ಬೆಂಗಳೂರು ಅಗ್ನಿ ಅವಘಡ: ತನಿಖೆಗೆ ತಂಡ ರಚನೆ ಮಾಡಿದ ಜಿಬಿಎ
ಬೆಂಗಳೂರಿನಲ್ಲಿ ನಡೆದಿರುವ ಪ್ರಮುಖ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಪಾಲಿಕೆ ಮುಂದಾಗಿದೆ. ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿರುವ ವಾಣಿಜ್ಯ ಸಂಕೀರ್ಣದ 1 ಮತ್ತು 2ನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.
ಈ ಅಗ್ನಿ ಅವಘಡದ ಕುರಿತು ಮಾಹಿತಿ ದೊರೆತ ಕೂಡಲೇ ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಕಾರ್ಯ ಪ್ರವೃತ್ತರಾಗಿರುತ್ತಾರೆ. ಬಹುಮಹಡಿ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ವೇಳೆ ಕಟ್ಟಡದ ಲಿಫ್ಟ್ ನಲ್ಲಿ ಸಿಲುಕಿದ್ದ ಕೃಷ್ಣೇಗೌಡ ಎಂಬುವವರನ್ನು ರಕ್ಷಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯ ನೌಕರರಾದ ಅರುಣ್ ಪ್ರಸಾದ್ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹಾಗೂ ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರರಾವ್, ಆಯುಕ್ತರಾದ ಕೆ.ಎನ್. ರಮೇಶ್ ಹಾಗೂ ಅಪರ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ಸಮಯದಲ್ಲಿ ಕಟ್ಟಡಕ್ಕೆ ಹಾಗೂ ಕಚೇರಿಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ವಿದ್ಯುತ್ ಅವಘಡದಿಂದ ಎಲೆಕ್ಟ್ರಿಕಲ್ ಡಕ್ಟ್ ಹಾನಿಯಾಗಿದೆ.
ಈ ವಿದ್ಯುತ್ ಅವಘಡಕ್ಕೆ ನಿಖರ ಕಾರಣವನ್ನು ತಿಳಿಯುವ ಸಂಬಂಧ ತನಿಖೆ ನಡೆಸಿ ವರದಿ ನೀಡಲು ದಕ್ಷಿಣ ನಗರ ಪಾಲಿಕೆ, ಬೆಸ್ಕಾಂ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳ ಒಂದು ತಂಡವನ್ನು ರಚಿಸಲಾಗಿರುತ್ತದೆ. ನಗರ ಪಾಲಿಕೆಯ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ವಾಣಿಜ್ಯ ಸಂಕೀರ್ಣದ ಸಂಪೂರ್ಣ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕಟ್ಟಡದ ವಿದ್ಯುತ್ ಲೇನ್ ಸಂಪೂರ್ಣ ಪರಿಶೀಲಿಸಿ ದುರಸ್ತಿಗೊಳಿಸಲು ಕಟ್ಟಡದಲ್ಲಿನ ಎಲ್ಲಾ ಮಳಿಗೆಗಳು ಹಾಗೂ ಕಛೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಕಟ್ಟಡದ ಸುತ್ತಲಿನ ಪಾದಚಾರಿ ಮಾರ್ಗ ಒತ್ತುವರಿ ತೆರವು: ಪರಿಶೀಲನೆ ವೇಳೆ ವಾಣಿಜ್ಯ ಸಂಕೀರ್ಣದ ಸುತ್ತಲೂ ಹಾಗೂ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವ ಅನಧಿಕೃತ ವ್ಯಾಪಾರಿಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿರುತ್ತದೆ.
ದೂರುಗಳ ಪರಿಹಾರಕ್ಕೆ ಜಂಟಿ ಆಯುಕ್ತರು ಉಸ್ತುವಾರಿ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಸೋಮವಾರ (ನವೆಂಬರ್ 24ರಂದು) ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರಿಂದ ನಡೆದ ಫೋನ್ ಇನ್ ಕಾರ್ಯ ಕ್ರಮದಲ್ಲಿ ಆಯುಕ್ತರು ಸಾರ್ವಜನಿಕರಿಂದ ದೂರವಾಣಿ ಮೂಲಕ 37 ಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಆಯುಕ್ತರು ಸಾರ್ವಜನಿಕರಿಂದ ಸ್ವೀಕರಿಸುವ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದೆಂದು ಆಯುಕ್ತರು ಅಧಿಕಾರಿಗಳಿಗೆ ಎಚ್ಚರಿಗೆ ನೀಡಿದ್ದಾರೆ.
ಸಾರ್ವಜನಿಕರಿಂದ ಸ್ವೀಕೃತವಾಗುವ ಅಹವಾಲುಗಳನ್ನು ಆಯುಕ್ತರು ಖುದ್ದಾಗಿ ಆಲಿಸಿ, ಸಂಬಂಧಿಸಿದ ದೂರು/ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಲಮಿತಿಯೊಳಗಾಗಿ ಸಮಸ್ಯೆಗಳನ್ನು ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ದೂರುಗಳನ್ನು ಪರಿಹರಿಸಲು ವಲಯ 1 ಮತ್ತು ವಲಯ-2 ರ ಜಂಟಿ ಆಯುಕ್ತರುಗಳು ಉಸ್ತುವಾರಿ ವಹಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು ಹಾಗೂ ಸಮಸ್ಯೆ ಪರಿಹರಿಸಿದ ಬಗ್ಗೆ ಮುಂದಿನ ಫೋನ್-ಇನ್ ಕಾರ್ಯಕ್ರಮದ ವೇಳೆಗೆ ವರದಿ ಸಲ್ಲಿಸಿಸಲು ಆಯುಕ್ತರು ಸೂಚಿಸಿದ್ದಾರೆ.












Click it and Unblock the Notifications