಬಿಬಿಎಂಪಿ ಈ ಮೂಲಕ ಶಾಕ್ ನೀಡಿದೆ.
ಜಯನಗರ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಮಾಡಿರುವ ಬಿಬಿಎಂಪಿ ಇಲ್ಲಿನ ವ್ಯಾಪಾರಿಗಳಿಗೆ ಬೇರೆ ಎಲ್ಲಿಯೂ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ನಮ್ಮ ಮುಂದಿನ ಬದುಕು ಹೇಗೆ? ಎಂದು ಕೆಲವು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications