ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ: ಕ್ಲಾರಿಟಿ ಕೊಟ್ಟ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರಿನ ಟ್ರಾಫಿಕ್ ಮತ್ತು ಸಾರ್ವಜನಿಕರ ಸಂಚಾರ ವ್ಯವಸ್ಥೆಯನ್ನೇ ಬದಲಿಸಬಲ್ಲ ಸರ್ಕಾರದ ಈ ಒಂದು ಮಹತ್ವದ ತೀರ್ಮಾನ ಈಗ ಭಾರೀ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ನಗರವನ್ನಾಗಿ ಮಾಡಲು ಪಾದಾಚಾರಿಗಳ ಹಕ್ಕು ಮತ್ತು ಬಡ ವ್ಯಾಪಾರಿಗಳ ಹಿತರಕ್ಷಣೆ ಎರಡನ್ನೂ ಬ್ಯಾಲೆನ್ಸ್ ಮಾಡುವ ಇಂತಹದೊಂದು ಪ್ರಮುಖ ನಿಯಮ ತರಲು ಸರ್ಕಾರ ಮುಂದಾಗಿದೆ. ಆದರೆ, ನಾಲ್ಕು ಗೋಡೆಗಳ ಮಧ್ಯೆ ನಡೆದ ಸಭೆಯಲ್ಲಿ ಈ ನಿಯಮಕ್ಕೆ ಒಪ್ಪಿಗೆ ಸೂಚಿಸಿದ್ದ ಬಿಜೆಪಿ ನಾಯಕರು, ಈಗ ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ನಿಂತು ನಾಟಕವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಇಷ್ಟಕ್ಕೂ ಏನಿದು ಹೊಸ ನಿಯಮ? ಇದರಿಂದ ಬೆಂಗಳೂರಿಗರಿಗೆ ಸಿಗೋ ಲಾಭವೇನು?
ಪ್ರತ್ಯೇಕ ಸ್ಥಳ ನಿಗದಿ
ಬೆಂಗಳೂರಿನ ಬಹುತೇಕ ಮುಖ್ಯ ರಸ್ತೆಗಳಲ್ಲಿ ಪಾದಾಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದರಿಂದ ಜನಸಾಮಾನ್ಯರು ರಸ್ತೆಯ ಮೇಲೆ ನಡೆಯುವಂತಾಗಿದೆ. ಇದನ್ನು ತಡೆಗಟ್ಟಲು, ಸರ್ಕಾರವು ನಗರದ ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ 'ವೆಂಡಿಂಗ್ ಜೋನ್' (ವ್ಯಾಪಾರ ವಲಯ) ಮತ್ತು 'ನೊನ್-ವೆಂಡಿಂಗ್ ಜೋನ್' (ವ್ಯಾಪಾರ ನಿಷೇಧಿತ ವಲಯ) ಎಂದು ವರ್ಗೀಕರಣ ಮಾಡಲಿದೆ. ಮುಖ್ಯ ರಸ್ತೆಗಳನ್ನು ಮುಕ್ತಗೊಳಿಸಿ, ಪರ್ಯಾಯವಾಗಿ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ.

ನೋಂದಾಯಿತ ವ್ಯಾಪಾರಿಗಳಿಗೆ ಮಾತ್ರ ಆದ್ಯತೆ
ಯಾರೂ ತಮಗೆ ಇಷ್ಟಬಂದಲ್ಲಿ ಅಂಗಡಿ ಇಡುವಂತಿಲ್ಲ. ಜಿಬಿಎ ವತಿಯಿಂದ ಅಧಿಕೃತವಾಗಿ ಸಮೀಕ್ಷೆ ನಡೆಸಿ, ಗುರುತಿನ ಚೀಟಿ (ID Card) ಪಡೆದುಕೊಂಡಿರುವ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಈ ಪ್ರತ್ಯೇಕ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಮೊದಲ ಆದ್ಯತೆ ನೀಡಲಾಗುತ್ತದೆ. ಇದರಿಂದ ಅನಧಿಕೃತ ನುಸುಳುವಿಕೆ ಮತ್ತು ರಸ್ತೆಬದಿಯ ಮಾಫಿಯಾಗೆ ಬ್ರೇಕ್ ಬೀಳಲಿದೆ.
ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕುವ ಬೆಂಗಳೂರಿಗರಿಗೆ ಕನಿಷ್ಠ ಪಾದಚಾರಿ ಮಾರ್ಗಗಳಲ್ಲಾದರೂ ನೆಮ್ಮದಿಯಾಗಿ ನಡೆಯಲು ಜಾಗ ಸಿಗಬೇಕು ಎಂಬುದು ಸರ್ಕಾರದ ಮುಖ್ಯ ಧ್ಯೇಯ. ಈ ನಿಯಮದಿಂದಾಗಿ ಫುಟ್ಪಾತ್ಗಳು ಸಂಪೂರ್ಣವಾಗಿ ಸಾರ್ವಜನಿಕರ ನಡಿಗೆಗೆ ಮುಕ್ತವಾಗುತ್ತವೆ. ಶಾಲಾ ಮಕ್ಕಳು, ಹಿರಿಯ ನಾಗರಿಕರು ಮತ್ತು ಅಂಗವಿಕಲರು ಜೀವ ಕೈಯಲ್ಲಿ ಹಿಡಿದು ರಸ್ತೆಯ ಮೇಲೆ ನಡೆಯುವುದು ತಪ್ಪುತ್ತದೆ. ಈ ನಿರ್ಧಾರ ಕೇವಲ ಪಾದಾಚಾರಿಗಳಿಗಷ್ಟೇ ಅಲ್ಲ, ಬಡ ವ್ಯಾಪಾರಿಗಳ ಹಿತರಕ್ಷಣೆಯನ್ನೂ ಒಳಗೊಂಡಿದೆ. ಪ್ರತ್ಯೇಕ ಸ್ಥಳ ಸಿಗುವುದರಿಂದ ವ್ಯಾಪಾರಿಗಳಿಗೆ ಪ್ರತಿದಿನ ಪೊಲೀಸರು ಅಥವಾ ಪಾಲಿಕೆ ಅಧಿಕಾರಿಗಳು ಬಂದು ತೆರವು ಮಾಡಿಸ್ತಾರೆ ಎನ್ನುವ ಭಯವೂ ಇರುವುದಿಲ್ಲ. ಕಾನೂನುಬದ್ಧವಾಗಿ ನಿಗದಿಪಡಿಸಿದ ಜಾಗದಲ್ಲಿ ಅವರು ನೆಮ್ಮದಿಯಿಂದ ವ್ಯಾಪಾರ ಮಾಡಬಹುದು.
ಅಂದು ಸಭೆಯಲ್ಲಿ ಒಪ್ಪಿ, ಇಂದು ಬೀದಿಯಲ್ಲಿ ನಾಟಕ: ಡಿಕೆಶಿ ವಾಗ್ದಾಳಿ
ಬೆಂಗಳೂರಿನ ಪಾದಾಚಾರಿ ಮಾರ್ಗಗಳ ಮುಕ್ತಿ ಹಾಗೂ ಬೀದಿಬದಿ ವ್ಯಾಪಾರಿಗಳ ಹಿತರಕ್ಷಣೆ ವಿಚಾರವಾಗಿ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವೆ ಜಟಾಪಟಿ ಮುಂದುವರಿದಿದೆ. ಈ ಕುರಿತು ಪೋಸ್ಟ್ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, "ಬೆಂಗಳೂರಿನ ಫುಟ್ಪಾತ್ಗಳನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸಲು ಮತ್ತು ಬೀದಿಬದಿ ವ್ಯಾಪಾರಿಗಳ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ ಸರ್ಕಾರದ ಈ ನಿರ್ಧಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ಧೋರಣೆ ಖಂಡನೀಯ" ಎಂದಿದ್ದಾರೆ.
ಕಳೆದ ಮಾರ್ಚ್ 20 ತಿಂಗಳಲ್ಲಿ ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಜನಪ್ರತಿನಿಧಿಗಳೂ ಹಾಜರಿದ್ದರು. ಪಾದಚಾರಿಗಳಿಗೆ ತೊಂದರೆಯಾಗದಂತೆ ನೋಂದಾಯಿತ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡುವುದು, ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ನಿಷೇಧಿಸುವುದು, ರಾತ್ರಿ ವೇಳೆ ರಸ್ತೆಯಲ್ಲೇ ನಿಲ್ಲಿಸುವ ಗಾಡಿಗಳ ತೆರವು ಹಾಗೂ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸುವ ನಿಯಮಗಳಿಗೆ ಅಂದು ಸಭೆಯಲ್ಲಿದ್ದ ಬಿಜೆಪಿ ಸೇರಿದಂತೆ ಎಲ್ಲಾ ಶಾಸಕರು ಮತ್ತು ಸಚಿವರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದರು.
"ಅಂದು ನಾಲ್ಕು ಗೋಡೆಗಳ ಮಧ್ಯೆ ನಡೆದ ಸಭೆಯಲ್ಲಿ ನಿಯಮಗಳಿಗೆ ತಲೆಯಾಡಿಸಿ ಒಪ್ಪಿಗೆ ಕೊಟ್ಟು, ಇಂದು ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ನಿಂತು ನಾಟಕವಾಡುತ್ತಿರುವ ಬಿಜೆಪಿಯ ಎರಡು ಮುಖವನ್ನು ಜನ ಗಮನಿಸುತ್ತಿದ್ದಾರೆ" ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷಗಳದ್ದು ಸ್ವಾರ್ಥ ರಾಜಕಾರಣವಾದರೆ, ಜನಪರ ಹಾಗೂ ವ್ಯವಸ್ಥಿತ ಬೆಂಗಳೂರು ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಧ್ಯೇಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳ ನಿಯಮಾವಳಿ ಜಾರಿ ಬೆನ್ನಲ್ಲೇ ಉಂಟಾಗಿರುವ ರಾಜಕೀಯ ಚದುರಂಗದಾಟ ಈಗ ಬೆಂಗಳೂರು ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.













Click it and Unblock the Notifications