ಬೆಂಗಳೂರು | 5 ದಿನಗಳಲ್ಲಿ 5.91 ಲಕ್ಷ ಗಣೇಶ ಮೂರ್ತಿ ವಿಸರ್ಜನೆ: ವಲಯವಾರು ಪಟ್ಟಿ ಇಲ್ಲಿದೆ
ಬೆಂಗಳೂರು, ಸೆಪ್ಟಂಬರ್ 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಐದು ದಿನದ ಗಣೇಶ ಸಂಭ್ರಮಾಚರಣೆ ತೆರೆ ಬಿದ್ದಿದೆ. ಅಕ್ಟೋಬರ್ 31 ರಂದು ಭಾನುವಾರ ಭಾರೀ ಪ್ರಮಾಣದಲ್ಲಿ ಗಣೇಶ ಮೂರ್ತಿಗಳನ್ನು ಭಕ್ತರು ವಿಸರ್ಜಿಸಿದ್ದಾರೆ. ಭಾನುವಾರ ಹಾಗೂ ಐದು ದಿನಗಳಲ್ಲಿ ವಿಸರ್ಜಿಸಿದ ಗಣೇಶ ಮೂರ್ತಿಗಳು ಎಷ್ಟು? ವಲಯವಾರು ಅಂಕಿ-ಸಂಖ್ಯೆ ವಿವರ ಇಲ್ಲಿದೆ.
ಬಿಬಿಎಂಪಿ ಅಧಿಕೃತ ಮಾಹಿತಿ ಪ್ರಕಾರ, ಭಾನುವಾರ ಒಂದೇ ದಿನ ಬರೋಬ್ಬರಿ 1.29 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಕಳೆದ 5 ದಿನಗಳಲ್ಲಿ ಒಟ್ಟು 5.91 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪಾಲಿಕೆಯ ಎಲ್ಲಾ ವಲಯಗಳಲ್ಲಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ಸಂಚಾರಿ ವಾಹನ (ಮೊಬೈಲ್ ಟ್ಯಾಂಕರ್) ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್‌ಗಳ ಅಳವಡಿಕೆ, ನುರಿತ ಈಜುಗಾರರ/ಜೀವ ರಕ್ಷಕರ ನಿಯೋಜನೆ, ಸಿಸಿಟಿವಿ ಅಳವಡಿಕೆ, ವಿದ್ಯುತ್ ದೀಪಗಳ ಸೌಲಭ್ಯ ಹಾಗೂ ಪೆಂಡಾಲ್ ವ್ಯವಸ್ಥೆ ಮಾಡಿಕೊಂಡು ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಪ್ರಮುಖ ಕಲ್ಯಾಣಿಗಳ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಲ್ಯಾಣಿಗಳ ಬಳಿ ಗಣೇಶ ವಿಸರ್ಜನೆ ಮಾಡಿದ ವೇಳೆ ಸಂಗ್ರಹವಾಗುವ ತ್ಯಾಜ್ಯವನ್ನು ಆಟೋ ಟಿಪ್ಪರ್ ಗಳ ಮೂಲಕ ವಿಲೇವಾರಿ ಮಾಡಲಾಗಿದೆ.
5,91,683 ಗಣೇಶ ಮೂರ್ತಿಗಳ ವಿಸರ್ಜನೆ
ಬೆಂಗಳೂರಿನಲ್ಲಿ ಗಣೇಶ ಪ್ರತಿಷ್ಠಾಪನೆಯ ಮೊದಲು ದಿನ ಆಗಸ್ಟ್ 27 ರಂದು ಬುಧವಾರ 2,19,153 ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ. ನಂತರ ಆ. 28 ರಂದು 73,959 ಗಣೇಶ ಮೂರ್ತಿಗಳು, ಆಗಸ್ಟ್ 29 ರಂದು 1,14,402 ಗಣೇಶ ಮೂರ್ತಿಗಳನ್ನು ನೀರಲ್ಲಿ ಬಿಡಲಾಗಿದೆ. ಆಗಸ್ಟ್ 30 ರಂದು 54,653 ಗಣೇಶ ಮೂರ್ತಿಗಳು ಹಾಗೂ 31 ರಂದು 1,29,516 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಒಟ್ಟು 5 ದಿನಗಳಲ್ಲಿ ಬರೋಬ್ಬರಿ 5,91,683 ಲಕ್ಷ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಕಲ್ಯಾಣಿಗಳ ಸ್ವಚ್ಛತೆ ಕಾರ್ಯ
ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿಗಳಲ್ಲಿ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದು, ಆ ಕಲ್ಯಾಣಿಗಳಲ್ಲಿ ಹೂಳೆತ್ತುವ ಕಾರ್ಯ ನಡೆಯಲಿದೆ. ಅದರಂತೆ ಪ್ರಮುಖ ಕಲ್ಯಾಣಿಗಳಲ್ಲಿ ಮೇಲೆ ತೇಲುವಂತ ವಸ್ತುಗಳನ್ನು ಪ್ರತಿನಿತ್ಯ ಮುಂಜಾನೆಯೇ ತೆರವುಗೊಳಿಸಲಿದ್ದಾರೆ.
ಯಡಿಯೂರು ಕೆರೆ ಕಲ್ಯಾಣಿಯಲ್ಲಿ 10ನೇ ಸೆಪ್ಟೆಂಬರ್ 2025 ರಂದು, ಹೆಬ್ಬಾಳ ಕೆರೆ ಕಲ್ಯಾಣಿಯಲ್ಲಿ ನಾಳೆ (02-09-2025) ಹಾಗೂ ಹಲಸೂರು ಕೆರೆ ಕಲ್ಯಾಣಿಯಲ್ಲಿ ಇಂದು (01-09-2025) ಮತ್ತು ನಾಳೆ (02-09-2025) ಹೂಳೆತ್ತುವ ಕಾರ್ಯವಿದ್ದು, ಈ ವೇಳೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ.
ಭಾನುವಾರದ ವಲಯವಾರು ಮೂರ್ತಿ ವಿಸರ್ಜನೆ ಪಟ್ಟಿ
* ಪೂರ್ವ ವಲಯ: 61,680
* ಪಶ್ಚಿಮ ವಲಯ: 9,050
* ದಕ್ಷಿಣ ವಲಯ: 42,274
* ಬೊಮ್ಮನಹಳ್ಳಿ ವಲಯ: 1,862
* ದಾಸರಹಳ್ಳಿ ವಲಯ: 231
* ಮಹದೇವಪುರ ವಲಯ: 3,612
* ಆರ್.ಆರ್.ನಗರ ವಲಯ: 3,329
* ಯಲಹಂಕ ವಲಯ: 7,478
ಒಟ್ಟು: 1,29,516












Click it and Unblock the Notifications