KIA: ಬೆಂಗಳೂರು ಏರ್‌ಪೋರ್ಟ್‌ನಿಂದ ಕರ್ನಾಟಕಕ್ಕೆ ಡಿವಿಡೆಂಡ್ ಧಮಾಕಾ; ಬಿಐಎಎಲ್ ಭರ್ಜರಿ ಲಾಭ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (BIAL) ತನ್ನಲ್ಲಿ ಶೇ.13ರಷ್ಟು ಬಂಡವಾಳ ಪಾಲು ಹೊಂದಿರುವ ರಾಜ್ಯ ಸರಕಾರಿ ಸ್ಯಾಮ್ಯದ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (KSIIDC) 2025-26ನೇ ಸಾಲಿಗೆ ಅನ್ವಯವಾಗುವಂತೆ 16,49,93,400 ರೂ.ಗಳ ಲಾಭಾಂಶ (ಡಿವಿಡೆಂಡ್) ಸೋಮವಾರ ಹಸ್ತಾಂತರಿಸು ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಐಎಎಲ್ ಅಧ್ಯಕ್ಷ ಹರಿ ಮರಾರ್ ಅವರಿಂದ ಚೆಕ್ ಸ್ವೀಕರಿಸಿದರು. ಬಿಐಎಎಲ್ 2025-26ನೇ ಸಾಲಿಗೆ ಅನ್ವಯವಾಗುವಂತೆ ಪ್ರತೀ ಷೇರಿಗೆ 3 ರೂಪಾಯಿ ಲಾಭಾಂಶ ಘೋಷಿಸಿದೆ. ಇದರಂತೆ ಕೆಎಸ್ಐಐಡಿಸಿಗೆ 16.49 ಕೋಟಿ ರೂಪಾಯಿ ಒಟ್ಟು ಲಾಭಾಂಶ ಕೊಡಲಾಗಿದೆ. ಇದರಲ್ಲಿ ತೆರಿಗೆ ಕಡಿತದ ನಂತರ ಆ ಸಂಸ್ಥೆಗೆ 14.84 ಕೋಟಿ ರೂಪಾಯಿ ಡಿವಿಡೆಂಡ್ ಸಿಕ್ಕಿದೆ ಎಂದಿದ್ದಾರೆ.

ಈ ಲಾಭಾಂಶ ಘೋಷಣೆಯು ಬಿಐಎಎಲ್ ಸಂಸ್ಥೆಯ ಅತ್ಯುತ್ತಮ ಆರ್ಥಿಕ ನಿರ್ವಹಣೆಯ ಸಂಕೇತವಾಗಿದೆ. ಸಂಸ್ಥೆಯಲ್ಲಿ ಕೆಎಸ್ಐಐಡಿಸಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದೆ. ಬಿಐಎಎಲ್ ಸಂಸ್ಥೆಯು 2017-18ರ ಬಳಿಕ ಇದೇ ಮೊದಲ ಬಾರಿಗೆ ಡಿವಿಡೆಂಡ್ ಘೋಷಿಸಿದೆ. ಈ ಮಧ್ಯೆ ನಾವು ಬಂದ ಲಾಭವನ್ನು ಮೂಲಸೌಕರ್ಯ ಮತ್ತು ಸಾಮರ್ಥ್ಯ ವಿಸ್ತರಣೆಯಂತಹ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳನ್ನು ದೃಢಗೊಳಿಸಿದ್ದೇವೆ ಎಂದು ಅವರು ತಿಳಿಸಿದರು.
ವಿವಿಧ ಕಂಪನಿಗಳ ಬಂಡವಾಳ ಪಾಲು ಎಷ್ಟಿದೆ?
ಮಿಕ್ಕಂತೆ ಬಿಐಎಎಲ್ ನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಶೇ.13, ಎಫ್ಐಎಚ್ ಮಾರಿಷಸ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ ಶೇಕಡ 30.36 ಮತ್ತು ಆ್ಯಂಕರೇಜ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟಮೆಂಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಶೇಕಡ 43.64ರಷ್ಟು ಬಂಡವಾಳ ಪಾಲು ಹೊಂದಿವೆ ಎಂದು ಅವರು ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ BIAL ಸಂಸ್ಥೆಯಲ್ಲಿ KSIIDC ಹೊಂದಿರುವ ಶೇ.13 ಹೂಡಿಕೆಗೆ 2025–26ನೇ ಸಾಲಿನಲ್ಲಿ 16.49 ಕೋಟಿ ರೂ. ಲಾಭಾಂಶ ಲಭಿಸಿರುವುದು ಹೆಮ್ಮೆಯ ಸಂಗತಿ. ಈ ದಿನ ಲಾಭಾಂಶದ ಚೆಕ್ ಅನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ಇಂಟರ್‍ನ್ಯಾಷನಲ್ ಏರ್‍ಪೊರ್ಟ್ ಲಿಮಿಟೆಡ್ (ಬಿಐಎಎಲ್) ಅಚ್ಚಕಟ್ಟಾಗಿ ನಿರ್ವಹಿಸುತ್ತಿದೆ. ಇಲ್ಲಿಂದ ವಾರ್ಷಿಕ 44 ಮಿಲಿಯನ್ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಸರುಕು ಸಾಗಣೆಯಲ್ಲೂ ಕೆಐಎ ಮೈಲಿಗಲ್ಲು ಸಾಧಿಸಿದೆ. ಭವಿಷ್ಯದ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಬಿಐಎಎಲ್ ಮೂರನೇ ಟರ್ಮಿನಲ್ ನಿರ್ಮಿಸಲು ಸಹ ಯೋಜಿಸಿದೆ.













Click it and Unblock the Notifications