ಬೆಂಗಳೂರಲ್ಲಿ ದೇಶದ ಅತಿದೊಡ್ಡ ಬಯೋಗ್ಯಾಸ್ ಯೋಜನೆ, 120 ಕೋಟಿ ರೂ ಆದಾಯ: BWSSB
ಬೆಂಗಳೂರು: ಬೆಂಗಳೂರು ಜಲಮಂಡಳಿಯು ತ್ಯಾಜ್ಯದಿಂದ ಸಂಪತ್ತು ವೃದ್ಧಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಬಹುಕೋಟಿ ಆದಾಯ ಗಳಿಸುವ ಮತ್ತೊಂದು ದಾರಿ ಕಂಡುಕೊಂಡಿರುವ ಜಲಮಂಡಳಿಯು ರಾಜಧಾನಿ ಬೆಂಗಳೂರಿನಲ್ಲಿ ಭಾರತದ ಮೊದಲ ಅತಿ ದೊಡ್ಡ ಬಯೋಗ್ಯಾಸ್ ಯೋಜನೆ ಜಾರಿಗೆ ತರಲು ಸಜ್ಜಾಗಿದೆ. ಇದರಿಂದ ಭವಿಷ್ಯದಲ್ಲಿ ಕೋಟಿ ಕೋಟಿ ರೂಪಾಯಿ ಆದಾಯ ಜಲಮಂಡಳಿ ಬೊಕ್ಕಸ ಸೇರುವ ನಿರೀಕ್ಷೆ ಇದೆ.
ಸುಸ್ಥಿರ ನಗರ ಜಲ ನಿರ್ವಹಣೆ ಮತ್ತು ಸರ್ಕ್ಯುಲರ್ ಎಕಾನಮಿ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ನಗರದ ಕೊಳಚೆ ನೀರಿನ ತ್ಯಾಜ್ಯವನ್ನು ಆದಾಯದ ಬೃಹತ್ ಮೂಲವಾಗಿ ಪರಿವರ್ತಿಸುತ್ತಿದೆ. 05 ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ (ಎಸ್‌ಟಿಪಿ) ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್ ಬಯೋ-ಗ್ಯಾಸ್ (𝗖𝗼𝗺𝗽𝗿𝗲𝘀𝘀𝗲𝗱 𝗕𝗶𝗼-𝗚𝗮𝘀 - 𝗖𝗕𝗚) ಆಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.

ಹೀಗೆ ಮಾಡುವುದರಿಂದ ಜಲಮಂಡಳಿಗೆ ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ ಸುಮಾರು 120 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ಇಂತಹ ಯೋಜನೆ ಕೈಗೊಂಡಿರುವುದು ದೇಶದಲ್ಲೇ ಇದೇ ಮೊದಲು ಹಾಗೂ ಅತೀ ದೊಡ್ಡ ಯೋಜನೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಖಲೆಯ ಪ್ರಮಾಣದಲ್ಲಿ ತ್ಯಾಜ್ಯ ನೀರು ಬಳಕೆ
ಭಾರತದಲ್ಲಿ ಸೂರತ್‌ನಂತಹ ನಗರಗಳಲ್ಲಿ ಕೇವಲ 120 ಎಂಎಲ್‌ಸಿ ಸಾಮರ್ಥ್ಯದ ನೀರಿನ ಬಳಕೆಯೊಂದಿಗೆ ಇಂತಹ ಯೋಜನೆಗಳು ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 550 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಬಳಕೆಯೊಂದಿಗೆ ಸದರಿ ಯೋಜನೆ ಜಾರಿಗೆ ತರುತ್ತಿದೆ.
ಮಾತ್ರವಲ್ಲದೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನಗರದಾದ್ಯಂತ ಎಲ್ಲಿ ಎಸ್‌ಟಿಪಿ, ಬಯೋ-ಡೈಜೆಸ್ಟರ್‌ಗಳಿವೆಯೋ ಅಲ್ಲೆಲ್ಲಾ ಈ ಅತ್ಯಾಧುನಿಕ ಯೋಜನೆಯನ್ನು ವಿಸ್ತರಿಸಲು ಮತ್ತು ಸ್ಥಾಪಿಸಲು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ ನಿರ್ದೇಶಿಸಿದ್ದಾರೆ.
ಎಸ್‌ಟಿಪಿಗಳಲ್ಲಿ ಉತ್ಪಾದನೆಯಾಗುವ ಜೈವಿಕ ಅನಿಲವನ್ನು ಸ್ಥಳೀಯ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಒಂದು ಘಟಕದಲ್ಲಿ ಮಾತ್ರ ಸುಟ್ಟು ಹಾಕಲಾಗುತ್ತಿದೆ. ಈ ಯೋಜನೆಯು ಕಚ್ಚಾ ಜೈವಿಕ ಅನಿಲವನ್ನು ನಗರ ಅನಿಲ ವಿತರಣಾ ಜಾಲಕ್ಕೆ ಪೂರೈಸಲು ಅಥವಾ ಶುದ್ಧ ಸಾರಿಗೆ ಇಂಧನವಾಗಿ ಬಳಸಲು ರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಸಿಬಿಜಿಆಗಿ ಉನ್ನತೀಕರಿಸಲು ಉದ್ದೇಶಿಸಲಾಗಿದೆ.
ಖಾಸಗಿ ಸಹಭಾಗಿತ್ವ ಕಾರ್ಯಾಚರಣೆ, ನಿರ್ವಹಣೆ
ಕೇವಲ ವಿದ್ಯುತ್ ವೆಚ್ಚವನ್ನು ಸರಿದೂಗಿಸುವ ಬದಲು ಆದಾಯ-ಉತ್ಪಾದಿಸುವ ಜೈವಿಕ ಅನಿಲ ಪರಿವರ್ತನೆಗೆ ಬದಲಾಗುವ ಮೂಲಕ ಜಲಮಂಡಳಿಗೆ ಬಹುಕೋಟಿ ಆದಾಯ ಹರಿದುಬರಲಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಖಾಸಗಿ ಪಾಲುದಾರರು ಸಂಪೂರ್ಣ 85 ಕೋಟಿ ರೂ. ಬಂಡವಾಳ ವೆಚ್ಚದ ಜೊತೆಗೆ ಎಲ್ಲಾ ಕಾರ್ಯಾಚರಣೆ, ನಿರ್ವಹಣಾ ವೆಚ್ಚ ಭರಿಸಲಿದ್ದಾರೆ. ಮಂಡಳಿಯು ಯೋಜನಾ ಕಾರ್ಯಾಚರಣೆಗಳಿಗಾಗಿ ಎಸ್‌ಟಿಪಿ ಆವರಣದಲ್ಲಿ ಸರಿಸುಮಾರು 13,000ಚದರ ಮೀಟರ್ ಜಲಮಂಡಳಿ ಮಾಲೀಕತ್ವದ ಜಾಗದಲ್ಲಿ ನಿರ್ಮಾಣಗೊಳ್ಳಲಿದೆ.
ಅನಿಲ ಮೇಲಿನ ಅವಲಂಬನೆ ತಗ್ಗಲಿದೆ
ಆರ್ಥಿಕ ಲಾಭಗಳ ಆಚೆಗೆ, ಈ ಯೋಜನೆಯಿಂದಾಗಿ ಬೆಂಗಳೂರಿನ ಇಂಧನ ಭದ್ರತೆಗೆ ದೊಡ್ಡ ಉತ್ತೇಜನ ಸಿಗಲಿದೆ. ಪ್ರಸ್ತುತ ಭಾರತ ದೇಶದಲ್ಲಿ ಬಹುಪಾಲು ಬಳಸಲಾಗುವ ಎಲ್‌ಪಿಜಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಸರ್ಕಾರದಿಂದ ಯಾವುದೇ ವೆಚ್ಚವಿಲ್ಲದೆ ಪೋಲಾಗುತ್ತಿರುವ ಅನಿಲವನ್ನು ಪರಿವರ್ತಿಸುವ ಮೂಲಕ ಉತ್ತಮ ಅದಾಯು ನೀರಿಕ್ಷಿಸುವ ಜೊತೆಯಲ್ಲಿಯೇ ದೇಶವನ್ನು ಸ್ವಾವಲಂಬಿಯನ್ನಾಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಈ ಯೋಜನೆಯು ಇತರ ಭಾರತೀಯ ನಗರಗಳು ಅನುಸರಿಸಲು ಒಂದು ರಾಷ್ಟ್ರೀಯ ಮಾದರಿ ಯೋಜನೆಯಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications