ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್‌ನಿಂದ ಕರ್ನಾಟಕ ಅಭಿವೃದ್ಧಿ: ಬಿ.ವೈ ವಿಜಯೇಂದ್ರ, ಜನಾಂದೋಲನ ಎಂದ ಎಂ.ಬಿ ಪಾಟೀಲ್
ಬೆಂಗಳೂರು: ಬೆಂಗಳೂರನ್ನು ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ರಾಜ್ಯದ ಅಭಿವೃದ್ಧಿಗೆ ಹೊಸ ವೇಗ ನೀಡಲಿವೆ ಎಂದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಬಿ.ವೈ ವಿಜಯೇಂದ್ರ ಅವರ ಟ್ವೀಟ್‌ಗೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಕಸಿತ ಭಾರತದ ದೃಢ ಸಂಕಲ್ಪದೊಂದಿಗೆ ಮಂಡನೆಯಾಗಿರುವ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ 63,049 ಕೋಟಿ ರೂ.ಗಳ ದಾಖಲೆ ಅನುದಾನ, ಜೊತೆಗೆ ಸಹಾಯಧನ ಅನುದಾನದಲ್ಲಿ 16 ಸಾವಿರ ಕೋಟಿ ರೂ. ಹಾಗೂ ರಾಜ್ಯದ ರೈಲ್ವೆ ಯೋಜನೆಗಳಿಗಾಗಿ 7,748 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ 3.89 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ. ಜತೆಗೆ, 2.36 ಲಕ್ಷ ಕೋಟಿ ರೂ. ಸಹಾಯಧನ ಅನುದಾನ ನೀಡಿದೆ. ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ನೀಡುವ ವಿಶೇಷ ನೆರವಿನಡಿ 2020-21 ರಿಂದ 2026ರ ಜನವರಿವರೆಗೆ ಕೇಂದ್ರದಿಂದ ರಾಜ್ಯಕ್ಕೆ ಒಟ್ಟಾರೆ 15,945 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಒಟ್ಟಾರೆ ರಾಜ್ಯಕ್ಕೆ ಬಜೆಟ್ ಘೋಷಣೆಗಳನ್ನು ಇಡೀ ರಾಜ್ಯ ಸ್ವಾಗತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಬೆಂಗಳೂರನ್ನು ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ರಾಜ್ಯದ ಅಭಿವೃದ್ಧಿಗೆ ಹೊಸ ವೇಗ ನೀಡಲಿವೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕರ್ನಾಟಕದ ಪ್ರಗತಿಗೆ ಪೂರಕವಾದ ದೂರದರ್ಶಿತ್ವದ ಬಜೆಟ್ ನೀಡಿರುವ ಆದರಣೀಯ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ಕೇಂದ್ರದ ನಮ್ಮ ಎನ್‌ಡಿಎ ಸರ್ಕಾರ ರಾಜ್ಯದ ಮೂಲಸೌಕರ್ಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಪೂರ್ಣ ಸಹಕಾರ ನೀಡುತ್ತಿದೆ. ಎಲ್ಲ ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳು ಕಾಲಮಿತಿಯಲ್ಲಿ ಸಾಕಾರಗೊಳ್ಳಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಇನ್ನು ಮೇಲಾದರೂ ತನ್ನ ಕೀಳು ರಾಜಕೀಯ ಹಿತಾಸಕ್ತಿ ಬದಿಗಿಟ್ಟು, ತನ್ನ ಪಾಲಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಆಗ್ರಹಿಸುತ್ತೇನೆ. ತನ್ನ ಸಂಕುಚಿತ ರಾಜಕೀಯ ಮನೋಭಾವದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಅಡೆತಡೆಗಳನ್ನು ಉಂಟುಮಾಡದೆ, ಕೇಂದ್ರದೊಂದಿಗೆ ಸಮನ್ವಯ ಸಾಧಿಸಲಿ. ರಾಜ್ಯದ ಸಮಗ್ರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಲಿ ಎನ್ನುವುದು ರಾಜ್ಯದ ಜನರ ನಿರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಕನ್ನಡಿಗರ ವಿರೋಧ
ಇನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಟ್ವೀಟ್‌ಗೆ ಕನ್ನಡಿಗರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಯೋಜನೆಯಿಂದ ಕನ್ನಡಿಗರಿಗೆ ಲಾಭವಿಲ್ಲ. ಈ ರೈಲಗಳು ಕರ್ನಾಟಕಕ್ಕಿಂತ ಬೇರೆ ರಾಜ್ಯಗಳಲ್ಲಿ ಹೆಚ್ಚು ಸಂಚರಿಸುತ್ತದೆ ಎಂದು ಹಲವರು ವಾದ ಮಂಡಿಸಿದ್ದಾರೆ.
ಬೆಂಗಳೂರು- ಪುಣೆ-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಜನಾಂದೋಲನ
ಬೆಂಗಳೂರು- ಪುಣೆ-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಜನಾಂದೋಲನ ಪ್ರಾರಂಭಿಸುವುದಾಗಿ ಸಚಿವ ಎಂ.ಬಿ ಪಾಟೀಲ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ರೈಲ್ವೆ ಹೈಸ್ಪೀಡ್ ಕಾರಿಡಾರ್ ಗಳಿಗಿಂತ ಮುಖ್ಯವಾಗಿ ಘೋಷಣೆಯಾಗಬೇಕಾಗಿದ್ದು ಮುಂಬೈ-ಪುಣೆ-ಬೆಂಗಳೂರು ಕಾರಿಡಾರ್. ಇದರ ಮಹತ್ವ ಅರಿಯದೆ ನಿರ್ಲಕ್ಷಿಸಲಾಗಿದೆ. ಪೂರಕ ಬಜೆಟ್‌ನಲ್ಲಾದರೂ ಈ ಬಗ್ಗೆ ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕಕ್ಕೆ ಅನುಕೂಲವಾಗುವ ಈ ನಿರ್ಧಾರಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು, ಸಚಿವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಕಾರಿಡಾರ್ ಘೋಷಣೆಗಾಗಿ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications