Viral: ಬೆಂಗಳೂರಲ್ಲಿ ಉಬರ್ ಆಟೋ 1ಕಿಮೀ. ಪ್ರಯಾಣಕ್ಕೆ ₹425..! ಆಶ್ಚರ್ಯಗೊಂಡ ಪ್ರಯಾಣಿಕ
ಬೆಂಗಳೂರು, ಆಗಸ್ಟ್ 25: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬಂತೆಂದರೆ ಸಾಕು ಸಂಚಾರ ಸಮಸ್ಯೆ ಹೇಳತೀರದಷ್ಟು ಸೃಷ್ಟಿಯಾಗಿ ಬಿಡುತ್ತದೆ. ಸ್ವಂತ ವಾಹನ ಸವಾರರದ್ದು ಒಂದು ಪರದಾಟವಾದರೆ, ಬಸ್ ಹಾಗೂ ಇತರ ವಾಹನಗಳನ್ನು ನೆಚ್ಚಿಕೊಂಡು ಓಡಾಡುವವರು ಮತ್ತೊಂದು ರೀತಿಯಲ್ಲಿ ಪೇಚಿಗೆ ಸಿಲುಕುತ್ತಾರೆ. ಮಳೆ ಬಂದಾಗ ಉಬರ್ ಆಟೋ ಸೇವೆ ಒಂದು ಕಿಲೋ ಮೀಟರ್‌ಗೆ ನೂರಾರು ರೂಪಾಯಿ ತೋರಿಸಿದೆ. ಆಪ್‌ನಲ್ಲಿ ತೋರಿಸಿದ ದರವು ವ್ಯಕ್ತಿಯೊಬ್ಬರಿಗೆ ಆಘಾತ ನೀಡಿದೆ.
ಬೆಂಗಳೂರಿನಲ್ಲಿ ಮಳೆ ಬಂದಾಗ ಸಂಜೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಮುಂದಾದರೆ ಸುದೀರ್ಘ ಕಾಲದವರೆಗೆ ಕಾಯಬೇಕಾಗುತ್ತದೆ. ಬೇಗನೇ ಬುಕ್ ಆಗುವುದಿಲ್ಲ. ಹೀಗಿದ್ದಾಗಲೂ ನಿರಂತರ ಕಾದ ಬಳಿಕ ಉಬರ್ ಆಟೋ ಒಂದು ಕಿಲೋ ಮೀಟರ್‌ಗೆ ಆಪ್‌ನಲ್ಲಿ ಬರೋಬ್ಬರಿ ₹425 ದರ ತೋರಿಸಿದೆ. ಇದನ್ನು ಕಂಡು ನನ್ನ ಸ್ನೇಹಿತ ಆಶ್ಚರ್ಯಗೊಂಡಿದ್ದಾರೆ ಎಂದು ರೆಡ್ಡಿಟ್‌ನಲ್ಲಿ @ok-stand404 ಖಾತೆಯಿಂದ ಆಪ್‌ನ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ.

ಉಬರ್ ಆಟೋ ಪ್ರಯಾಣ ಇಷ್ಟೊಂದು ದುಬಾರಿ!
'ಕೇವಲ 1 ಕಿ.ಮೀ.ಗೆ ಮಳೆಯ ಸಮಯದಲ್ಲಿ ಉಬರ್ ದರಗಳು' ಎಂಬ ಶಿರ್ಷಿಕೆ ಬರೆದುಕೊಂಡು ಪೋಸ್ಟ್ ಮಾಡಲಾಗಿದೆ. ಇದು ವೈರಲ್ ಆಗುತ್ತಿದ್ದು, ಆಟೋ ದುಪ್ಪಟ್ಟು ದರಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಮಳೆ ಬಂದ ನಂತರ ರಾತ್ರಿ ಆಟೋ ಬುಕ್ ಮಾಡಲು ಮುಂದಾದ ನನ್ನ ಸ್ನೇಹಿತ ಇಂತಹ ಕಹಿ ಅನುಭವ ಎದುರಿಸಿದ್ದಾರೆ. ಒಂದೇ ಕಿಲೋ ಮೀಟರ್ ಆಟೋ ಪ್ರಯಾಣಕ್ಕೆ ಇಷ್ಟೊಂದು ದುಬಾರಿ ಎಂದಾದರೆ ಸಾರ್ವಜನಿಕರು ಸಂಚಾರ ಮಾಡುವುದಾದರೆ ಹೇಗೆ ಎಂದು ವಿವರಿಸಿದ್ದಾರೆ. ₹425 ದರ ನೋಡಿದ ಸ್ನೇಹಿತ ಕೊಡೆ ಏರಿಸಿ ನಡೆದುಕೊಂಡೆ ಹೋಗಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
ನೆಟ್ಟಿಗರು ಹೇಳಿದ್ದೇನು?
ಉಬರ್ ಆಟೋ ದರದ ಈ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ಹೆಚ್ಚು ಶೇರ್ ಆಗುತ್ತಿದೆ. ಇದು ಬೆಂಗಳೂರಿನಲ್ಲಿ ಅಪ್ಲಿಕೇಶನ್ ಆಧಾರಿತ ಸಾರಿಗೆ ಸೇವೆಗಳು, ಅವುಗಳಲ್ಲಿ ದರದಲ್ಲಿ ಆಗುವ ಬದಲಾವಣೆ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಈ ಪೋಸ್ಟ್‌ಗೆ ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ರಾಪಿಡೊ ಮತ್ತು ಉಬರ್‌ನಂತಹ ಅಪ್ಲಿಕೇಶನ್‌ಗಳು ದರಗಳು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುತ್ತವೆ. ಈ ಬೆಲೆಗಳನ್ನು ಶಿಫಾರಸು ಮಾಡಿದ ದರಗಳಾಗಿವೆ. ಆದರೆ ಒಂದು ಪ್ರಯಾಣದಲ್ಲಿ ಚಾಲಕ ಮತ್ತು ಪ್ರಯಾಣಿಕರು ನಿರ್ಧರಿಸಬೇಕು, ಅಪ್ಲಿಕೇಷನ್‌ನ್ ಕಂಪನಿಯವರಲ್ಲ ಎಂದು ಅವರು ಹೇಳಿದ್ದಾರೆ.
ಉಬರ್ ಕೈಬಿಟ್ಟಿದೆ, ಆಟೋ ಚಾಲಕರೇ ಬೆಲೆಗಳನ್ನು ನಿಗದಿಪಡಿಸಿದಂತೆ ಭಾಸವಾಗುತ್ತಿದೆ. ಅದೇ ಮಾರ್ಗದ ಪ್ರಯಾಣಕ್ಕೆ ನನಗೆ ಉಬರ್ ನಲ್ಲಿ ರೂ.350 ಕ್ಕಿಂತ ಹೆಚ್ಚು ತೋರಿಸಿದೆ. ರಾಪಿಡೋದಲ್ಲಿ 69 ರೂಪಾಯಿ ತೋರಿಸಿದೆ ಎಂದು ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ. ರಾಪಿಡೋ, ಉಬರ್ ಸಾರಿಗೆ ಸೇವೆಗಳಲ್ಲಿ ತಡರಾತ್ರಿ, ಮಳೆ ಬಂದಾಗಿ ದರ ನಿಗದಿತಕ್ಕಿಂತ ಹೆಚ್ಚಿರುತ್ತವೆ, ಪರಸ್ಪರ ಬಿನ್ನವಾಗಿರುತ್ತವೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಪೀಕ್ ಸಮಯದಲ್ಲಿ ಖಾಸಗಿ ಸಾರಿಗೆ ದರಗಳ ಬೆಲೆ ಹೆಚ್ಚೆ ಇರುತ್ತದೆ. ಈ ಸಮಸ್ಯೆಯನ್ನು ಇಲ್ಲಿನ ನಿವಾಸಿಗಳು ಮೊದಲಿನಿಂದಲೂ ಎದುರಿಸುತ್ತಲೇ ಇರುತ್ತಾರೆ. ಇದೊಂದು ನೋವಿನ ಸಂಗತಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.











Click it and Unblock the Notifications