Bengaluru Bus Fire: ಇಂದು 3 ವರದಿ ಸಲ್ಲಿಕೆ ಬಳಿಕ ಪೊಲೀಸ್ ತನಿಖೆ, ಕಾರಣಗಳೇನು?
Bengaluru Bus Fire: ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನ ವೀರಭದ್ರ ನಗರದಲ್ಲಿ ಸೋಮವಾರ SV ಕೋಚ್ ಗ್ಯಾರೇಜ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ನೋಡ ನೋಡುತ್ತಲೇ ಅನೇಕ ಬಸ್‌ಗಳು ಬೆಂಕಿಗೆ ಸುಟ್ಟ ಕರಕಲಾದವು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಿರುವ ಪೊಲೀಸರು ವಿವಿಧ ಸಂಸ್ಥೆಗಳು ವರದಿಗಾಗಿ ಕಾಯುತ್ತಿದ್ದಾರೆ. ಇಂದು ಅಗ್ನಿಶಾಮಕ ಅಧಿಕಾರಿಗಳ ವರದಿ ಸಲ್ಲಿಕೆ ಆಗಲಿದೆ.
ಘಟನೆ ಸಂಬಂಧ ಗಿರಿನಗರದಲ್ಲಿ ಎಫ್‌ಎಆರ್ (Fire Accidental Report) ದಾಖಲಿಸಲಾಗಿದೆ. ಸುಮಾರು ಇಪ್ಪತ್ತು ಬಸ್‌ಗಳನ್ನು ಆಹುತಿ ಪಡೆದು ಹಲವು ಬಸ್‌ಗಳ ಹಾನಿಗೆ ಕಾರಣವಾಗಿ ಈ ಅಗ್ನಿ ದರುಂತ ಹೇಗೆ ನಡೆಯಿತು, ಕಾರಣಗಳೇನು, ಇದು ಆಕಸ್ಮಿಕವಾಗಿ ತಗುಲಿದ ಬೆಂಕಿಯೇ ಇಲ್ಲ ಯಾರೋ ದುರುದ್ದೇಶಪೂರಿತವಾಗಿ ಬೆಂಕಿ ಇಟ್ಟರಾ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲು ಸಜ್ಜಾಗಿದ್ದಾರೆ.

ಈಗಾಗಲೇ ಘಟನೆಯ ಬಳಿಕ ಸೋಮವಾರ ವಿಧಿ ವಿಜ್ಞಾನ ಪ್ರಯೋಗಾಲಯ (FSL), ಅಗ್ನಿಶಾಮಕ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು ಸ್ಥಳದಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿದ್ದಾರೆ.
ಇಂದು 3 ಸಂಸ್ಥೆಗಳ ವರದಿ ಸಲ್ಲಿಕೆ?
ಇಂದು ಅಗ್ನಿಶಾಮಕ ಅಧಿಕಾರಿಗಳು/ತಜ್ಞರು ಅಗ್ನಿಶಾಮಕ ಡಿಜಿ ಕಮಲ್ ಪಂತ್ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಇನ್ನೂ ಅವಶೇಷಗಳನ್ನು ಸಂಗ್ರಹಿಸಿದ್ದ ಎಫ್‌ಎಸ್‌ಎಲ್ ಅಗ್ನಿ ನಿಯಂತ್ರಣ ಆಗದ ಕುರಿತು, ಒಟ್ಟಾರೆ ಅವಘಡ ಕುರಿತು ವರದಿ ಸಲ್ಲಿಸಲಿದೆ. ಇದರ ಜೊತೆಗೆ ಗ್ಯಾರೇಜ್‌ನಲ್ಲಿ ಸುಟ್ಟ ಬಸ್‌ಗಳ ಪರಿಸ್ಥಿತಿ (ಕಂಡೀಷನ್) ಹೇಗಿತ್ತು ಎಂಬೆಲ್ಲ ಮಾಹಿತಿ ಆಧರಿಸಿ ವರದಿ ಸಲ್ಲಿಸಲಿವೆ.

ಈ ಮೂರು ಇಲಾಖೆಗಳ ವರದಿ ಆಧರಿಸಿ ಗಿರಿನಗರ ಪೊಲೀಸರು ತನಿಖೆ ನಡೆಸಲಿದ್ದಾರೆ. ಇನ್ನೂ ಘಟನೆ ಬಳಿಕ ಸರ್ಕಾರಿ ಅಧಿಕಾರಿಗಳು ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕೀಟ್ ಕಾರಣವಿರಬೇಕು. ಇಲ್ಲವೇ ಟಿಂಕರಿಂಗ್ ಮಾಡುವಾಗಿ ವೆಲ್ಡಿಂಗ್ ಮಷಿನ್ ಕೆಲಸದ ವೇಳೆ ಕಿಡಿ ಹಾರಿ ಬಿದ್ದು ಬೆಂಕಿ ಹೊತ್ತಿಕೊಂಡಿರಬಹುದು. ಅಥವಾ ಪೆಟ್ರೋಲ್/ಆಯಿಲ್ ಸೋರಿಕೆ ಆಗಿದ್ದು, ಅದರಿಂದ ಬೆಂಕಿ ಹೊತ್ತಿಕೊಂಡಿರಬೇಕು ಎಂದು ಶಂಕಿಸಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ
ಹೀಗೆ ಅನೇಕ ಆಯಾಮಗಳಲ್ಲಿ ತನಿಖಾ ವರದಿಗಳು ಸಲ್ಲಿಕೆ ಆಗಲಿವೆ. ಇದರೊಂದಿಗೆ ಪೊಲೀಸರು ತನಿಖೆ ನಡೆಸಿ ಹಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಘಟನೆ ವೇಳೆ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲರು ಸ್ಥಳದಿಂದ ಹೊರ ಬಂದಿದ್ದಾರೆ.
ಇನ್ನೂ ಗ್ಯಾರೇಜ್ ಮಾಲೀಕ ಶ್ರೀನಿವಾಸ್ ಆರೋಗ್ಯ ಏರುಪೇರಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಘಟನೆ ಕುರಿತು ವಿವರಣೆ ಪಡೆಯಲು ಪೊಲೀಸರು ನೋಟಿಸ್ ನೀಡಿದ್ದಾರೆ. ಗ್ಯಾರೇಜ್ ಒಳಗೆ ಇಟ್ಟಿದ್ದ ಲಕ್ಷಾಂತರ ನಗದು ಹಣ ಸಹ ಸುಟ್ಟು ಭಸ್ಮವಾಗಿದೆ ಎಂದು ಈ ಬಗ್ಗೆಯು ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.












Click it and Unblock the Notifications