ಬೆಂಗಳೂರು ಕಡಲೆಕಾಯಿ ಪರಿಷೆ: ಈ ಬಾರಿ ಐತಿಹಾಸಿಕ ಹೊಸ ದಾಖಲೆ!
ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾದ ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಯು ಈ ವರ್ಷ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಅಲ್ಲದೇ ಈ ಬಾರಿ ಕಡಲೆಕಾಯಿ ಪರಿಷೆಯು ಇತಿಹಾಸ ಸೃಷ್ಟಿ ಮಾಡಿದೆ. ಬಸವನಗುಡಿಯ ಸುತ್ತಮುತ್ತಲಿನ ರಸ್ತೆಗಳು ಜನಜಾತ್ರೆಯಿಂದ ಸಂಭ್ರಮದಲ್ಲಿ ಮುಳುಗಿ ಹೋಗಿದೆ ಎಂದರೆ ತಪ್ಪಾಗಲಾರದು. ಮೂರು ದಿನಗಳಲ್ಲಿ ಅರು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ.
ಮುಜರಾಯಿ ಇಲಾಖೆಯು ಈ ವರ್ಷ ಅಧಿಕೃತವಾಗಿಯೇ ಐದು ದಿನಗಳ ಕಾಲಕ್ಕೆ ಪರಿಷೆಯನ್ನು ವಿಸ್ತರಿಸಿ ಅಚ್ಚುಕಟ್ಟಾಗಿ ಆಯೋಜಿಸಿದೆ. ಸೋಮವಾರ ಪರಿಷೆ ಆರಂಭವಾಗಿದ್ದರೂ, ಶನಿವಾರದಿಂದಲೇ ಜಾತ್ರೆ ಸಡಗರ ಆರಂಭವಾಗಿತ್ತು. ಶುಕ್ರವಾರಕ್ಕೆ ಮುಗಿದರೂ ವಾರಾಂತ್ಯವಿರುವುದರಿಂದ ಭಾನುವಾರದವರೆಗೂ ಜನಸಂದಣಿ ಇರಲಿದೆ ಎಂದು ಪೊಲೀಸ್ ಇಲಾಖೆ ಅಂದಾಜಿಸಿದೆ.

ಕಡಲಕಾಯಿ ಪರಿಷೆಯಲ್ಲಿ ಇದೇ ಮೊದಲನೇ ಬಾರಿಗೆ ವಿಶೇಷ ದೀಪಾಲಂಕಾರ ಮತ್ತು ದೇವಸ್ಥಾನ ಮತ್ತು ಆವರಣದಲ್ಲಿ ಹೂವಿನ ವಿಶೇಷ ಅಲಂಕಾರ ವ್ಯವಸ್ಥೆ. ಬಸವ ಗುಡಿ, ಗಾಂಧಿ ಬಜಾರ್, ಆರ್‌ವಿ ರಸ್ತೆ, ನೆಟ್ಟ್ಕಲ್ಲಪ್ಪ ಸರ್ಕಲ್, ಎನ್ ಆರ್ ರಸ್ತೆಯಲ್ಲಿ ವಿಶೇಷ ದೀಪಾಲಂಕಾರ ಹಾಗೂ ದೇವಸ್ಥಾನ ಮತ್ತು ಆವರಣದಲ್ಲಿ ವೈಶಿಷ್ಟ್ಯಪೂರ್ಣ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿವೆ.
ಬೆಂಗಳೂರಿನ ಜನರಿಗೆ ಜಾತ್ರೆಯ ಸೊಬಗು ನೀಡಿದ ಕಡಲೆ ಕಾಯಿಪರಿಷೆ
ದೊಡ್ಡ ಬಸವಣ್ಣನೊಂದಿಗೆ ದೊಡ್ಡ ಗಣಪತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು, ನಂತರ ಕಡಲೆಕಾಯಿ ಖರೀದಿಸಿದರು. ನವೆಂಬರ್ 17ರ ಸೋಮವಾರದಿಂದ ಅಧಿಕೃತವಾಗಿ ಪರಿಷೆ ಪ್ರಾರಂಭವಾಗಿದ್ದರೂ ಸಹ ಶನಿವಾರದಿಂದಲೇ ವ್ಯಾಪಾಸ್ಥರು, ಜನರು ಜಮಾಯಿಸಿದ್ದರು. ಜನರು ಪರಿಷೆಗೆ ಬಂದು ಕಡಲೆಕಾಯಿ ಖರೀದಿಸಿ, ಸಂಜೆಯ ವೇಳೆಯಲ್ಲಿ ಕಾಲಿಡಲೂ ಸಾಧ್ಯವಿಲ್ಲದಷ್ಟು ಜನರಾಶಿ ಬಸವನಗುಡಿ ಮುಖ್ಯ ರಸ್ತೆಯಲ್ಲಿ ಕಂಡುಬಂತು. ಅಲ್ಲದೇ ಪರಿಷೆಯಲ್ಲಿ ಈ ಬಾರಿ 4,500ಕ್ಕೂ ಮಳಿಗೆಗಳಿವೆ. ಪ್ರತಿದಿನವೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಬೆಂಗಳೂರು ನಗರದ ನಿವಾಸಿಗಳಲ್ಲದೆ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜನರು ಹೆಚ್ಚಾಗಿ ಬರುತ್ತಿದ್ದಾರೆ.
ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಪ್ರತಿದಿನವೂ ಬಸವನಗುಡಿ ಪ್ರದೇಶಕ್ಕೆ ಭೇಟಿ ನೀಡಿ, ವ್ಯವಸ್ಥೆಗಳ ಮೇಲೆ ಖುದ್ದು ನಿಗಾವಹಿಸುತ್ತಿದ್ದಾರೆ. ಪರಿಷೆ ನಡೆಯುತ್ತಿರುವ ಪ್ರಮುಖ ರಸ್ತೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೇ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
ರಸ್ತೆಯ ಎರಡೂ ಬದಿಯ ಜೊತೆಗೆ ಮಧ್ಯಭಾಗದಲ್ಲೂ ಕಡಲೆಕಾಯಿಯನ್ನು ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ. ಹಸಿ, ಒಣ ಬೇಯಿಸಿದ, ಹುರಿದ ಕಡಲೆಕಾಯಿ , ಹತ್ತು ಹಲವು ಬಗೆಯ ಕಡಲೆಕಾಯಿಯ ಆಕರ್ಷಣೆಯ ಜತೆಗೆ ಬೇಲ್, ಬಜ್ಜಿ, ಮಸಾಲ ಹಪ್ಪಳ, ಅಲೂ ಟ್ವಿಸ್ಟರ್ ಸೇರಿದಂತೆ ವಿವಿಧ ಭಕ್ಷ್ಯಗಳು, ಆಟಿಕೆ ಆಕರ್ಷಿಸುತ್ತಿವೆ. ಜಗಮಗಿಸುವ ಬೆಳಕಿನಲ್ಲಿ ಆಟದ ಮೋಜು ಸಹ ಇದೆ. ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಕಡಲೆಕಾಯಿ ಖರೀದಿಸಿ ಕೊಂಡೊಯ್ಯಲು ಹಲವು ಮಂದಿ ಬಟ್ಟೆಯ ಚೀಲಗಳನ್ನು ತಂದಿದ್ದು, ಪರಿಸರ ಸ್ನೇಹಿ ಪರಿಷೆಗೆ ಸಾಕ್ಷಿಯಾಗಿದೆ.
ಬಸವನಗುಡಿಯ ಪರಿಷೆಯಲ್ಲಿ ಕಡಲೆಕಾಯಿ ಮಾರಾಟದ ವಹಿವಾಟು ಒಂದು ಕೋಟಿಗೂ ಹೆಚ್ಚಾಗಿದೆ ಎನ್ನಲಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಮಳಿಗೆಗಳಿದ್ದು, ವ್ಯಾಪಾರವೂ ಚೆನ್ನಾಗಿ ಆಗಿದೆ. ಮಳಿಗೆಗೆ ಶುಲ್ಕ ವಿನಾಯಿತಿ ನೀಡಿರುವುದರಿಂದ ವ್ಯಾಪಾರಿಗಳು ಸಂತಸದಿಂದ , ಕಳೆದ ಶುಕ್ರವಾರದಿಂದಲೇ ಸಾಕಷ್ಟು ಮಂದಿ ಮಳಿಗೆ ಪ್ರಾರಂಭಿಸಿ ವ್ಯಾಪಾರ ಮಾಡುತ್ತಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದಿಂದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಈ ವರುಷ ಜರುಗುತ್ತಿರುವ ಕಡಲೆಕಾಯಿ ಪರಿಷೆಯು ಹಲವು ವೈಶಿಷ್ಟ್ಯಗಳಿಂದ ಜನಮನ ಸೆಳೆಯುತ್ತಿದೆ.












Click it and Unblock the Notifications