ಬೆಂಗಳೂರಲ್ಲಿ ನಕಲಿ ಔಷಧ ಜಾಲ ಬಯಲು; 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ, ಬಂಧನ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಔಷಧಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ನಕಲಿ ಕ್ಯಾನ್ಸರ್ ಔಷಧಗಳು ಮತ್ತು ಇತರ ಪ್ರಮುಖ ಔಷಧಗಳನ್ನು 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಪೂರೈಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರ ವಿಶೇಷ ತನಿಖಾ ತಂಡ (SIT) ಪತ್ತೆ ಮಾಡಿ ಓರ್ವನನ್ನು ಬಂಧಿಸಿದೆ.
ಔಷಧ ನಿಯಂತ್ರಣ ಇಲಾಖೆ ಅಧಿಕಾರಿ ಮತ್ತು ಎಸ್‌ಐ ಟಿ ತನಿಖಾಧಿಕಾರಿಗಳು ನಗರದ ಮಿನರ್ವಾ ವೃತ್ತದ ಸಮೀಪದ 'ಕೃಪಾ ಹೆಲ್ತ್‌ಕೇರ್' ಎಂಬ ಔಷಧ ಮಳಿಗೆಯ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿಂದ ನಕಲಿ ಔಷಧ ಪೂರೈಕೆಗೆ ಸಂಗ್ರಹಣೆ ಮಾಡಲಾಗುತ್ತಿತ್ತು. ಈ ವೇಳೆ ನಕಲಿ ಔಷಧ ಪೂರೈಕೆ ಖಚಿತವಾಗುತ್ತಿದ್ದಂತೆ ಅದರ ಮಾಲೀಕ ವೀರೇಶ್ ಕುಮಾರ್ ಜೈನ್ ನ್ನು ಬಂಧಿಸಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ ಈ ನಕಲಿ ಔಷಧಿ ವಿತರಣೆ ಜಾಲದಿಮದ ಜೀವ ರಕ್ಷಕ ಔಷಧಿಗಳು, ಕ್ಯಾನ್ಸರ್ ಔಷಧಗ, ತೀವ್ರ ನಿಗಾ ಘಟಕಗಳಲ್ಲಿ (ICU) ಬಳಸುವ ಇಂಜೆಕ್ಷನ್‌ಗಳನ್ನು ಸುಮಾರು ಶೇ. 50ರಷ್ಟು ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿದ್ದವು. ಇದೀಗ ಈ ಜಾಲ ಎಷ್ಟು ದೊಡ್ಡದಿದೆ. ಎಲ್ಲೆಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂಬ ಆಯಾಮದಲ್ಲಿ ತನಿಖಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.
ಈ ಜಾಲವು ಅತೀ ಕಡಿಮೆ ಬೆಲೆಯ ಔಷಧಗಳನ್ನು ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮತ್ತೆ ಪ್ಯಾಕ್ ಮಾಡಿ ಸರಬರಾಜು ಮಾಡುತ್ತಿದ್ದವು. ಅದರ ಮೇಲೆ ಶೇ.50ರಷ್ಟು ರಿಯಾಯಿತಿ ನೀಡುತ್ತಿದ್ದರು ಎನ್ನಲಾಗಿದೆ. ಮಾತ್ರವಲ್ಲದೇ ಅವಧಿ ಮುಗಿದ ಎಕ್ಸ್‌ಪೈರಿ ಔಷಧಗಳನ್ನು ಹೊಸ ಕಂಟೈನರ್‌ಗಳಿಗೆ ಹಾಕಿ, ಖ್ಯಾತ ಕಂಪನಿಗಳ ಲೇಬಲ್ ಹಾಕಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇದೆಲ್ಲಕ್ಕೂ ಕೇಂದ್ರವಾಗಿ 'ಕೃಪಾ ಹೆಲ್ತ್‌ಕೇರ್' ಔಷಧ ವಿತರಣಾ ಕೇಂದ್ರ ಕೆಲಸ ಮಾಡುತ್ತಿತ್ತು. ಉದ್ದೇಶಿತ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ನಕಲಿ ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿತ್ತು.
ರಾಜ್ಯ, ಹೊರ ರಾಜ್ಯಗಳಲ್ಲೂ ಜಾಲ ವಿಸ್ತರಣೆ
ಔಷಧಗಳ ಅಕ್ರಮ ಜಾಲವು ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ಹೊರಗೂ ಸಂಪರ್ಕವನ್ನು ಹೊಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಔಷಧಗಳ ಸಾಗಣೆ ಮತ್ತು ವಿತರಣೆಯಲ್ಲಿ 15ಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳು (medical representatives) ಭಾಗಿಯಾಗಿದ್ದಾರೆ ಎನ್ನಲಾಗಿದೆ. ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್ ವಹೀವಾಟಿನ ವಿವರ, ಔಷಧ ಮಾರಾಟದ ಇನ್‌ವಾಯ್ಸ್‌ಗಳು, ಎಲ್ಲಿಂದ ಸರಬರಾಜು ಆಗುತ್ತಿದ್ದವು. ಪೂರೈಕೆಯ ಸಂಪುರ್ಣ ಮಾಹಿತಿ ಪತ್ತೆ ಹಚ್ಚುತ್ತಿದ್ದಾರೆ. ತನಿಖೆ ವಿವಿಧ ಆಯಾಮಗಳಲ್ಲಿ ನಡೆಯುತ್ತಿದೆ.
ಬಂಧಿತ ವ್ಯಕ್ತಿಯು ನಗರದಲ್ಲಿ ಐದು ವರ್ಷಗಳಿಂದ ಈ ಔಷಧ ಮಳಿಗೆ ನಡೆಯುತ್ತಿದ್ದರು. ಇವರೊಂದಿಗೆ ಪ್ರಶಾಂತ್ ಎಂಬ ವ್ಯಕ್ತಿ ಸಂಪರ್ಕದಲ್ಲಿದ್ದ. ಈ ಅಕ್ರಮ ಚಟುವಟಿಕೆಯ ಪ್ರಮುಖ ವ್ಯಕ್ತಿ ಈತನೇ ಎಂದು ಅಂದಾಜಿಸಲಾಗಿದೆ. ಸದ್ಯ ಆತ ತಲೆ ಮರೆಸಿಕೊಂಡಿದ್ದು, ಆತನಿಗೂ ತನಿಖಾಧಿಕಾರಿಗಳು ಬಲೆ ಬೀಸಿದ್ದಾರೆ.
₹5 ಕೋಟಿ ಮೌಲ್ಯದ ಔಷಧ ವಶ
ಬೆಂಗಳೂರು ದಕ್ಷಿಣದ ಬಿಡದಿ, ದೊಡ್ಡೇರಿ ಭಾಗದ ಫಾರ್ಮ್‌ಹೌಸ್ ವೊಂದರಲ್ಲಿ ಕಳೆದ ಆಗಸ್ಟ್ 18 ರಂದು ದಾಳಿ ನಡೆಸಲಾಗಿತ್ತು. ಈ ವೇಳೆ ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧ ವಶಕ್ಕೆ ಪಡೆಯಲಾಗಿತ್ತು. ನಕಲಿ ಬಿಲ್, ಇಂಜೆಕ್ಷನ್, ತುಂಬಲು ಬಳಸಲಾಗಿದೆ ಎಂಬುದು ಪತ್ತೆಯಾಗಿದೆ. ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದಾದ್ಯಂತ ಅನೇಕ ದಾಳಿ ನಡೆಸಿದೆ.


Click it and Unblock the Notifications
