Bengaluru Habba 2025: "ಬೆಂಗಳೂರು ಹಬ್ಬ" ಸಂಭ್ರಮ ಇಂದಿನಿಂದ, ಏನಿದರ ವಿಶೇಷ ?
Bengaluru Habba 2025: ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 50 ಉದ್ಯಾನವನಗಳ ಅಭಿವೃದ್ದಿ ಹಾಗೂ ಉನ್ನತೀಕರಣ ಮಾಡಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ "ಬೆಂಗಳೂರು ಹಬ್ಬ" ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶನಿವಾರ (ಮೇ 17)ದಂದು ವಿದ್ಯುಕ್ತ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪಾಲಿಕೆಯ ತೋಟಗಾರಿಕಾ ವಿಭಾಗದಿಂದ ಉದ್ಯಾನವನಗಳ ನಿರ್ವಹಣೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ 1,287 ಉದ್ಯಾನವನಗಳು ಬರಲಿದೆ. ಎಲ್ಲಾ ಉದ್ಯಾನವನಗಳಲ್ಲಿ ಹಸಿರೀಕರಣ, ಫೆನ್ಸಿಂಗ್ ಮಾಡಿದ್ದು, ಉದ್ಯಾನವನಗಳಲ್ಲಿ ನಾಗರಿಕರಿಗೆ ಕೂರಲು ಆಸನಗಳ ವ್ಯವಸ್ಥೆ ಹಾಗೂ ಇನ್ನಿತರೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಇರುವ ಎಲ್ಲಾ ಉದ್ಯಾನವನಗಳಲ್ಲಿಯ ಉನ್ನತೀಕರಣ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಉದ್ಯಾನವನಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದ ನಾಗರಿಕರು ಉದ್ಯಾನವನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಂದು ಅಧಿಕ ಸಮಯ ಕಳೆಯಬೇಕು, ಪರಿಸರವನ್ನು ಆನಂದಿಸಬೇಕೆಂಬ ಉದ್ದೇಶದಿಂದ ಎಲ್ಲಾ ಉದ್ಯಾನವನಗಳ ಸಮಯವನ್ನು ಬೆಳಿಗ್ಗೆ 5 ರಿಂದ ರಾತ್ರಿ 10 ಗಂಟೆಯವರೆಗೆ ತೆರೆಯಲಾಗಿರುತ್ತದೆ. ನಿಮ್ಮ ಹತ್ತಿರದಲ್ಲಿರುವ ಉದ್ಯಾನವನಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ, ಇತರರಿಗೂ ಸ್ವಚ್ಛತೆ ಕಾಪಾಡಲು ಅರಿವು ಮೂಡಿಸಲು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಪಾರ್ಕ್‌ಗಳಿಗೆ ಬರುವ ಸಾರ್ವಜನಿಕರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲ ಹಾಗೂ ಮನರಂಜನೆ ನೀಡುವ ಉದ್ದೇಶದಿಂದ ಉದ್ಯಾನವನಗಳಲ್ಲಿ "ಬೆಂಗಳೂರು ಹಬ್ಬ" ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಮ್ಮ ಪಾರಂಪರಿಕ ಸಂಸ್ಕೃತಿ, ಕಲೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಡೊಳ್ಳುಕುಣಿತ, ಜಾನಪದ ಗಾಯನ, ಸುಗಮ ಸಂಗೀತ ಹಾಗೂ ಜಾನಪದ ಕಲಾತಂಡಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.
ವರ್ಷವಿಡೀ ಕಾರ್ಯಕ್ರಮ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 27 ಉದ್ಯಾನವನಗಳಲ್ಲಿ ಇಂದಿನಿಂದ ಮಾರ್ಚ್-2026 ರವರೆಗೆ ವರ್ಷವಿಡೀ ಸಾಂಸ್ಕೃತಿಕ ಮತ್ತು ಮಕ್ಕಳಿಗೆ ಉತ್ತೇಜಿಸುವ ಕಲೆಗಳ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾಗೃತಿ ಜಾಥಾ: ಬೆಂಗಳೂರು ಹಬ್ಬದ ಅಂಗವಾಗಿ ಕಲಾತಂಡಗಳನ್ನು ಒಳಗೊಂಡಂತೆ ರಾಮಕೃಷ್ಣ ಮಠ ವೃತ್ತದಿಂದ ಬ್ಯೂಗಲ್ ರಾಕ್ ಉದ್ಯಾನವನದವರೆಗೆ ಜಾಗೃತಿ ಜಾಥಾ ನಡೆಸಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಏನಿದು ಬೆಂಗಳೂರು ಹಬ್ಬ: ಬೆಂಗಳೂರಿನ ಉದ್ಯಾನವನಗಳಿಗೆ ವೀಕ್ಷಿಸಲು ಬರುವಂತಹ ಸಾರ್ವಜನಿಕರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲೆಂದು ಉದ್ಯಾನವನಗಳಲ್ಲಿ "ಬೆಂಗಳೂರು ಹಬ್ಬ" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಪಾರಂಪರಿಕ ಸಂಸ್ಕೃತಿ, ಕಲೆಗಳು ಮತ್ತು ಇನ್ನಿತರ ಕಲಾ ಚಟುವಟಿಕೆಗಳಾದ ಡೊಳ್ಳುಕುಣಿತ, ಜಾನಪದ ಗಾಯನ, ಸುಗಮ ಸಂಗೀತ ಮತ್ತು ಜಾನಪದ ಕಲಾತಂಡಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.
ಇನ್ನು ಈ ವೇಳೆ ಮಾಜಿ ಮೇಯರ್ ಸತ್ಯ ನಾರಾಯಣ್, ತೋಟಗಾರಿಕಾ ಉಪ ನಿರ್ದೇಶಕರಾದ ಚಂದ್ರಶೇಖರ್, ತೋಟಗಾರಿಕಾ ವಿಭಾಗದ ವಲಯ ಮಟ್ಟದ ಅಧಿಕಾರಿಗಳು, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.












Click it and Unblock the Notifications