Bengaluru: ಏಕಮುಖ ರಸ್ತೆ, ಫುಟ್‌ಪಾತ್‌ಗಳಲ್ಲಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಕೇಸ್- ವಾಹನಗಳೂ ವಶಕ್ಕೆ
ಬೆಂಗಳೂರು, ಜೂನ್ 09: ನಗರದಲ್ಲಿ ಟ್ರಾಫಿಕ್ ನಿಯಮಗಳನ್ನು ಜಾರಿಗೊಳಿಸಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಏಕಮುಖ ರಸ್ತೆಗೆ ವಿರುದ್ಧವಾಗಿ ವಾಹನ ಚಲಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಮುಂದಾಗಿದ್ದಾರೆ.
ಅಪರಾಧಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 283 (ಅಪಾಯ ಅಥವಾ ಸಾರ್ವಜನಿಕ ಮಾರ್ಗ ಅಥವಾ ಸಂಚಾರ ಮಾರ್ಗದಲ್ಲಿ ಅಡಚಣೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು ಅವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಹೇಳಿದ್ದಾರೆ.

ಇದು ಕ್ರಿಮಿನಲ್ ಪ್ರಕರಣವಾಗಿದ್ದು, ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅನುಚೇತ್ ಹೇಳಿದ್ದಾರೆ. 'ಉಲ್ಲಂಘಕರು ತಮ್ಮ ವಾಹನಗಳನ್ನು ಮರಳಿ ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಅವರು ಪ್ರಕರಣದ ವಿರುದ್ಧ ಹೋರಾಡಬೇಕು ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ ದಂಡವನ್ನು ಪಾವತಿಸಬೇಕಾಗುತ್ತದೆ' ಎಂದೂ ಅನುಚೇತ್ ಮಾಹಿತಿ ನೀಡಿದ್ದಾರೆ.
ಫುಟ್‌ಪಾತ್ ಅಥವಾ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸುವವರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
'ಇವೆಲ್ಲ ದಂಡನೀಯ ಅಪರಾಧಗಳು. ಆದ್ದರಿಂದ, ತಪ್ಪಿತಸ್ಥರೆಂದು ಕಂಡುಬಂದರೆ ದಂಡವನ್ನು ಮಾತ್ರ ವಿಧಿಸಲಾಗುತ್ತದೆ' ಎಂದೂ ಅವರು ಹೇಳಿದ್ದಾರೆ.

ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿಯಾಗಿ ಅಲೋಕ್ ಕುಮಾರ್ ನೇಮಕ
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಅವರು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಸೇವೆ ಸಲ್ಲಿಸುತ್ತಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಲೋಕ್ ಕುಮಾರ್, 'ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿಯನ್ನು ಹಸ್ತಾಂತರಿಸಿದ್ದೇನೆ ಮತ್ತು ನನ್ನ ಹೊಸ ನಿಯೋಜನೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. 387 ದಿನಗಳ ಅವಧಿ ತೃಪ್ತಿ ತಂದಿದೆ. ಬೆಂಬಲಕ್ಕಾಗಿ ನಾಗರಿಕರಿಗೆ ಕೃತಜ್ಞತೆಗಳು. ಪ್ರತಿ ಪೋಸ್ಟ್‌ನಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡಲು ಯಾವಾಗಲೂ ಶ್ರಮಿಸಿದ್ದೇನೆ' ಎಂದು ತಿಳಿಸಿದ್ದಾರೆ.
ಉಮೇಶ್ ಕುಮಾರ್ ಅವರನ್ನು ಬೆಂಗಳೂರಿನ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿಯಾಗಿ ನಿಯೋಜಿಸಲಾಗಿದೆ.












Click it and Unblock the Notifications