ಬೆಳ್ಳಂದೂರು ಕೆರೆ ಮಾಲಿನ್ಯದಲ್ಲಿ ಎಚ್ಎಎಲ್, ಇಸ್ರೋದೂ ಪಾಲು
ಬೆಂಗಳೂರು, ಮೇ 4: ಬೆಂಗಳೂರಿನ ಬೆಳ್ಳಂದೂರು ಕೆರೆಯ ಸುತ್ತ ಇರುವ, ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಚಾಟಿ ಬೀಸಿದೆ. ರಾಷ್ಟ್ರೀಯ ಹಸಿರು ಪೀಠ ಆದೇಶ ಬಂದ ಮೇಲೆ ಕೆರೆ ಮಾಲಿನ್ಯಕ್ಕೆ ಕಾರ್ಖಾನೆಗಳನ್ನು ಮುಚ್ಚಿಸಲು ಮಂಡಳಿ ಎಲ್ಲ ಸಿದ್ಧತೆ ನಡೆಸಿದೆ.
ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದಲ್ಲಿರುವ 488 ಕಾರ್ಖಾನೆಗಳ ಪಟ್ಟಿ ಹಾಗೂ ಅವುಗಳ ಎಸ್ ಟಿಪಿ ಮಾಹಿತಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿದೆ. ಬಿಡುಗಡೆಯಾಗುವ ಮಾಲಿನ್ಯದ ಮಾಹಿತಿ ಹಾಗೂ ಅವುಗಳ ವಿಲೇವಾರಿ ಆಧಾರದ ಮೇಲೆ ಕಾರ್ಖಾನೆಗಳ ವರ್ಗೀಕರಣ ಮಾಡಲಾಗಿದೆ.[ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಎನ್ ಜಿಟಿಯಿಂದ ರಾಜ್ಯ ಸರಕಾರದ ತರಾಟೆ]

ಕೆರೆಗೆ ಅಪಾಯ ಒಡ್ಡುವ ಸಾಧ್ಯತೆ ಇರುವ ನಲವತ್ತಾರು ಕಾರ್ಖಾನೆಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಹಿಗೆ ಕೆಂಪು ಪಟ್ಟಿ ಎಂದು ನಿರ್ಧರಿಸಲು ಕೆಲವು ಮಾನದಂಡಗಳಿವೆ. ಈ ರೀತಿ ಕೆಂಪು ಪಟ್ಟಿಯಲ್ಲಿರುವ ಕಾರ್ಖಾನೆಯಲ್ಲಿ ಎಚ್ಎಎಲ್, ಕರ್ನಾಟಕ ಕಾಂಪೋಸ್ಟ್ ಡೆವೆಲಪ್ ಮೆಂಟ್ ಕಾರ್ಪೋರೇಷನ್, ಇಸ್ರೋ ಕೂಡ ಸೇರಿವೆ.
366 ಕಾರ್ಖಾನೆಗಳು ಕಿತ್ತಳೆ ಹಾಗೂ 76 ಹಸಿರು ಪಟ್ಟಿಯಲ್ಲಿವೆ. ರಾಷ್ಟ್ರೀಯ ಹಸಿರು ಪೀಠ ಆದೇಶದ ಮುಂಚೆಯೇ 97 ಕಡೆ ಪರೀಕ್ಷೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆರೆಯ ವ್ಯಾಪ್ತಿಯಲ್ಲಿರುವ ಎಲ್ಲ ಕಾರ್ಖಾನೆಗಳನ್ನು ಇನ್ನು ಮೂವತ್ತು ದಿನದೊಳಗೆ ಪರಿಶಿಲನೆ ನಡೆಸಲಾಗುವುದು. ಸಾಕ್ಷಿಯಾಗಿ ಫೋಟೋಗಳನ್ನು ತೆಗೆದು, ದಾಖಲೆ ಇಡಲಾಗುವುದು. ಆ ನಂತರವಷ್ಟೇ ನೋಟಿಸ್ ಕಳುಹಿಸಲಾಗುವುದು ಎಂದಿದ್ದಾರೆ.[ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ]
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಲಮಂಡಳಿ ಜಂಟಿಯಾಗಿ ಕೆರೆ ಶುದ್ಧೀಕರಣಕ್ಕೆಪ್ರಯತ್ನಿಸಿದ್ದವು. ರಾಷ್ಟ್ರೀಯ ಹಸಿರು ಪೀಠದಿಂದ ತರಾಟೆಗೆ ತೆಗೆದುಕೊಂಡ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.












Click it and Unblock the Notifications