Bengaluru:ಕೆಲಸ ಬೇಕು ಅಂತ ಬೆಂಗಳೂರಿಗೆ ಬಂದಿರೆನು? ಪಂಗನಾಮ ಹಾಕ್ತಾರೆ ಜೋಕೆ!
ಬೆಂಗಳೂರು ಫೆಬ್ರವರಿ 21: ಕೆಲಸ ಬೇಕು ಅಂತ ಅದೆಷ್ಟೋ ಜನ ಊರು ಬಿಟ್ಟು ಬೇರೆ ಸ್ಥಳಗಳಿಗೆ ಹೋಗುತ್ತಾರೆ. ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಕೆಲಸವನ್ನು ಅರಸಿ ಬೆಂಗಳೂರಿಗೆ ಬರುವ ಜನರ ಸಂಖ್ಯೆ ತುಂಬಾ ಹೆಚ್ಚು. ಇಂಥಹವರಿಗೆ ಚಳ್ಳೇಹಣ್ಣು ತಿನಿಸುವ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದೆ.
ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿಗೆ ನಿತ್ಯ ಉದ್ಯೋಗ ಬಯಸಿ ನೂರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಅಂಥವರನ್ನೇ ಟಾರ್ಗೆಟ್ ಮಾಡುವ ಕಿಲಾಡಿ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಕಿಲಾಡಿ ದಂಪತಿ ಮಾಡುತ್ತಿದ್ದ ಕೆಲಸ ಏನು? ಯಾಕಾಗಿ ಇವರನ್ನು ಬಂಧಿಸಲಾಯ್ತು ಎನ್ನುವ ಸುದ್ದಿ ತಿಳಿದರೆ ನೀವೆಲ್ಲಾ ದಂಗಾಗಿ ಹೋಗ್ತೀರಾ.

ಬೆಂಗಳೂರಿನಲ್ಲಿ ಕೆಲಸ ಕೊಡಿಸ್ತೀವೆಂದು ಹೇಳಿ ಒಂದು ಸಾವಿರ ಅಲ್ಲ, ಒಂದು ಲಕ್ಷವಲ್ಲ ಬರೋಬ್ಬರಿ 34 ಲಕ್ಷ ರೂಪಾಯಿ ಹಣವನ್ನು ದಂಪತಿಗಳು ವಂಚಿಸಿದ್ದಾರೆ. ಅಷ್ಟಕ್ಕೂ ಇವರಿಗೆ ಇಷ್ಟೊಂದು ದುಡ್ಡು ಕೊಡುವವರು ಎಲ್ಲಿಂದ ಸಿಕ್ಕರು ಅಂತ ಕೇಳಿದ್ರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ. ಈ ದಂಪತಿಗಳಿಗೆ ಕೆಲಸ ಬಯಸಿ ಬರುವವರು ಸಿಗುವುದು ದೇವಸ್ಥಾನದಲ್ಲಿ.
ಮೊದಲು ದೇವಸ್ಥಾನಕ್ಕೆ ಬರುವವರನ್ನು ಟಾರ್ಗೆಟ್ ಮಾಡಿ ಪರಿಚಯ ಮಾಡಿಕೊಳ್ತಾರೆ. ಆಮೇಲೆ ನಮಗೆ ಅವರು ಗೊತ್ತು, ಇವರು ಗೊತ್ತು ಅಂತ ನಂಬಿಸಿಬಿಡ್ತಾರೆ. ಹೀಗೆ ಮೂವರಿಂದ ಬರೋಬ್ಬರಿ 34 ಲಕ್ಷ ಹಣವನ್ನು ನಂಬಿಸಿ ವಂಚಿಸಿದ್ದಾರೆ. ಇದು ಪೊಲೀಸ್ ತನಿಖೆಯಿಂದ ಒಂದೊಂದಾಗಿ ಬಯಲಾಗುತ್ತಿದೆ.

ಕಿಲಾಡಿ ದಂಪತಿಗಳ ಖತರ್ನಾಕ್ ಸ್ಕೆಚ್ ಕಂಡು ಪೊಲೀಸರೇ ಆಶ್ಚರ್ಯಗೊಂಡಿದ್ದಾರೆ. ನಿರುದ್ಯೋಗಿಗಳನ್ನೇ ಟಾರ್ಗೇಟ್ ಮಾಡುವ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಸತ್ಯ ಹೊರಹಾಕಿಸುತ್ತಿದ್ದಾರೆ.
ಅಂದಹಾಗೆ ಇವರಿಬ್ಬರು ವಿದ್ಯಾರಣ್ಯಪುರದವರು. ವಂಚನೆ ಮಾಡಿದ ಹಣದಿಂದ ಇವರಿಬ್ಬರು ಚಿನ್ನಾಭರಣವನ್ನು ಖರೀದಿಸಿದ್ದರು ಎನ್ನಲಾಗುತ್ತಿದೆ. ಸದ್ಯ ವಂಚನೆಯ ಹಣದಲ್ಲಿ ಖರೀದಿ ಮಾಡಿದ ಚಿನ್ನಾಭರಣ, ಮೊಬೈಲ್, ಡೆಬಿಟ್ ಕಾರ್ಡ್‌ಗಳು ಹಾಗೂ ನಕಲಿ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರದಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ ಮತ್ತೊಂದು ಹಣ ವಂಚನೆ ಕೇಸ್
ಬ್ಯಾಂಕ್ ಖಾತೆ ತೆರೆದು ಸಾಮಾಜಿಕ ಜಾಲತಾಣಗಳಲ್ಲಿ ಅಮಾಯಕರನ್ನು ಸಂಪರ್ಕ ಮಾಡಿ ಲಾಭದ ಆಮಿಷ ನೀಡಿ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧನ ಮಾಡಿ ಕೃತ್ಯಕ್ಕೆ ಬಳಸಿದ ಪರಿಕರಗಳು ಹಾಗೂ ಐದು ಕೋಟಿ ರೂಪಾಯಿ ಹಣವನ್ನು ಫ್ರೀಜ್ ಮಾಡಲಾಗಿದೆ.
ಲೋನ್ ಆಪ್ ಮೂಲಕ ಹಂತ ಹಂತವಾಗಿ ಹೂಡಿಕೆ ಮಾಡಿಸಿಕೊಂಡು ಒಟ್ಟು 8,50,000 ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದ ಕುರಿತಾಗಿ ಬೆಂಗಳೂರು ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರುದಾರರು ದಿ ವೈನ್ ಗ್ರೂಪ್ ಆಪ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಅಸಲಿಯಾಗಲಿ ಬಡ್ಡಿಯನ್ನಾಗಲಿ ನೀಡದೆ ಮೋಸ ಮಾಡಲಾಗಿತ್ತು.












Click it and Unblock the Notifications