Bengaluru: ಕಸ ಸುರಿದ್ರೆ ಹುಷಾರ್! ಪ್ರಹರಿ ಕಣ್ಗಾವಲು ಮತ್ತಷ್ಟು ಬಿಗಿ; ಕ್ಯಾಮೆರಾದಲ್ಲಿ ಸೆರೆಯಾದ್ರೆ ಕಠಿಣ ಕ್ರಮ
Bengaluru : ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಖಾಲಿ ನಿವೇಶನಗಳು ಹಾಗೂ ಬ್ಲಾಕ್ ಸ್ಪಾಟ್‌ಗಳಲ್ಲಿ ಅನಧಿಕೃತವಾಗಿ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಲು ಪಾಲಿಕೆಯ 'ಪ್ರಹರಿ' ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 2 ಪ್ರಹರಿ ವಾಹನಗಳ ಜೊತೆಗೆ, ಘನತ್ಯಾಜ್ಯ ನಿರ್ವಹಣೆ ಹಾಗೂ ನಿಯಮ ಉಲ್ಲಂಘನೆಗಳ ಮೇಲಿನ ಕಣ್ಗಾವಲನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಹೊಸದಾಗಿ ಖರೀದಿಸಲಾದ 2 ಪ್ರಹರಿ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಒಟ್ಟು 4 ಪ್ರಹರಿ ವಾಹನಗಳ ಕಾರ್ಯಾಚರಣೆಗೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಚಾಲನೆ ನೀಡಿದರು.

Bengaluru: ಪ್ರಹರಿ ವಾಹನಗಳಿಂದ ಹದ್ದಿನ ಕಣ್ಣು
ಒಟ್ಟು 4 ಪ್ರಹರಿ ವಾಹನಗಳು ಎರಡು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯೂ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಗಸ್ತು ನಡೆಸಲಿವೆ. ವಿಶೇಷವಾಗಿ ಕಸ ಸುರಿಯುವಿಕೆ ಹೆಚ್ಚಾಗಿ ಕಂಡುಬರುವ ಪ್ರದೇಶಗಳು, Garbage Vulnerable Points/Black Spots, ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶಗಳು, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು.
ಎಲ್ಲಾ ಪ್ರಹರಿ ವಾಹನಗಳಲ್ಲಿ ಮುಂಭಾಗ ಹಾಗೂ ಹಿಂಭಾಗದ GPS ಆಧಾರಿತ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಗಸ್ತಿನ ಸಂದರ್ಭದಲ್ಲಿ ಕಂಡುಬರುವ ನಿಯಮ ಉಲ್ಲಂಘನೆಗಳನ್ನು ಫೋಟೋ, ವಿಡಿಯೋ, ಸಮಯ ಹಾಗೂ GPS ಸ್ಥಳ ಮಾಹಿತಿಯೊಂದಿಗೆ ದಾಖಲಿಸಲಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಸ ಅಥವಾ C&D ತ್ಯಾಜ್ಯ ಸುರಿಯುತ್ತಿರುವುದು ಕಂಡುಬಂದಲ್ಲಿ, ಲಭ್ಯವಾಗುವ ದೃಶ್ಯಾವಳಿ ಹಾಗೂ ಸ್ಥಳ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವ್ಯಕ್ತಿ/ಸಂಸ್ಥೆ/ವಾಹನವನ್ನು ಗುರುತಿಸಿ ಅನ್ವಯವಾಗುವ ನಿಯಮಗಳ ಪ್ರಕಾರ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕ ಸ್ಥಳ ಕಸದ ತೊಟ್ಟಿಯಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು,"ಸಾರ್ವಜನಿಕ ಸ್ಥಳ, ರಸ್ತೆ ಬದಿ, ಖಾಲಿ ನಿವೇಶನ ಅಥವಾ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯ ಸುರಿಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಈಗಿರುವ 2 ಪ್ರಹರಿ ವಾಹನಗಳಿಗೆ ಹೊಸದಾಗಿ 2 ವಾಹನಗಳನ್ನು ಸೇರ್ಪಡೆಗೊಳಿಸಿ ಒಟ್ಟು 4 ವಾಹನಗಳ ಮೂಲಕ 24x7 ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲಾಗಿದೆ. GPS ಆಧಾರಿತ ಡ್ಯಾಶ್ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘನೆಗಳನ್ನು ದಾಖಲಿಸಲಾಗುವುದು. ಕಸ ಸುರಿದು ಯಾರಿಗೂ ಗೊತ್ತಾಗುವುದಿಲ್ಲ ಅಥವಾ ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಬೇಡ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಸ್ಪಾಟ್‌ಗಳ ಮರುಸೃಷ್ಟಿಗೆ ಕಡಿವಾಣ
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿ ಸ್ವಚ್ಛಗೊಳಿಸಿರುವ Garbage Vulnerable Points/Black Spotsಗಳಲ್ಲಿ ಮತ್ತೆ ಕಸ ಸುರಿಯುವುದನ್ನು ತಡೆಯಲು ಪ್ರಹರಿ ವಾಹನಗಳ ಮೂಲಕ ನಿರಂತರ ನಿಗಾ ವಹಿಸಲಾಗುವುದು. ಹೊಸ ಬ್ಲಾಕ್ ಸ್ಪಾಟ್‌ಗಳು ಸೃಷ್ಟಿಯಾಗದಂತೆ ತಡೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ತ್ಯಾಜ್ಯ ವಿಲೇವಾರಿಯನ್ನು ನಿಯಂತ್ರಿಸುವುದು ಹಾಗೂ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ಕಸ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಘನತ್ಯಾಜ್ಯ ನಿಯಮ ಉಲ್ಲಂಘನೆಗಳ ಮೇಲೆ ನಿಗಾ
- ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಸ ಸುರಿಯುವುದು
- ಬ್ಲಾಕ್ ಸ್ಪಾಟ್‌ಗಳಲ್ಲಿ ಪದೇಪದೇ ತ್ಯಾಜ್ಯ ಎಸೆಯುವುದು
- ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಜಾಗಗಳಲ್ಲಿ ತ್ಯಾಜ್ಯ ಸುರಿಯುವುದು
- ಕಟ್ಟಡ ಮತ್ತು ಅವಶೇಷ ತ್ಯಾಜ್ಯವನ್ನು (C&D Waste) ಅನಧಿಕೃತವಾಗಿ ಸುರಿಯುವುದು
- ವಾಣಿಜ್ಯ ಸಂಸ್ಥೆಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು
- ತ್ಯಾಜ್ಯ ಸಾಗಣೆ ವೇಳೆ ರಸ್ತೆಗಳಲ್ಲಿ ತ್ಯಾಜ್ಯ ಚೆಲ್ಲುವುದು
- ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಇತರೆ ನಿಯಮ ಉಲ್ಲಂಘನೆಗಳು
ಎಲ್ಲಾ 4 ಪ್ರಹರಿ ವಾಹನಗಳ GPS ಸ್ಥಳ, ಸಂಚಾರ ಹಾಗೂ ಕಾರ್ಯಾಚರಣೆಯನ್ನು ಆ್ಯಪ್ ಆಧಾರಿತ Remote Access ಮೂಲಕ ಕಂಟ್ರೋಲ್ ರೂಂ ಮತ್ತು ಹಿರಿಯ ಅಧಿಕಾರಿಗಳು ನೇರವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ.
ವಾಹನಗಳಿಂದ ದಾಖಲಾಗುವ ಫೋಟೋ, ವಿಡಿಯೋ ಮತ್ತು GPS ಮಾಹಿತಿಯನ್ನು ಪಾಲಿಕೆಯ ಕಂಟ್ರೋಲ್ ರೂಂ ಹಾಗೂ ಐಟಿ ತಂಡ ಪ್ರತಿದಿನ ಪರಿಶೀಲಿಸಿ, ಗುರುತಿಸಲಾದ ಸಮಸ್ಯೆಗಳು ಹಾಗೂ ಅವುಗಳ ಮೇಲೆ ಕೈಗೊಂಡ ಕ್ರಮಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದೆ.
4 'ಪ್ರಹರಿ' - 24x7 ಕಣ್ಗಾವಲು
ಒಟ್ಟು 4 ಪ್ರಹರಿ ವಾಹನಗಳು ಎರಡು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಪ್ರತಿ ವಾಹನದಲ್ಲಿ ಚಾಲಕ ಮತ್ತು ಮಾರ್ಷಲ್ ಕಾರ್ಯನಿರ್ವಹಿಸಲಿದ್ದಾರೆ. ಈ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗಾಗಿ ಒಟ್ಟು 24 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಸ ವಿಲೇವಾರಿ
ಪ್ರಹರಿ ವಾಹನಗಳು ಕೇವಲ ದೂರುಗಳಿಗೆ ಸ್ಪಂದಿಸುವ ವಾಹನಗಳಾಗಿರದೆ, ಅನಧಿಕೃತ ತ್ಯಾಜ್ಯ ವಿಲೇವಾರಿಯನ್ನು ಪತ್ತೆಹಚ್ಚುವ, ಬ್ಲಾಕ್ ಸ್ಪಾಟ್‌ಗಳ ಮೇಲೆ ನಿಗಾ ವಹಿಸುವ ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನವನ್ನು ಬಲಪಡಿಸುವ 'ಮೊಬೈಲ್ ಕಣ್ಗಾವಲು ಮತ್ತು ಜಾರಿ ಘಟಕ'ಗಳಾಗಿ ಕಾರ್ಯನಿರ್ವಹಿಸಲಿವೆ. ಬೆಂಗಳೂರು
"ಕಸವನ್ನು ಎಲ್ಲೆಂದರಲ್ಲಿ ಸುರಿಯಬೇಡಿ: ನಿಯಮಬದ್ಧವಾಗಿ ವಿಲೇವಾರಿ ಮಾಡಿ. ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದರೆ 'ಪ್ರಹರಿ' ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಸಾರ್ವಜನಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ತ್ಯಾಜ್ಯ ಉತ್ಪಾದಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.


Click it and Unblock the Notifications
