Bengaluru Pothole Issues: ಎರಡು ರಾತ್ರಿಯಲ್ಲಿ 700 ರಸ್ತೆಗುಂಡಿಗಳಿಗೆ ಮುಕ್ತಿ: 5ಟನ್ ಪ್ಲಾಸ್ಟಿಕ್ ವಶ
ಬೆಂಗಳೂರು, ಸೆಪ್ಟಂಬರ್ 27: ಬೆಂಗಳೂರು ಇತ್ತೀಚೆಗೆ ರಸ್ತೆ ಸಂಚಾರ ದಟ್ಟಣೆಗೆ (Bengaluru Traffic Jam) ಮಾತ್ರವಲ್ಲದೇ ಇಲ್ಲಿರುವ ರಸ್ತೆಗುಂಡಿ (Pothole Issues) ಸಮಸ್ಯೆಯಿಂದಾಗಿ ಸುದ್ದಿಯಾಗಿತ್ತು. ಕೂಡಲೇ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಭೆ ನಡೆಸಿ ಕ್ರಮಕ್ಕೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು ನಗರ ಐದು ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚಿಸುವ ಕೆಲಸಕ್ಕೆ ವೇಗ ನೀಡಲಾಗಿದೆ.
ಸದ್ಯ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 51 ರಸ್ತೆಗಳಲ್ಲಿ ರಸ್ತೆಗುಂಡಿಗೆ ತೇಪೆ ಹಾಕಲಾಗಿದೆ. ಅಂದರೆ ಈ ಪಾಲಿಕೆ ಅಡಿಯಲ್ಲಿ 48.90 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 701 ರಸ್ತೆಗುಂಡಿಗಳನ್ನು ಮುಚ್ಚದಲಾಗಿದೆ. ಈ ಮೂಲಕ 31,783 ಚದರ ವಿಸ್ತೀರ್ಣದ ಪ್ಯಾಚ್ ವರ್ಕ್ ಮಾಡಿದಂತಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿಮುಕ್ತ ರಸ್ತೆಗಳನ್ನಾಗಿಸಲು ಕ್ರಮ ವಹಿಸಲಾಗುತ್ತಿದೆ . ಕೇಂದ್ರ ನಗರಪಾಲಿಕೆ ವ್ಯಾಪ್ತಿ ವಾರ್ಡ್ ವಾರು ರಸ್ತೆಗಳ ಪಟ್ಟಿ ಮಾಡಿಕೊಂಡು ಗುಂಡಿ ಬಿದ್ದ, ಹಾಳಾದ ರಸ್ತೆಗಳನ್ನು ಗುರುತಿಸಲಾಗಿದೆ. ಬಳಿಕ ಒಂದೊಂದೆ ಕಡೆಗಳಲ್ಲಿ ಡಾಂಬರೀಕರಣ, ಪ್ಯಾಚ್ ವರ್ಕ್, ಗುಂಡಿಗಳನ್ನು ಮುಚ್ಚುವ ಕುರಿತಂತೆ ನಿರಂತರವಾಗಿ ಸಭೆಗಳನ್ನು ನಡೆಸಿ, ಸ್ಥಳ ತಪಾಸಣೆ ಮಾಡಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರ ಮೇರೆಗೆಹಾಳಾದ ರಸ್ತೆಗಳ ದುರಸ್ಥಿಪಡಿಸುವ ಕಾಮಗಾರಿ ಚುರುಕಿನಿಂದ ಸಾಗಿದೆ. ಗುಂಡಿಮುಕ್ತ ರಸ್ತೆಯನ್ನಾಗಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ಕೊಟ್ಟರು.
ಸಿ.ವಿ. ರಾಮನ್ ನಗರ ವಿಭಾಗದ ಸುರಂಜನ್ ದಾಸ್ ರಸ್ತೆ, ಬಿಇಎಂಎಲ್ ಮುಖ್ಯ ರಸ್ತೆ, ಓಲ್ಡ್ ಮದ್ರಾಸ್, ರಿಚ್ಮಂಡ್ ರಸ್ತೆ, ಕಾಮರಾಜ್ ರಸ್ತೆ, ಹೊಸೂರು ರಸ್ತೆ, ಮಡಿವಾಳ, ವಿಕ್ಟೋರಿಯಾ ರಸ್ತೆ, ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ, ಎಂ.ಜಿ. ರಸ್ತೆ, ಚಿಕ್ಕಬಜಾರ ರಸ್ತೆ, ವಸಂತನಗರದ ಅರಮನೆ ರಸ್ತೆ, ಬಂಜಾರಾ ಭವನ ರಸ್ತೆ, ಕುಮಾರ ಪಾರ್ಕ್ ಪೂರ್ವ ರಸ್ತೆ, ಮೈಸೂರು ರಸ್ತೆ ಮೇಲು ಸೇತುವೆಯಲ್ಲಿ ಕಳೆದ 2 ದಿನಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆದಿದೆ. ಪ್ಯಾಚ್ ವರ್ಕ್, ಮೈಲ್ಮೈ ರಸ್ತೆ ಡಾಂಬರೀಕರಣ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಮೋಟಾರೆಬಲ್ ರಸ್ತೆಗಳನ್ನಾಗಿ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ವಹಿಸಲಾದೆ ಎಂದು ಹೇಳಿದರು.
5 ಟನ್ ಏಕಬಳಕೆ ಪ್ಲಾಸ್ಟಿಕ್ ವಶ: ₹10 ಲಕ್ಷ ದಂಡ
ಬೆಂಗಳೂರನ್ನು ಏಕಬಳಕೆ ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಬೆಂಗಳೂರು ಘನತ್ಯಾಜ್ಯ ನಿಗಮ ನಿಯಮಿತದ ಸಿಇಓ ಕರೀಗೌಡ ಅವರು ತಿಳಿಸಿದ್ದಾರೆ. ನಗರದ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಫರ್ಲ್ ಪಲಿಫಿಲಂ ಮ್ಯಾನುಫ್ಯಾಕ್ಚರರ್ ದಾಸ್ತಾನು ಘಟಕದ ಮೇಲೆ ಇಂದು ದಾಳಿ ನಡೆಸಲಾಯಿತು. 5 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು ₹10 ಲಕ್ಷ ದಂಡ ವಿಧಿಸಲಾಗಿದೆ. ಜೊತೆಗೆ, ಮತ್ತೆ ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಘಟಕದ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
ಚಾಮರಾಜಪೇಟೆಯ ಟಿಪ್ಪುನಗರ ವ್ಯಾಪ್ತಿಯಲ್ಲಿರುವ ಈ ಘಟಕಕ್ಕೆ ಈ ಹಿಂದೆ ಅಧಿಕಾರಿಗಳು ಭೇಟಿ ನೀಡಿ, ಒಮ್ಮೆ ಬಳಸುವ ಪ್ಲಾಸ್ಟಿಕ್ ಉಪಯೋಗಿಸದಂತೆ ಸೂಚನೆ ನೀಡಿದ್ದರು. ನಿಗಮದಿಂದ ಎಚ್ಚರಿಕೆ ನೀಡಿದರೂ ಸಹ ಏಕಬಳಕೆ ಪ್ಲಾಸ್ಟಿಕ್ ಉಪಯೋಗಿಸುತ್ತಿರುವುದು ಕಂಡುಬಂದ ಕಾರಣ ನಿಗಮ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಜಂಟಿಯಾಗಿ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆದು, ದಂಡ ವಿಧಿಸಲಾಯಿತು ಎಂದು ಜಿಬಿಎ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications