ಹುಡುಗಿ ಜೊತೆ ಕೈಕೈ ಹಿಡ್ಕೊಂಡು ಬೀದಿ ಬದಿ ಆಹಾರ ತಿನ್ನೋ ಮುನ್ನ ಎಚ್ಚರ..! ಕೇರಳದಿಂದ ಬಂದ ಈ ಆಹಾರ ಜೀವಕ್ಕೆ ತರುತ್ತೆ ಕುತ್ತು!
ಬೆಂಗಳೂರು ನವೆಂಬರ್ 9: ಬೀದಿ ಬದಿ ಸಿಗುವ ತಿಂಡಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗಳಿಗೆ ಬೀದಿ ಬದಿ ಆಹಾರ ಅಂದರೆ ತುಂಬಾನೇ ಅಚ್ಚುಮೆಚ್ಚು. ತಮ್ಮ ಸ್ನೇಹಿತರೊಂದಿಗೆ ಒಂದಿಷ್ಟು ಬಿಡುವಿನ ಸಮಯ ಕಳೆಯಲು ಬಹುತೇಕ ಜನ ಆಯ್ಕೆ ಮಾಡಿಕೊಳ್ಳುವುದು ಬೀದಿ ಬದಿ ಸಿಗುವ ಆಹಾರ ಮಳಿಗೆಗಳನ್ನ. ನೀವು ಕೂಡ ಇದೇ ಲಿಸ್ಟ್‌ನಲ್ಲಿ ಇದ್ದರೆ ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.
ಇತ್ತೀಚಿಗೆ ಬೀದಿ ಬದಿ ಸಿಗುವ ಗೋಬಿ, ಪಾನಿಪುರಿ, ಸಮೋಸ ಇನ್ನಿತರ ತಿಂಡಿಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪರಿಶೀಲನೆ ಮಾಡಿ ವರದಿ ನೀಡಿತ್ತು. ಇದೀಗ ಕೇರಳದಿಂದ ಬರುವ ಆಹಾರವೂ ಆರೋಗ್ಯಕ್ಕೆ ಕಂಟಕವಾಗಿದೆ ಎಂದು ಇಲಾಖೆ ತಿಳಿಸಿದೆ.

ಕೇರಳದಿಂದ ಬರುವ ಡ್ರೈ ಫ್ರೂಟ್ಸ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಖಾರಾ ಮಿಕ್ಚರ್ ಇಂತೆಲ್ಲಾ 31 ಆಹಾರದಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಸೇವನೆಗೆ ಯೋಗ್ಯವಲ್ಲ ಎಂದು ಇಲಾಖೆ ತಿಳಿಸಿದೆ.
ಹೌದು... ಗಡಿ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿರುವ ಆಹಾರ ಪದಾರ್ಥಗಳು ತುಂಬಾ ವಿಷಕಾರಿಯಾಗಿವೆ ಎಂದು ತಿಳಿದು ಬಂದಿದೆ. ನೆರೆ ರಾಜ್ಯ ಕೇರಳದಿಂದ ಬಂದ ಕೆಲ ಆಹಾರ ಪದಾರ್ಥಗಳನ್ನು ಗಡಿ ಜಿಲ್ಲೆ ಕೊಡಗುವಿನಲ್ಲಿ ಮಾರಾಟ ಮಾಡುವಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ವರದಿಯನ್ನು ನೀಡಿದ್ದಾರೆ.
ಗಡಿ ಭಾಗದಲ್ಲಿ ಮಾರಾಟ ಮಾಡಲಾಗುತ್ತಿದ್ದ ಕೆಲ ಆಹಾರ ಪದಾರ್ಥಗಳಾದ ಚಿಪ್ಸ್, ಮುರುಕು, ಹಲ್ವಾ, ಖಾರಾ ಮಿಕ್ಚರ್, ಡ್ರೈ ಫ್ರೂಟ್ಸ್, ಸಿಹಿತಿಂಡಿಗಳ 90 ಮಾದರಿಯನ್ನು ಸಂಗ್ರಹಿಸಿ ಇಲಾಖೆ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಎಲ್ಲಾ ಪದಾರ್ಥಗಳಲ್ಲಿ ದೇಹಕ್ಕೆ ಹಾನಿಯನ್ನುಂಟು ಮಾಡುವ ಕೃತಕ ಬಣ್ಣಗಳನ್ನು ಬಳಕೆ ಮಾಡಿರುವುದು ಕಂಡು ಬಂದಿದೆ.
ಅಲುರಾ ರೆಡ್ (Alura Red), ಕಾರ್ಮೋಸೈನ್ (Carmoisine), ಟಟ್ರೈಝನ್ (Tartrazine), ಸನ್‌ಸೆಟ್ ಯೆಲ್ಲೋ (Sunset Yellow) ಸೇರಿದಂತೆ ಅನೇಕ ಕೃತಕ ಬಣ್ಣಗಳನ್ನು ಬಳಸಿ ಆಹಾರ ತಯಾರಿಸಿರುವುದು ಗೊತ್ತಾಗಿದೆ. ಪರಿಶೀಲನೆ ವೇಳೆ ಆಹಾರ ಪದಾರ್ಥಗಳ ಪಾಕೇಟ್ ಮೇಲೆ ಮುದ್ರಿತ ದಿನಾಂಕ ಕೂಡ ನಮೋದಿಸಲಾಗಿಲ್ಲ. ಜೊತೆಗೆ ಎಲ್ಲಿಂದ ಬಂದಿದೆ? ಯಾವ ಕಂಪನಿಯಿಂದ ತಯಾರಿಸಲಾಗಿದೆ? ಆಹಾರ ಇಲಾಖೆಯ ಅನುಮೋದನೆ ಈ ಪದಾರ್ಥಗಳಿಗೆ ಇದಿಯಾ? ಇದ್ಯಾವುದು ಕೂಡ ಈ ಪಾಕೇಟ್‌ಗಳ ಮೇಲೆ ಇಲ್ಲದೇ ಇರುವುದು ಕಂಡುಬಂದಿದೆ.
ರಾಜ್ಯದಲ್ಲಿ ಸಾಲು ಸಾಲು ಹಬ್ಬದ ಪ್ರಯುಕ್ತ ಗಡಿ ಭಾಗದ ಕೊಡಗುವಿನಲ್ಲಿ ಕೆಲ ಸಿಹಿತಿಂಡಿಗಳ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ದಾಳಿ ಮಾಡಿದ ಅಧಿಕಾರಿಗಳು ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿ ಆರೋಗ್ಯಕ್ಕೆ ಹಾನಿಕಾರಕ ಎಂದಿದೆ. ದೀಪಾವಳಿ ಹಬ್ಬದ ಸಮಯದಲ್ಲಿ 151 ಸಿಹಿ ತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಇಲಾಖೆ ಪರಿಶೀಲನೆ ನಡೆಸಿದೆ. ಈ ಪೈಕಿ 143 ಮಾದರಿಗಳು ಸುರಕ್ಷಿತ ಮತ್ತು 9 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಕಂಡು ಬಂದಿದೆ.
ಹೀಗಾಗಿ ಯಾವುದೇ ಅನುಮತಿ ಇಲ್ಲದೆ ಗಡಿ ಭಾಗದ ಜಿಲ್ಲೆಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳ ಮೇಲೆ ಕಡಿವಾಣ ಹಾಕಲು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರಿಗೆ ಹಾಗೂ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ. ನೀವು ಕೂಡ ಇಂತಹ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಕೊಂಡು ತಂದು ಆರೋಗ್ಯ ಹಾಳು ಮಾಡಿಕೊಳ್ಳುವುದರಿಂದ ದೂರವಿರುವುದು ಉತ್ತಮ.












Click it and Unblock the Notifications