20 ಕಂಪನಿಗಳಿಗೆ ಬೇಲೇಕೇರಿ ಗಣಿ ಸಂಕಷ್ಟ

ಸುಪ್ರೀಂ ಕೋರ್ಟ್ ನ ಅರಣ್ಯ ಪೀಠ ಸೆ.16ರಂದು ಈ ಆದೇಶ ಹೊರಡಿಸಿದ್ದು, ಅದರ ಪ್ರತಿ ಅ.4ರಂದು ಬೆಂಗಳೂರಿನ ಸಿಬಿಐ ಕಚೇರಿ ಹಾಗೂ ರಾಜ್ಯ ಸರ್ಕಾರಕ್ಕೆ ತಲುಪಿದೆ. ಈ ಆದೇಶದಿಂದಾಗಿ ತಮಿಳುನಾಡು, ಹರ್ಯಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಅಕ್ರಮ ಗಣಿಗಾರಿಕೆ ಪ್ರಕರಣ ವಿಸ್ತರಣೆ ಆಗಲಿದೆ.
ಈ ಆದೇಶದಿಂದಾಗಿ ಬಳ್ಳಾರಿ ಶಾಸಕ ಅನಿಲ್ ಲಾಡ್, ಅಖಿಲ ಭಾರತ ಗಣಿ ಮಾಲೀಕ ಸಂಘದ ಅಧ್ಯಕ್ಷರಾಗಿದ್ದ ರಾಹುಲ್ ಬಲ್ಡೋಟಾ, ಗಣಿ ಮಾಲೀಕ ದಿನೇಶ್ ಸಂಘಿ ಮತ್ತು ಇತರರಿಗೂ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ತೀರ್ಪಿನಲ್ಲಿ ಒಟ್ಟು 20 ಕಂಪನಿಗಳನ್ನು ಪಟ್ಟಿ ಮಾಡಿದ್ದು, ಅವುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಈ ಕಂಪನಿಗಳಲ್ಲಿ ವಿಎಸ್‌ಎಲ್ ಮೈನಿಂಗ್ ಪ್ರೈ.ಲಿ. ಕಂಪನಿಯೂ ಸೇರಿದೆ. ಇದು ಬಳ್ಳಾರಿ ಶಾಸಕ, ಕಾಂಗ್ರೆಸ್ ಮುಖಂಡ ಅನಿಲ್‌ಲಾಡ್ ಅವರಿಗೆ ಸೇರಿದ್ದು. ಇದರಿಂದಾಗಿ ಅನಿಲ್ ಲಾಡ್ ಅವರಿಗೂ ಗಣಿ ಕಂಟಕ ಎದುರಾಗಿದೆ.
ಸಿಇಸಿ ವರದಿ ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ 2012 ಸೆ.7 ರಂದು ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಅಧಿಕೃತ ಪರವಾನಗಿ ಇಲ್ಲದೆ ಅದಿರು ರಫ್ತು ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು.
ಸಿಬಿಐ ಈಗಾಗಲೇ ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಎಫ್‌ಐಆರ್ ದಾಖಲು ಮಾಡಿದೆ. ಅಧಿಕೃತವಾದ ಪರವಾನಗಿ ಇಲ್ಲದೆ ರಫ್ತು ಮಾಡಿದವರ ಮೇಲೆ ಕ್ರಮಕ್ಕೆ ಸಿಬಿಐ ಸುಪ್ರೀಂಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ಅರ್ಜಿ ಹಿನ್ನೆಲೆಯಲ್ಲಿ 2009 ಜ.1ರಿಂದ 2010 ಮೇ 31ರವರೆಗೆ 50 ಸಾವಿರ ಟನ್‌ಗಳಿಗಿಂತಲೂ ಹೆಚ್ಚು ರಫ್ತು ಮಾಡಿರುವ 20 ಕಂಪನಿಗಳ ಮೇಲೆ ಕ್ರಿಮಿನಲ್ ಪ್ರಕರಣ ಹೂಡುವಂತೆ ಸುಪ್ರೀಂ ಆದೇಶ ನೀಡಿದೆ.
ಕಂಪನಿಗಳು : ಅಕ್ರಮ ಅದಿರು ಸಾಗಣೆ ಆರೋಪದ ಮೇಲೆ ತನಿಖೆ ಎದುರಿಸಲಿರುವ ಕಂಪನಿಗಳ ಪಟ್ಟಿ ಹೀಗಿದೆ. ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್, ಮಿನರಲ್ ಎಂಬೆಸ್ಸಿ, ರಾಜಮಹಲ್ ಸಿಲ್ಕ್, ಶ್ರೀವೆಂಕಟೇಶ್ವರ ಟ್ರಾನ್ಸ್‌ಪೋರ್ಟ್, ಎಂಎಸ್‌ಪಿಎಲ್ ಬಲ್ಡೋಟ ಎನ್‌ಸಿವೆ, ಅದಾನಿ ಎಂಟರ್ ಪ್ರೈಸಸ್, ಭಾರತ್ ಮೈನ್ಸ್ ಅಂಡ್ ಮಿನಿರಲ್ಸ್, ಹೆಚ್‌ಎಲ್‌ಎಲ್ ಲೈಪ್ ಕೋರ್ ಲಿಮಿಟೆಡ್, ಇಂಟರ್ ನ್ಯಾಷನಲ್ ನರ್ಸ್‌ಸ್ ಕಾಫಿ ಕಂಪನಿ.
ಎಸ್‌ವಿಎಂ ನೆಟ್ ಪ್ರಾಜೆಕ್ಟ್ ಸಲ್ಯೂಷನ್ ಲಿಮಿಟೆಡ್, ಅಕ್ಷತಾ ಮಿನಿರಲ್ಸ್ ಪ್ರೈವೇಟ್ ಲಿಮಿಟೆಡ್, ಅಲ್ ಪೈನ್ ಇಂಟರ್ ನ್ಯಾಷನಲ್ ಪ್ರೈವೇಟ್ ಇಂಡಿಯಾ ಲಿಮಿಟೆಡ್, ವಿಎಸ್‌ಎಲ್ ಮೈನಿಂಗ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂಪನಿ, ದಕ್ಷ ಮಿನರಲ್ಸ್ ಅಂಡ್ ಮೈನಿಂಗ್ ಕಂಪನಿ, ಸ್ಟೀರ್ ಓವರ್ ಸೀಸ್ ಪ್ರೈವೇಟ್ ಲಿಮಿಟೆಡ್, ಹರ್ಷದ್ ಎಕ್ಸ್‌ಪೋರ್ಟ್‌ರ್ ಮತ್ತು ಪ್ರಿಂಟೆಕ್ಸ್ ಪ್ರೈವೇಟ್ ಲಿಮಿಟೆಡ್.
ಕಂಬಿಗಾಗಿ ಕ್ಯೂ : ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು 5 ಎಫ್‌ಐಆರ್ ಮಾತ್ರ ದಾಖಲಿಸಿದ್ದು, ಅದರಲ್ಲಿ ಸುಮಾರು 3 ಶಾಸಕರು ಸೇರಿ 24 ಜನರು ಜೈಲು ಸೇರಿದ್ದಾರೆ.
ಇದೀಗ 20 ಎಕ್ಸ್‌ಪೋರ್ಟ್ ಕಂಪನಿಗಳ ಮೇಲೆ ಕ್ರಿಮಿನಲ್ ಪ್ರಕರಣ ಹೂಡಲು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಮತ್ತಷ್ಟು ಜನರು ಜೈಲು ಪಾಲಾಗಲಿದ್ದಾರೆ.












Click it and Unblock the Notifications