Greater Bengaluru: ಬಿಡದಿ ಟೌನ್‌ಶಿಪ್ ಯೋಜನೆ, ಮೊದಲ ಹೆಜ್ಜೆ ಇಟ್ಟ ಸರ್ಕಾರ
ಬೆಂಗಳೂರು, ಮಾರ್ಚ್ 12: ಕರ್ನಾಟಕ ಸರ್ಕಾರ ಬೆಂಗಳೂರು ನಗರದ ಜನ ದಟ್ಟಣೆ ಕಡಿಮೆ ಮಾಡಲು 'ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ' ಯೋಜನೆ ರೂಪಿಸಿದೆ. ಯೋಜನೆಯ ಅನ್ವಯ ಟೌನ್‌ಶಿಪ್ ನಿರ್ಮಾಣವಾಗಲಿದೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಿರ್ಮಾಣವಾಗುವ ಮೊದಲ ಟೌನ್‌ಶಿಪ್ ಕುರಿತು ಪ್ರಾಥಮಿಕ ವರದಿಯನ್ನು ಕಂಪನಿಯೊಂದು ತಯಾರು ಮಾಡಲಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಕೆಲವು ದಿನಗಳ ಹಿಂದೆ ಟೆಂಡರ್ ಆಹ್ವಾನಿಸಿದೆ. ಕಂಪನಿಗಳು ಜಿಬಿಡಿಎ ಎಕಾನಾಮಿಕ್ ಕಾರಿಡಾರ್‌ಗೆ ಮೂಲ ನಕ್ಷೆಯನ್ನು ರಚನೆ ಮಾಡಬೇಕಿದೆ. ಪ್ರಸ್ತಾವಿತ ಯೋಜನೆಗೆ ಸುಮಾರು 8,935 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. 2,742 ಎಕರೆ ಪ್ರದೇಶದಲ್ಲಿ ಎಕಾನಾಮಿಕ್ ಕಾರಿಡಾರ್ ಬರಲಿದೆ.

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ತಂತ್ರಜ್ಞಾನದಲ್ಲಿ ಮುಂದುವರೆದ ಶಾಶ್ವತವಾದ ನಗರದ ಕೇಂದ್ರವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಪಟ್ಟಣಗಳನ್ನು ಅಭಿವೃದ್ಧಿಗೊಳಿಸಲಿದೆ.
ಯಾವ-ಯಾವ ಗ್ರಾಮಗಳು: ಈ ಹೊಸ ಪಟ್ಟಣದ ಅಭಿವೃದ್ಧಿಗಾಗಿ 8,934 ಎಕರೆ ವ್ಯಾಪ್ತಿಯ 10 ಗ್ರಾಮಗಳಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಅಳ್ಳಲಸಂದ್ರ, ಕಂಚುಗಾರನಹಳ್ಳಿ ಕಾವಲ್, ಕಂಚುಗಾರನಹಳ್ಳಿ, ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಬನ್ನಿಗೆರೆ, ಬೈರಮಂಗಲ, ಮಂಡಲಹಳ್ಳಿ, ಹೊಸೂರು ಮತ್ತು ವಡೇರಹಳ್ಳಿ ಸೇರಿವೆ.
ಈ ಟೌನ್‌ಶಿಪ್‌ಗಳು 37 ಕಿ. ಮೀ. ಎಕಾನಾಮಿಕ್ ಕಾರಿಡಾರ್‌ಗಳನ್ನು ಒಳಗೊಳ್ಳಲಿವೆ. ಇದು ನೈಸ್ ರಸ್ತೆ, ಎನ್‌ಹೆಚ್ 204, ಎನ್‌ಹೆಚ್ 275 ಮತ್ತು ಎಸ್‌ಟಿಟಿಆರ್ ಸಂಪರ್ಕಿಸುವಂತೆ ನಿರ್ಮಾಣವಾಗಲಿದೆ. ಈ ರಸ್ತೆ ಗ್ರೇಡ್ ಸಪರೇಟರ್, ಫ್ಲೈ ಓವರ್‌ಗಳನ್ನು ಒಳಗೊಂಡಿದೆ.
ಬೆಂಗಳೂರು ನಗರದ ವಿಸ್ತರಣೆ ಭಾಗವಾಗಿ 2031ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಡಿಎ ಯೋಜನೆ ರೂಪಿಸಿದೆ. 8 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಪಟ್ಟಣಗಳ ಅಭಿವೃದ್ಧಿ ಕಾರ್ಯಗಳನ್ನು ಮೂಲ ಸೌಕರ್ಯಗಳ ಜೊತೆಗೆ ಮಾಡಲಾಗುತ್ತದೆ.
ಜನವರಿ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಿಡದಿ ಮತ್ತು ಹಾರೋಹಳ್ಳಿ ನಡುವೆ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿತ್ತು. ಅಲ್ಲದೇ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯ ಅಭಿವೃದ್ಧಿಗೆ ಒಪ್ಪಿಗೆ ನೀಡಿತ್ತು.
2005ರಲ್ಲಿಯೇ ಬಿಡದಿ ಟೌನ್‌ಶಿಪ್ ಯೋಜನೆಯ ರೂಪುರೇಷೆಯನ್ನು ರೂಪಿಸಲಾಗಿತ್ತು. 2007ರಲ್ಲಿ ಕರ್ನಾಟಕ ಸರ್ಕಾರ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಟೌನ್‌ಶಿಪ್ ನಿರ್ಮಿಸಲು ಆಹ್ವಾನಿಸಿತ್ತು. ಆದರೆ ಸರಿಯಾದ ನೀತಿ ರೂಪಿಸಲು ಸಾಧ್ಯವಾಗಲದ ಕಾರಣ ಯೋಜನೆ ವಿಫಲವಾಯಿತು.
ರಾಮನಗರದಲ್ಲಿ ಭೂಮಿಯ ಬೆಲೆ ಅಧಿಕವಾಗಲಿದೆ. ಭೂಮಿಯನ್ನು ಮಾರಾಟ ಮಾಡದೇ ಉಳಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದರು. ನಾನು ನಿಮಗೆ ನೇರವಾಗಿ ಹಣವನ್ನು ನೀಡುವುದಿಲ್ಲ. ಆದರೆ ಆಸ್ತಿ, ಭೂಮಿ ಬೆಲೆ ಏರಿಕೆಯಾಗುವಂತೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು.
ಬಿಡದಿ ಅಭಿವೃದ್ಧಿಗಾಗಿಯೇ 8 ವರ್ಷಗಳ ಹಿಂದೆ 'ಬಿಡದಿ ಸ್ಮಾರ್ಟ್ ಸಿಟಿ ಪ್ಲಾನಿಂಗ್ ಅಥಾರಿಟಿ' ಸ್ಥಾಪನೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಡದಿ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಕೊಟ್ಟಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ತವರು ಜಿಲ್ಲೆಯಾಗಿರುವ ರಾಮನಗರದ ಬಿಡದಿ ಇನ್ನಷ್ಟು ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ.
ಆದ್ದರಿಂದ ಅಥಾರಿಟಿಯನ್ನು ಮರು ನಾಮಕರಣ ಮಾಡಿ ಅದನ್ನು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಎಂದು ಬದಲಾಯಿಸಲಾಗಿದೆ. ಬಿಎಂಆರ್‌ಡಿಎ ಆಯುಕ್ತರನ್ನು ಜಿಬಿಡಿಎ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ, ಬಿಎಂಆರ್‌ಡಿಎ ಯೋಜನಾ ನಿರ್ದೇಶಕರು ಈ ಯೋಜನೆಗೆ ಸದಸ್ಯ ಕಾರ್ಯದರ್ಶಿಗಳು.












Click it and Unblock the Notifications