ಸಚಿವ ಡಿ.ಸುಧಾಕರ್ ವಿರುದ್ಧ ನಾಳೆ ಸೆ.13ರಂದು'ಜೆಡಿಎಸ್'ನಿಂದ ಉಗ್ರ ಪ್ರತಿಭಟನೆ
ಬೆಂಗಳೂರು, ಸೆಪ್ಟಂಬರ್ 12: ಕರ್ನಾಟಕ ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಡಿ.ಸುಧಾಕರ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಅವರ ರಾಜೀನಾಮೆ ವಿಚಾರ ಸದ್ದು ಮಾಡುತ್ತಿರುವ ಹೊತ್ತಿನಲ್ಲಿಯೇ 'ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ)' ಸಚಿವರ ವಿರುದ್ಧ ಬುಧವಾರ ನಗರದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಂಡಿದೆ.
ದಲಿತ ಭೂಮಿ ಕಬಳಿಸಿರುವುದಲ್ಲದೇ ಅವರ ಮೇಲೆ ದೌರ್ಜನ್ಯ ನಡೆಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಾದ ಡಿ ಸುಧಾಕರ್ ವಿರುದ್ಧ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷ ಮಾಜಿ ಶಾಸಕ ಎಚ್.ಎಂ.ರಮೇಶ್ ಗೌಡ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಈ ಸಂಬಂಧ ಸಚಿವರ ವಿರುದ್ಧ ನಾಳೆ ಬುಧವಾರ ಸೆಪ್ಟಂಬರ್ 13ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಗ್ರ ಪ್ರತಿಭಟನೆ ನಡೆಯಲಿದೆ. ಈ ವೇಳೆ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವರು, ಮಾಜಿ ಸಂಸದರು, ಶಾಸಕರು, ಬಿಬಿಎಂಪಿ ಮಾಜಿ ಸದಸ್ಯರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷ, ವಿವಿಧ ವಿಭಾಗದ ಅಧ್ಯಕ್ಷರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ
ರಾಜ್ಯ ಕಾಂಗ್ರೆಸ್ ಸಚಿವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಬೇರೆಯವರ ವಿಚಾರಣೆ ಹೇಗೆ ಆಗುತ್ತದೆಯೊ ಅದೇ ರೀತಿ ಇಲ್ಲಿಯೂ ಆಗಲಿ. ವಿಚಾರಣೆ ಆಗಿ ಆರೋಪದಿಂದ ಮುಕ್ತವಾದರೆ ಮಾತ್ರ ಬೇಕಿದ್ದರೆ ಅವರು ಸಚಿವರಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪೊಲಿಸರಿಗೆ ತನಿಖೆ ನಡೆಸಲು ಪರಮೇಶ್ವರ್ ಬಿಡಬೇಕು. ಗೃಹ ಸಚಿವರು ತಾವೇ ತನಿಖೆಗೆ ಮುಂದಾಗಬಾರದು. ಗೃಹ ಸಚಿವರು ಯಾವುದೇ ತನಿಖೆ ಮಾಡಲು ಅವಕಾಶ ಇಲ್ಲ ಎಂದು ಅವರು ದೂರಿದರು.












Click it and Unblock the Notifications