ಡ್ರಗ್ಸ್ ಪ್ರಕರಣದ ತನಿಖೆ; ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಭೇಟಿ!
ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರಿನ ಡ್ರಗ್ಸ್ ಜಾಲದ ಕುರಿತು ಸಿಸಿಬಿ ತನಿಖೆ ಮುಂದುವರೆದಿದೆ. ಇಡಿ ಅಧಿಕಾರಿಗಳು ಸಹ ಕೆಲವು ಮಾಹಿತಿಗಳನ್ನು ಸಂಗ್ರಹ ಮಾಡಿದ್ದು, ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ನಟಿ ರಾಗಿಣಿ ದ್ವಿವೇದಿ ಪೊಲೀಸ್ ಕಸ್ಟಡಿ ಶುಕ್ರವಾರ ಅಂತ್ಯವಾಗಲಿದೆ.
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸಿಸಿಬಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಿಸಿಬಿ ಪೊಲೀಸರ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಹಿವಾಟಿನ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸೆಲೆಬ್ರಿಟಿ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ಖನ್ನಾ ವಿದೇಶದಿಂದ ಡ್ರಗ್ಸ್ ತರಿಸಿಕೊಂಡಿದ್ದು, ಅಲ್ಲಿನ ಡ್ರಗ್ಸ್ ಡೀಲರ್ ಜೊತೆ ನಂಟು ಹೊಂದಿದ್ದ, ವಿದೇಶಿಯರ ಜೊತೆ ಹಣದ ವಹಿವಾಟು ನಡೆಸುವಾಗ ಹವಾಲಾ ವ್ಯವಹಾರ ನಡೆದಿದೆ ಎಂಬುದು ಇಡಿ ಅಧಿಕಾರಿಗಳ ಶಂಕೆಯಾಗಿದೆ.

ಹವಾಲಾ ವ್ಯವಹಾರ ನಡೆದಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಖಚಿತವಾದ ಮಾಹಿತಿ ಸಿಕ್ಕರೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಿದ್ದಾರೆ. ದೆಹಲಿಯಲ್ಲಿ ವಿರೇನ್ ಖನ್ನಾ ಬಂಧಿಸಿದ್ದ ಸಿಸಿಬಿ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದೆ.
ಪೊಲೀಸ್ ಕಸ್ಟಡಿ ಅಂತ್ಯ: ನಟಿ ರಾಗಿಣಿ ದ್ವಿವೇದಿ ಪೊಲೀಸ್ ಕಸ್ಟಡಿ ಶುಕ್ರವಾರ ಅಂತ್ಯಗೊಳ್ಳಲಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ. ಮೊದಲು ಮೂರು ದಿನ, ಬಳಿಕ 5 ದಿನ ಸಿಸಿಬಿ ರಾಗಿಣಿ ವಿಚಾರಣೆ ನಡೆಸಿದೆ.
ಇಂದು ಜಾಮೀನು ಅರ್ಜಿಯ ವಿಚಾರಣೆ ಸಹ ನ್ಯಾಯಾಲಯದಲ್ಲಿ ನಡೆಯುವ ಸಾಧ್ಯತೆ ಇದೆ. ಸಿಸಿಬಿ ಪೊಲೀಸರು ವಶಕ್ಕೆ ಕೇಳದಿದ್ದಲ್ಲಿ ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಬಹುದು.












Click it and Unblock the Notifications