Bengaluru Rains: ಮುಂದಿನ 4-5 ದಿನದ ಹವಾಮಾನ ವರದಿ
ಬೆಂಗಳೂರು, ಆಗಸ್ಟ್ 18: ಬೆಂಗಳೂರಿನಲ್ಲಿ ಮುಂಗಾರು ಸಕ್ರಿಯವಾಗಿದ್ದು, ಶನಿವಾರ ಜೋರು ಮಳೆ ದಾಖಲಾಗಿದ್ದು ಇದು ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಆಗಸ್ಟ್ 25ರವರೆಗೆ ಮುಂದಿನ ನಾಲ್ಕು ದಿನಗಳ ಕಾಲ ನಗರದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಒಂದೆರಡು ಕಡೆಗಳಲ್ಲಿ ಆಗಾಗ ಜೋರು ಮಳೆ ಸುರಿಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.

ನಗರದ ವಾತಾವರಣ ಬೆಳಗ್ಗೆಯಿಂದ ಸಾಮಾನ್ಯ ಎಂಬಂತಿರಲಿದೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಜಿಟಿ ಜಿಟಿ ಮಳೆ ಶುರುವಾಗಲಿದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಇಂದು ಭಾನುವಾರ ತಡರಾತ್ರಿ ಜೋರು ಮಳೆ ಸುರಿಯುವ ಸಂಭವವಿದೆ.
ವಿವಿಧೆಡೆ ಜೋರು ಮಳೆ ದಾಖಲು
ಇಂದು ಬೆಳಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಅಂದರೆ ಶನಿವಾರ ನಗರದ ಪಶ್ಚಿಮ ವಲಯದ ವಿವಿಧ ಬಡಾವಣೆಗಳಲ್ಲಿ ಜೋರು ಮಳೆ ದಾಖಲಾಗಿದೆ. ರಾಜಮಹಲ್ ಗುಟ್ಟಹಳ್ಳಿಯಲ್ಲಿ ಅಧಿಕ 20.5 ಮಿಲಿ ಮೀಟರ್ ಮಳೆ ಬಿದ್ದರೆ, ಕೋನೆನ ಅಗ್ರಹಾರ ಮತ್ತು ಕಾಡುಗೋಡಿಯಲ್ಲಿ ತಲಾ 19.5 ಮಿಲಿ ಮೀಟರ್ ಮಳೆ ಆಗಿದೆ.

ರಾಜರಾಜೇಶ್ವರಿ ನಗರ ಮತ್ತು ನಂದಿನಿ ಬಡಾವಣೆಯಲ್ಲಿ 16.5 ಮಿಮೀ, ಪುಲಕೇಶಿ ನಗರ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 15ಮಿಲಿ ಮೀಟರ್, ಹಗದೂರು, ಬಾಗಲಕುಂಟೆ, ನಾಗಪುರದಲ್ಲಿ ತಲಾ 13.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹೀಗೆ ಮಳೆ ಬಿದ್ದ ನಂತರ ಭಾನುವಾರ ಬೆಳಗ್ಗೆಯಿಂದಲೂ ತಂಪು ವಾತಾವರಣ ಆರಂಭವಾಗಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಕಂಡು ಬಂದಿದ್ದ ಸೆಕೆಯ ವಾತಾವರಣ ಅಂತ್ಯ ಕಂಡಿದೆ.
ಕರ್ನಾಟಕ ಹವಾಮಾನ ವರದಿ
ಕರ್ನಾಟಕದಲ್ಲಿ ಸಹ ಮುಂಗಾರು ಮಳೆ ಮತ್ತೆ ಚುರುಕಾಗುವ ಲಕ್ಷಣಗಳು ಕಂಡು ಬಂದಿವೆ. ಶನಿವಾರ ಕರಾವಳಿಯ ಮೂರು ಜಿಲ್ಲೆಗಳಿಗೆ ಭಾರಿ ಮಳೆ ದಾಖಲಾಗಿದೆ. ಮುಂದಿನ ಐದು ದಿನ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ಮಳೆ ಕಂಡು ಬರಲಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಸಕ್ರಿಯವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications