Bengaluru Bbmp: ನಿಮ್ಮ ಮನೆ ಬಾಗಿಲಿಗೆ ಬರ್ತಾರೆ ಬಿಬಿಎಂಪಿ ಕಮಿಷನರ್!
ಬೆಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಒಂದಾಗಿದೆ. ಈ ಮಹಾನಗರ ಪಾಲಿಕೆಯ ಕೆಲಸದ ಬಗ್ಗೆ ಜನ ಬೈಯುವುದೇ ಜಾಸ್ತಿ. ಇದಕ್ಕೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಾಡುವ ಕೆಲಸವೂ ಕಾರಣ. ಬಿಬಿಎಂಪಿ ಮಾಡುವ ಕೆಲಸಗಳಲ್ಲಿ ಒಂದು ಸರಿ ಇದ್ದರೆ ಮತ್ತೊಂದು ಸರಿ ಇರೊಲ್ಲ. ಈಚೆಗೆ ಸುರಿದ ಮಳೆಯಿಂದ ಬೆಂಗಳೂರಲ್ಲಿ ಸೃಷ್ಟಿಯಾದ ಭಾರೀ ಅವಾಂತರಗಳೇ ಇದಕ್ಕೆ ತಾಜಾ ಉದಾಹರಣೆ. ಇದೀಗ ಬಿಬಿಎಂಪಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಜನರಿಗೆ ಮತ್ತಷ್ಟು ಹತ್ತಿರವಾಗುವುದಕ್ಕೆ ಮುಂದಾಗಿದೆ.
ಬೆಂಗಳೂರಿನ ಬಿಬಿಎಂಪಿ ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲರ್‌ಗಳಿಲ್ಲದೆ ನಾಲ್ಕು ವರ್ಷಗಳೇ ಕಳೆದಿವೆ. ಈ ಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ. ಬಿಬಿಎಂಪಿ ಚುನಾವಣೆಗೆ ಹಲವು ಅಡೆತಡೆಗಳಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಈ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎನ್ನುವುದು ಬೆಂಗಳೂರಿನ ಜನರ ಆರೋಪ.

ಇನ್ನು ಬೆಂಗಳೂರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೌನ್ಸಿಲರ್, ಮೇಯರ್ ಹಾಗೂ ಉಪ ಮೇಯರ್‌ಗಳು ಇಲ್ಲದೆ ಜನ ಅವರ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎನ್ನುವುದು ತಿಳಿಯದೆ ಪರದಾಡುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿಗಳದ್ದೇ ದರ್ಬಾರು ಅಂತ ಹೇಳಲಾಗ್ತಿದೆ. ಇದೀಗ ಬಿಬಿಎಂಪಿಯ ಅಧಿಕಾರಿಗಳು ಜನರ ಬಳಿಯೇ ಹೋಗಲು ನಿರ್ಧರಿಸಿದ್ದಾರೆ. ಇದನ್ನು ಕೇಳಿಯೇ ಬೆಂಗಳೂರಿನ ಜನರು ತುಸು ನಿಟ್ಟುಸಿರು ಬಿಡುತ್ತಿದ್ದಾರೆ.
ಯಾಕೆಂದರೆ ಬೆಂಗಳೂರಲ್ಲಿ ಮಳೆ, ಕಸದ ಸಮಸ್ಯೆ, ರಸ್ತೆಗುಂಡಿ ಹಾಗೂ ರಾಜಕಾಲುವೆ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳಿದ್ದು, ಈ ಸಮಸ್ಯೆಗಳನ್ನು ಜನ ಯಾರ ಬಳಿ ನೇರವಾಗಿ ಹೇಳಿಕೊಳ್ಳಬೇಕು ಅಂತ ತಿಳಿಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿಂದೆ ಪಾಲಿಕೆಯ ಪ್ರತಿ ವಾರ್ಡ್‌ಗೂ ಒಬ್ಬರು ಪಾಲಿಕೆಯ ಸದಸ್ಯರು ಇರುತ್ತಿದ್ದರು. ಜನ ಅವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಈಗ ಅದಕ್ಕೆ ಚಾನ್ಸೇ ಇಲ್ಲ. ಇದೀಗ ಈ ಸಮಸ್ಯೆಗಳನ್ನು ತಪ್ಪಿಸಲು ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು (ಸಮಸ್ಯೆ) ಪರಿಹರಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಮುಖ್ಯ ಆಯುಕ್ತ ನಡೆ ವಲಯದ ಕಡೆ ಅನ್ನುವ ಕಾನ್ಸೆಪ್ಟ್ ಅನ್ನು ಬಿಬಿಎಂಪಿ ಪರಿಚಯಿಸಿದೆ. ಅಲ್ಲದೇ ಬಿಬಿಎಂಪಿಯಲ್ಲಿ ಒಟ್ಟು 8 ಜೋನ್‌ಗಳಿವೆ (ವಲಯ) ಈ ವಲಯಗಳಲ್ಲಿ ಏನಾಗ್ತಿದೆ ಅಂತ ನೋಡೋದು ಸಹ ಇದರ ಹಿಂದಿನ ಉದ್ದೇಶವಾಗಿದೆ. ವಲಯ ಮಟ್ಟದಲ್ಲಿ ನಡೆಯುತ್ತಿರುವ ಕೆಲಸಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವುದು ಸೇರಿದಂತೆ ಒಟ್ಟಾರೆ ಬೆಳವಣಿಗೆ ಗಮನಿಸುವುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಲಯದ ಕಡೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.
ಇದಕ್ಕೆ ಬಿಬಿಎಂಪಿಯು ಮುಖ್ಯ ಆಯುಕ್ತರ ನಡೆ ವಲಯದ ಕಡೆ ಅಂತ ಹೆಸರಿಡಲಾಗಿದೆ. ಇದರಂತೆ ಪ್ರತಿ ತಿಂಗಳ ಮಂಗಳವಾರ ಹಾಗೂ ಶುಕ್ರವಾರದಂದು ಪಾಲಿಕೆ ಎಲ್ಲಾ 8 ವಲಯಗಳಿಗೆ ಭೇಟಿ ನೀಡಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕ್ಷೇತ್ರ ಭೇಟಿ ಮತ್ತು ಅಧಿಕಾರಿಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಚರ್ಚೆ ಮಾಡಲಿದ್ದಾರೆ. ಅಲ್ಲದೇ ಮಧ್ಯಾಹ್ನ 3.00 ರಿಂದ ಸಂಜೆ 5.00 ಗಂಟೆಯ ವರೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಆದ್ಯತೆ ನೀಡಲಿದ್ದಾರೆ.
ಯಾವ ವಲಯದಲ್ಲಿ ಯಾವಾಗ ಮುಖ್ಯ ಆಯುಕ್ತರ ಭೇಟಿ
1. ಪ್ರತಿ ತಿಂಗಳ ಮೊದಲನೇ ಮಂಗಳವಾರ: ಪೂರ್ವ ವಲಯ
2. ಪ್ರತಿ ತಿಂಗಳ ಮೊದಲನೇ ಶುಕ್ರವಾರ: ಪಶ್ಚಿಮ ವಲಯ
3. ಪ್ರತಿ ತಿಂಗಳ ಎರಡನೇ ಮಂಗಳವಾರ: ದಕ್ಷಿಣ ವಲಯ
4. ಪ್ರತಿ ತಿಂಗಳ ಎರಡನೇ ಶುಕ್ರವಾರ:ರಾಜರಾಜೇಶ್ವರಿ ನಗರ ವಲಯ
5. ಪ್ರತಿ ತಿಂಗಳ ಮೂರನೇ ಮಂಗಳವಾರ: ಬೊಮ್ಮನಹಳ್ಳಿ ವಲಯ
6. ಪ್ರತಿ ತಿಂಗಳ ಮೂರನೇ ಶುಕ್ರವಾರ: ಮಹದೇವಪುರ ವಲಯ
7. ಪ್ರತಿ ತಿಂಗಳ ನಾಲ್ಕನೇ ಮಂಗಳವಾರ: ಯಲಹಂಕ ವಲಯ
8. ಪ್ರತಿ ತಿಂಗಳ ನಾಲ್ಕನೇ ಶುಕ್ರವಾರ: ದಾಸರಹಳ್ಳಿ ವಲಯ












Click it and Unblock the Notifications