Bengaluru: 25 ಕೋಟಿ ಮೌಲ್ಯದ 5 ಎಕರೆ ಭೂಮಿ ಮರಳಿ ಬಿಡಿಎ ವಶಕ್ಕೆ
ಬೆಂಗಳೂರು, ಅಕ್ಟೋಬರ್ 18: ಬೃಹದಾಕಾರವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಭೂಮಿಗಳು ಅಲ್ಲಲ್ಲಿ ಒತ್ತುವರಿ ಆಗಿದ್ದರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ಸಮರ ಮುಂದುವರಿಸಿದೆ. ಇದೀಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅತಿಕ್ರಮಣವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪ್ರಾಧಿಕಾರ ಮರಳಿ ಪಡೆದಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ₹25 ಕೋಟಿ ಮೌಲ್ಯದ 05 ಎಕರೆ ಭೂಮಿ ಒತ್ತುವರಿ ಆಗಿತ್ತು. ಮಂಗಳವಾರ ಒತ್ತುವರಿ ವಿರುದ್ಧ ಕ್ರಮ ಕೈಗೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅತಿಕ್ರಮಣ ತೆರವುಗೊಳಿಸಿ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, ಒತ್ತುವರಿ ಪ್ರದೇಶಗಳ ಪೈಕಿ ಮೂರು ಎಕರೆಯಲ್ಲಿ ಕಂದಾಯ ನಿವೇಶನಗಳು ಬಂದಿವೆ. ಈ ಸಂಬಂಧ ಪ್ರಾಧಿಕಾರ ಈ ಹಿಂದಿಯೇ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿತ್ತು. ಒತ್ತುವರಿ ತೆರವಿಗೆ ಸೂಚನೆ ನೀಡಿತ್ತು. ಹೀಗಿದ್ದರು ಸಹಿತಿ ನೋಟಿಸ್ ನಿರ್ಲಕ್ಷ್ಯ ಮಾಡಿದ್ದಲ್ಲದೇ ಅತಿಕ್ರಮ ಮುಂದುವರಿಸಿದ್ದರು ಎನ್ನಲಾಗಿದೆ.
ತಾತ್ಕಾಲಿಕ ಶೆಡ್ ತೆರವು: ಪ್ರಕರಣ ದಾಖಲು
ಈ ಕಾರಣದಿಂದ ಬಿಡಿಎ ಅಧಿಕಾರಿಗಳ ತಂಡವು ಮಂಗಳವಾರ ಸ್ಥಳಕ್ಕೆ ತೆರಳಿ ಬಡಾವಣೆಯ ಐದು ಎಕರೆ ಪ್ರದೇಶಗಳಲ್ಲಿನ ಒತ್ತುವರಿ ತೆರವು ಆರಂಭಿಸಿದರು. ಸ್ಥಳದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದ ಸುಮಾರು ಏಳು ತಾತ್ಕಾಲಿಕ ಶೆಡ್‌ಗಳು ಮತ್ತು ಮೂರು ಕಡೆಗಳಲ್ಲಿ ಹಾಕಲಾಗಿದ್ದ ಕಾಂಕ್ರೀಟ್ ಅನ್ನು ತೆಗೆದುಹಾಕಲಾಯಿತು ಎಂದು ಬಿಡಿಎ ತಿಳಿಸಿದೆ.

ಇಷ್ಟೇ ಅಲ್ಲದೇ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಕೊಡಿಗೇಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 108ರಲ್ಲಿ ಒತ್ತುವರಿ ಸಮೀಕ್ಷೆ, ತಪಾಸಣೆಯನ್ನು ಮುಂದುವರಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೆಪ್ಟಂಬರ್ ಕೊನೆ ವಾರ ಒತ್ತುವರಿ ತೆರವು
ಕಳೆದ ಸೆಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ಇದೇ ಕೆಂಪೇಗೌಡ ಬಡಾವಣೆ ಸೇರಿದಂತೆ ಉದ್ದೇಶಿಸಿತ ಮೇಜರ್ ಆರ್ಟಿಯಲ್ ರೋಡ್ (ಎಂಎಆರ್) ಭೂಸ್ವಾಧೀನ ಪಡಿಸಿಕೊಂಡಿರುವ ಒತ್ತುವರಿಯ ಪೈಕಿ ಸುಮಾರು ಐದು ಎಕರೆ ತೆರವುಗೊಳಿಸಿದ ಬಿಡಿಎ ಆ ಜಾಗವನ್ನು ಮರಳಿ ವಶಕ್ಕೆ ಪಡೆದುಕೊಂಡಿತ್ತು.
ಬೆಂಗಳೂರು ದಕ್ಷಿಣ ವಿಭಾಗದ ಕೆಂಗೇರಿ ಹೋಬಳಿ ಚಲ್ಲಘಟ್ಟ ಸರ್ವೇ ನಂಬರ್ 4 ಹಾಗೂ 8ರಲ್ಲಿನ ಐದು ಎಕರೆ ಪ್ರದೇಶ ಒತ್ತುವರಿ ಆಗಿತ್ತು. ನಗರದ ಬಡಾವಣೆಗಳ ಅವ್ಯವಸ್ಥೆ ಅಧಿಕಾರಿಗಳೇ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಡಾವಣೆಗಳನ್ನು ಸುವ್ಯವಸ್ಥೆ ತನ್ನಿ ಎಂದು ಸೂಚನೆ ನೀಡಿದ್ದರು.












Click it and Unblock the Notifications