Bengaluru: LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ, ತಿಂಡಿ ದರ ಹೆಚ್ಚಾಗುತ್ತಾ?, ಹೋಟೆಲ್ ಸಂಘ ಹೇಳಿದ್ದೇನು?
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಳೆ ಏರಿಕೆ ಮಧ್ಯೆ ಪುನಃ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಾಗಿದೆ. ಇದು ಹೋಟೆಲ್ ತಿಂಡಿ, ತಿನಿಸುಗಳ ದರ ಏರಿಕೆಯ ಮುನ್ಸೂಚನೆಯಾಗಿದೆ.
ಬೆಂಗಳೂರು, ಮಾರ್ಚ್ 01: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಳೆ ಏರಿಕೆ ಮಧ್ಯೆ ಪುನಃ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder) ದರವನ್ನು ಮತ್ತೆ ಹೆಚ್ಚಳ ಮಾಡಿದೆ. ಇದು ಹೋಟೆಲ್ ತಿಂಡಿ, ತಿನಿಸುಗಳ ದರ ಏರಿಕೆಯ ಮುನ್ಸೂಚನೆಯಾಗಿದೆ.
ಸರ್ಕಾರ ಪದೇ ಪದೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ. ಸರ್ಕಾರದ ದರ ಏರಿಕೆ ನಿರ್ಧಾರಕ್ಕೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ವಿರೋಧ ವ್ಯಕ್ತಪಡಿಸಿದೆ.

ಬೆಲೆ ಏರಿಕೆ ಮಾಡದಂತೆ ನಾವು ಈ ಹಿಂದೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಹೀಗದ್ದರು ಸಿಲಿಂಡರ್ ದರ ಹೆಚ್ಚಾಗಿದೆ. ಈ ಸಂಬಂಧ ಸಭೆ ಸೇರಿ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಲಿದ್ದೇವೆ. ಅಲ್ಲಿಯವರೆಗೆ ಹೋಟೆಲ್‌ಗಳ ತಿಂಡಿ ತಿನಿಸು ಊಟಗಳ ಬೆಲೆಯಲ್ಲಿ ಏರಿಕೆ ಇಲ್ಲ ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟಪಡಿಸಿದ್ದಾರೆ. ಸಂಘವು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಅವರ ಮನವಿಗೆ ಬೆಲೆ ಸಿಗದಿದ್ದ ಪಕ್ಷದಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಜನ ಸಾಮಾನ್ಯರಿಗೆ ಹಾಗೂ ಹೋಟೆಲ್ ಮಾಲೀಕರಿಗೂ ದರ ಏರಿಕೆ ಆರ್ಥೀಕ ಹೊರೆಯಾಗಲಿದೆ. ಈ ಸಂಬಂಧ ಮಾರ್ಚ್ 16ರಂದು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇವೆ. ಜಿಎಸ್ಟಿ ತೆರಿಗೆ ಹೇರಿಕೆ ನಮಗೆ ಹೆಚ್ಚಾಗಿದೆ. ಡೊಮೆಸ್ಟಿಕ್ ರೇಟ್ನಲ್ಲಿ 5% ಜಿಎಸ್ಟಿ ಇದೆ. ಆದರೆ ನಮಗೆ ಕಮರ್ಷಿಯಲ್ ರೇಟ್ನಲ್ಲಿ ಜಿಎಸ್ಟಿ 18% ಹಾಕಲಾಗಿದೆ.ಅಲ್ಲದೇ ನಮಗೆ ರಿಯಾಯಿತಿ ದರವು ಜಾಸ್ತಿ ಮಾಡಲಾಗಿದೆ. ಈ ಕುರಿತು ಕೇಂದ್ರ ಸಚಿವರ ಬಳಿ ಮಾತನಾಡಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಪಿ.ಸಿ ರಾವ್ ತಿಳಿಸಿದರು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಮನೆ ಬಳಕೆಯ LPG ಸಿಲಿಂಡರ್ ಬೆಲೆ ಮೊದಲಿದ್ದ 1055.50ರೂ.ನಿಂದ 1105.50 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನೂ ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ LPG ಸಿಲಿಂಡರ್ ಬೆಲೆ ಮೊದಲಿದ್ದ 1839.520ರೂ.ನಿಂದ 2190 ರೂಪಾಯಿಗೆ ಏರಿಕೆ ಆಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಕರ್ನಾಟಕದ ಚುನಾವಣೆಯು ಇನ್ನೇನು ಸಮೀಪಿಸುತ್ತಿದೆ. ಸದ್ಯ ಯಾವುದೇ ಬೆಲೆ ಏರಿಕೆ ಮಾಡದೇ ಕೇಂದ್ರ ಸರ್ಕಾರ ಚುನಾವಣೆ ಬಳಿಕ ಕೆಲವು ವಸ್ತುಗಳ/ಸಿಲಿಂಡರ್ ಬೆಲೆ ಹೆಚ್ಚಾಗಬಹುದು ಎಂದು ಊಹಿಸಲಾಗಿತ್ತು. ಆದರೆ ಚುನಾವಣೆಗೂ ಮುನ್ನವೇ ಬೆಲೆ ಏರಿಕೆ ಆಗಿ ಅಚ್ಚರಿ ಮೂಡಿಸಿದೆ.












Click it and Unblock the Notifications