ಕೆಲಸ ಮಾಡಲು ವಿಫಲರಾದ ಅಧಿಕಾರಿ, ನೌಕರರ ಮೇಲೆ ಅಮಾನತು & ಶಿಸ್ತು ಕ್ರಮ: ಜಿಬಿಎ ಮುಖ್ಯ ಆಯುಕ್ತರಿಗೆ ಅಧಿಕಾರ
ಕರ್ನಾಟಕ ಸರ್ಕಾರವು ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಸೂಚನೆಯನ್ನು ಕೊಟ್ಟಿದೆ. ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಗೊಂದಲಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಮಹತ್ವದ ಆದೇಶವನ್ನು ಮಾಡಲಾಗಿದೆ. ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಲು ವಿಫಲರಾದ ಹಾಗೂ ತರಬೇತಿಗಳಿಗೆ ಗೈರಾದಂತಹ ಅಧಿಕಾರಿ/ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸಚಿವ ಸಂಪುಟವು ಜಿಬಿಎ ಮುಖ್ಯ ಆಯುಕ್ತರಿಗೆ ಕೊಟ್ಟಿದೆ.
ಕರ್ನಾಟಕ ರಾಜ್ಯದ ಸಾರ್ವಜನಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ನಡೆಸಲಾಗುವ ಸಮೀಕ್ಷೆ ಕಾರ್ಯಕ್ಕಾಗಿ ಸರ್ಕಾರದ ಸೇವೆಗೆ ಸೇರಿದ ಗ್ರೂಪ್ ಬಿ ಮತ್ತು ಸಿ ವೃಂದದ ಅಧಿಕಾರಿ/ನೌಕರರನ್ನು ನಿಯೋಜಿಸಿಕೊಳ್ಳಲು ಅನುಮೋದಿಸಲಾಗಿದೆ.

ಸಮೀಕ್ಷಾ ಕಾರ್ಯಕ್ಕಾಗಿ ನೇಮಕಗೊಂಡ ಅಧಿಕಾರಿಗಳು/ನೌಕರರು ಸಮೀಕ್ಷೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು ಅವರನ್ನು ಬಿಡುಗಡೆ ಮಾಡುವಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ನಿಯೋಜಿಸಲಾದ ಸಮೀಕ್ಷೆ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದರೆ, ಅಂತಹ ಅಧಿಕಾರಿಗಳು/ನೌಕರರ ವಿರುದ್ಧ ಶಿಸ್ತು ಕ್ರಮ ಮತ್ತು ಅಮಾನತುಗೊಳಿಸುವ ಅಧಿಕಾರವನ್ನು ಜಿಬಿಎ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸಿ ಆದೇಶಿಸಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025ರ ಪ್ರಗತಿ ಕುರಿತ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ಕೊಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಇಂದಿನಿಂದ ಆರಂಭವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯಲ್ಲಿ ಸುಮಾರು 50ಲಕ್ಷ ಮನೆಗಳಿವೆ. ಆದಷ್ಟು ಬೇಗನೆ ಗಣತಿ ಕಾರ್ಯವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕಿದೆ. ರಾಜ್ಯದ ಪ್ರತಿಯೊಂದು ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಈ ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳ ಕಾರಣ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇಂದಿನಿಂದ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ಜಿಲ್ಲಾವಾರು ಕನಿಷ್ಠ ಶೇಕಡಾ 10ರಷ್ಟು ಸಮೀಕ್ಷೆ ಗುರಿಯನ್ನು ಸಾಧಿಸಬೇಕು. ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮೀಕ್ಷೆ ಪ್ರಗತಿಯ ಪರಿಶೀಲನೆ ನಡೆಸಬೇಕು ಮತ್ತು ಸಕ್ರಿಯವಾಗಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎನ್ನುವುದು ಸೇರಿದಂತೆ ಹಲವು ಪ್ರಮುಖ ಸೂಚನೆಗಳನ್ನು ಕೊಡಲಾಗಿದೆ.












Click it and Unblock the Notifications