ಬೆಂಗಳೂರಲ್ಲಿ ಕಳಪೆ ಕಾಮಗಾರಿ ಪತ್ತೆ; ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ!
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ "ಬಿ.ಸ್ಟೈಲ್" ವಿಭಾಗದಿಂದ ವೈಟ್ ಟಾಪಿಂಗ್ ಕಾಮಗಾರಿಯು ಕೈಗೊಳ್ಳಲಾಗಿದೆ. ಪ್ರಸ್ತುತ ಈ ರಸ್ತೆಯಲ್ಲಿ 1.2ಮೀಟರ್ ಡಯಾ ಬೃಹತ್ ಮಳೆನೀರು ಗಾಲುವೆ ಕಾಮಗಾರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದ್ದು, ಅದರಲ್ಲಿ ಗುಣಮಟ್ಟ ಕಳಪೆಯಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರ ಸ್ವಕ್ಷೇತ್ರ ಬಿಟಿಎಂ ಲೇಔಟ್ ವ್ಯಾಪ್ತಿಯ ಎಚ್ಎಸ್ ಆರ್ ಬಡಾವಣೆ ವ್ಯಾಪ್ತಿಯ 05ನೇ ಹಂತಕ್ಕೆ ಒಳಪಡುವ 14ನೇ ಮುಖ್ಯರಸ್ತೆಯಲ್ಲಿ ಈ ಕಾಮಗಾರಿ ನಡೆಯುತ್ತಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ "ಬಿ.ಸ್ಟೈಲ್" ವಿಭಾಗದಿಂದ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿತ್ತು. ಅದರೊಂದಿಗೆ ನಡೆಯುತ್ತಿದ್ದ ಮಳೆನೀರು ಗಾಲುವೆ ಕಾಮಗಾರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಪತ್ತೆಯಾಗಿದೆ. ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸದೇ, ಕಳಪೆ ಕಾಮಗಾರಿ ನಿರ್ವಹಿಸುತ್ತಿರುವುದು ಕಂಡು ಬಂದಿದೆ ಎಂದು ಸಚಿವರು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಸ್ಥಳೀಯ ನಿವಾಸಿಗಳಿಗೆ ತೊಂದರೆ, ಸಂಚಾರ ಅಡಚಣೆ
ಈ ಅಸರ್ಮಪಕ ಕಾಮಗಾರಿಯ ಕಾರಣ ಬಡಾವಣೆಯ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಂಪರ್ಕ ಕೊಳವೆಗಳು, ಬಾಗಶಃ ರಸ್ತೆಯು ಹಾಳಾಗಿ, ಸುಗಮ ಸಂಚಾರಕ್ಕೆ, ಸ್ಥಳೀಯ ನಿವಾಸಿಗಳಿಗೆ, ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿರುತ್ತದೆ ಎಂಬ ದೂರುಗಳು ಕೇಳಿ ಬಂದಿವೆ.
ಈ ಕಾಮಗಾರಿಯ ಸ್ಥಳ ಪರಿವೀಕ್ಷಣೆಯ ಸಂಧರ್ಭದಲ್ಲಿ ಕಳಪೆ ಕಾಮಗಾರಿಯ ಬಗ್ಗೆ ಆಗಮಿಸಿದ ಬಿಸ್ಟೈಲ್ ಸಂಸ್ಥೆಯು ಅಭಿಯಂತರ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಿರಂತರ ದೂರುಗಳ ಹೊರತಾಗಿಯೂ ನಿರ್ಲಕ್ಷ್ಯ ವಹಿಸಲಾಗಿದೆ, ವಿಳಂಬ ದೋರಣೆ ತೋರಿದ್ದಾರೆ.
ಕಾಮಗಾರಿ ಸ್ಥಗಿತ: ನಿಯಮಾನುಸಾರ ಕಾನೂನು ಕ್ರಮ
ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬಿಸ್ಟೈಲ್ ಸಂಸ್ಥೆಯವರು 05ನೇ ಹಂತದ ಹೆಚ್ ಎಸ್ ಆರ್ ಬಡಾವಣೆಯ 14ನೇ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿಬೇಕು. ಕಾಮಗಾರಿಯ ಗುಣಮಟ್ಟವನ್ನು ಮರುಪರಿಶೀಲಿಸಬೇಕು. ಕಳಪೆ ಕಾಮಗಾರಿಯನ್ನು ಕೈಗೊಂಡಿರುವ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಮುಂದಿನ ಕ್ರಮಕೈಗೊಂಡು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುಂತೆ ರಾಮಲಿಂಗಾ ರೆಡ್ಡಿ ಅವರು ಪತ್ರದ ಮೂಲಕ ಕೋರಿದ್ದಾರೆ.
ಬೆಂಗಳೂರಿನಾದ್ಯಂತ ಒಂದಿಲ್ಲ ಒಂದು ಕಡೆಗಳಲ್ಲಿ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಹಣದಾಸೆಗೆ, ಭ್ರಷ್ಟಾಚಾರದಿಂದಾಗಿ ಯೋಜನೆಗಳಲ್ಲಿ ಗುಣಮಟ್ಟದ ಕೊರತೆ ಉಂಟಾಗಿ ದುರಸ್ತಿಯಾದ ರಸ್ತೆಗಳು ಪುನಃ ಹದಗೆಡುತ್ತವೆ. ರಸ್ತೆಗುಂಡಿಗಳು ಒಂದೇ ಮಳೆಗೆ ಕಿತ್ತು ಸಮಸ್ಯೆ ಸೃಷ್ಟಿಸುತ್ತವೆ. ತಪ್ಪು ಮಾಡಿದ ಗುತ್ತಿಗೆದಾರರು/ ಕಂಪನಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿದರೆ ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯಗಳು ಕಡಿಮೆ ಆಗುತ್ತವೆ ಎಂಬುದು ಸಾರ್ವನಿಕರ ಆಶಯವಾಗಿದೆ.


Click it and Unblock the Notifications
