ಬೆಂಗಳೂರಿನ ರಸ್ತೆಗಳ ತುಂಬಾ ರಾಶಿ-ರಾಶಿ ಕಸ
ಬೆಂಗಳೂರು, ನವೆಂಬರ್ 13 : ಉದ್ಯಾನ ನಗರಿ ಬೆಂಗಳೂರಿನ ರಸ್ತೆಗಳ ತುಂಬಾ ಕಸದ ರಾಶಿಗಳು ಕಂಡು ಬರುತ್ತಿದ್ದು, ಈಗಿರುವ ಕಸವಿಲೇವಾರಿಯಾಗಲು ಕನಿಷ್ಠ ಮೂರು ದಿನ ಕಾಯಬೇಕಿದೆ. ಕಸ ವಿಲೇವಾರಿ ಮಾಡುವುದು ಬಿಬಿಎಂಪಿ ಪೌರ ಕಾರ್ಮಿಕರಿಗೆ ಸವಾಲಾಗಿದೆ.
ದೀಪಾವಳಿ ಹಬ್ಬದ ಕಸ ರಸ್ತೆಗಳಲ್ಲಿ ರಾಶಿ-ರಾಶಿ ಬಿದ್ದಿದೆ. ಸತತವಾಗಿ ಸುರಿಯುತ್ತಿರುವ ಮಳೆಯೂ ಕಸ ವಿಲೇವಾರಿಗೆ ತಡೆಯೊಡ್ಡುತ್ತಿದೆ. ಕೆಲವು ಕಡೆಗಳಲ್ಲಿ ಕಸ ತುಂಬಿಕೊಂಡ ಲಾರಿಗಳು ರಸ್ತೆ ಬದಿಯಲ್ಲೇ ನಿಂತಿದ್ದು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]

ಕತ್ರಿಗುಪ್ಪೆ, ವಿದ್ಯಾಪೀಠ, ವಿಜಯನಗರದ ಎಂ.ಸಿ.ಲೇಔಟ್, ಯಶವಂತಪುರ, ಕೋರಮಂಗಲ, ಶಿವಾಜಿನಗರ, ಜಯನಗರ 3ನೇ ಹಂತ ಮುಂತಾದ ಬಡಾವಣೆಗಳ ರಸ್ತೆಗಳಲ್ಲಿ ಕಸದ ರಾಶಿಗಳು ಬಿದ್ದಿವೆ. ಕಸ ಸಂಪೂರ್ಣವಾಗಿ ವಿಲೇವಾರಿಯಾಗಲು ಕನಿಷ್ಠ ಮೂರು ದಿನಗಳು ಬೇಕಾಗಬಹುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. [ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]
'ದೀಪಾವಳಿ ಹಬ್ಬ ಹಾಗೂ ಮಳೆಯಿಂದಾಗಿ ಕಸದ ಹೊರೆ ಹೆಚ್ಚಿದೆ. ಕಸದ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು 2-3 ದಿನಗಳಲ್ಲಿ ಕಸವನ್ನು ವಿಲೇವಾರಿ ಮಾಡಲಾಗುತ್ತದೆ' ಎಂದು ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಹೇಳಿದ್ದಾರೆ. [ಕಸದ ಲಾರಿ ಬಿಂಗೀಪುರಕ್ಕೆ ಬರೋಲ್ಲ ಮೇಯರ್ ಭರವಸೆ]
ಕಸ ವಿಲೇವಾರಿ ಬಂದ್ ಆಗಿತ್ತು : ಕಳೆದ ವಾರ ದೊಡ್ಡಬಳ್ಳಾಪುರ ಸಮೀಪದ ಟೆರಾಫಾರ್ಮ ಮತ್ತು ಎಂಎಸ್‌ಜಿಪಿ ತ್ಯಾಜ್ಯ ವಿಲೇವಾರಿ ಘಟಕಗಳಿಂದ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಘಟಕಗಳ ಸುತ್ತ ಮುತ್ತಲ ಗ್ರಾಮದವರು ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ನಗರದ ಕಸ ವಿಲೇವಾರಿ ಆಗಿರಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿ ಅವರ ಮನವೊಲಿಸಿದ್ದರು. ನಂತರ ದೀಪಾವಳಿ ಹಬ್ಬ ಆರಂಭವಾಗಿದ್ದರಿಂದ ನಗರದ ಕಸ ಹೆಚ್ಚಾಗಿದ್ದು, ಮಳೆಯೂ ಸುರಿಯುತ್ತಿರುವುದರಿಂದ ವಿಲೇವಾರಿಗೆ ಅಡ್ಡಿಉಂಟಾಗಿದೆ.











Click it and Unblock the Notifications