ಮುಸ್ಲಿಮರು ಹೆಮ್ಮೆ ಪಡಬೇಕಾಗಿದ್ದು ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ನೆನೆದು, ಕೋಳಿ ಫಯಾಜ್ ಅಲ್ಲ: ನಾರಾಯಣಗೌಡ್ರು.ಟಿ.ಎ
ಕರ್ನಾಟಕದ ಇತಿಹಾಸ, ಪರಂಪರೆಯಲ್ಲಿ ಮುಸ್ಲಿಮರ ಪಾತ್ರ ಬಹಳ ಮುಖ್ಯವಾಗಿದೆ ಎಲ್ಲಾ ಧರ್ಮದವರೂ ಕನ್ನಡವನ್ನು ಅಪ್ಪಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ್ರು ಹೇಳಿದ್ದಾರೆ. ಇಸ್ಲಾಂ ಧರ್ಮಗುರುಗಳಾದ ಸನ್ಮಾನ್ಯ ಅಮೀರ್ -ಎ- ಶರಿಯತ್ ಸೈಯದ್ ಸಗೀರ್ ಅಹ್ಮದ್ ಸಾಬ್ ರಶಾದಿ ಮತ್ತು ಅವರ ಸಹೋದ್ಯೋಗಿಗಳನ್ನು ಭೇಟಿ ಮಾಡಿ ಅವರು ಚರ್ಚೆ ಮಾಡಿದ್ದಾರೆ. ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಬೆರೆತು ಸಹಬಾಳ್ವೆಯಿಂದ ಬಾಳುವ ಪ್ರಸ್ತಾಪವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ನನ್ನ ಮಾತುಗಳಿಗೆ ಸ್ಪಂದಿಸಿದರು, ಗೌರವಿಸಿದರು. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಅವರು ಹೇಳಿದ್ದಾರೆ.
ಮುಂದುವರಿದು ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ಉರ್ದು, ಬ್ಯಾರಿ ನುಡಿಗಳನ್ನು ಆಡುತ್ತಾರೆ. ಕನ್ನಡವನ್ನೇ ಮಾತೃಭಾಷೆಯಾಗಿ ಉಳ್ಳ ಮುಸ್ಲಿಮರೂ ಕೂಡ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಹೀಗಿರುವಾಗ ಮುಸ್ಲಿಂ ಸಮುದಾಯದ ಜನರು ಕನ್ನಡ ಕಲಿತು ಬಾಳುವುದು ಅತಿಮುಖ್ಯ. ಅವರು ಕನ್ನಡದಿಂದ ದೂರ ಇರಬಾರದು, ಕನ್ನಡವೂ ಮುಸ್ಲಿಮರಿಂದ ದೂರ ಇರಬಾರದು. ಇದು ನನ್ನ ಕಾಳಜಿ.

ಕರ್ನಾಟಕದ ಇತಿಹಾಸ, ಪರಂಪರೆಯಲ್ಲಿ ಮುಸ್ಲಿಮರ ಪಾತ್ರ ಬಹಳ ಮುಖ್ಯವಾದದ್ದು. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಸಾಹಿತ್ಯಿಕ ಪರಂಪರೆಯಲ್ಲಿ ಕರ್ನಾಟಕದ ಮುಸ್ಲಿಮರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಪರಂಪರೆ ಯಾವತ್ತಿಗೂ ಕೊನೆಯಾಗಬಾರದು.
ಮುಸ್ಲಿಮರಿಗೆ ಶಿಶುನಾಳ ಷರೀಫ್, ಎಸ್.ಕೆ.ಕರೀಂಖಾನ್, ಕೆ.ಎಸ್. ನಿಸಾರ್ ಅಹಮದ್, ರಂಜಾನ್ ಸಾಬ್, ಮಿರ್ಜಾ ಇಸ್ಮಾಯಿಲ್ ಅಂಥವರು ಆದರ್ಶವಾಗಬೇಕು. ಮುಸ್ಲಿಮರು ನಿಜವಾಗಿಯೂ ಹೆಮ್ಮೆ ಪಡಬೇಕಾಗಿದ್ದು ಮೈಸೂರಿನ ಹುಲಿ ಟಿಪ್ಪು ಸುಲ್ತಾನರನ್ನು ನೆನೆದು, ಕೋಳಿ ಫಯಾಜ್ ಅಂಥವರನ್ನಲ್ಲ. ಇದೇ ಮಾತು ಹಿಂದೂಗಳಿಗೂ, ಕ್ರಿಶ್ಚಿಯನ್ನರಿಗೂ ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ. ನಾವು ಅನುಸರಿಸುವ ಧರ್ಮ ಯಾವುದೇ ಆದರೂ ನಮ್ಮ ಯುವಸಮುದಾಯವನ್ನು ನಾವು ಸಮಾಜಮುಖಿಯಾಗಿ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ಶಿಕ್ಷಣ ಮೊದಲ ಆದ್ಯತೆಯಾಗಬೇಕು. ಮುಸ್ಲಿಂ ಸಮುದಾಯದ ಯುವಕ, ಯುವತಿಯರು ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಓದುವಂತಾಗಬೇಕು, ಎಂಜಿನಿಯರ್ -ಡಾಕ್ಟರ್ ಗಳಾಗಬೇಕು. ಸರ್ಕಾರಿ ಸೇವೆಯಲ್ಲಿ ಅವರ ಉಪಸ್ಥಿತಿ ಹೆಚ್ಚಬೇಕು. ಇದಕ್ಕಾಗಿ ಅವರು ಕರ್ನಾಟಕದ ನೆಲದ ಭಾಷೆಯಾದ ಕನ್ನಡವನ್ನು ಅಪ್ಪಿಕೊಳ್ಳಬೇಕು, ಕನ್ನಡದ ಹೆಮ್ಮರದ ಅಡಿಯಲ್ಲಿ ಎಲ್ಲರೂ ಬೆಳೆಯಬೇಕು.
ಕರ್ನಾಟಕದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನರಾದಿಯಾಗಿ ಎಲ್ಲ ಧರ್ಮಗಳೂ ನೆಲೆನಿಂತಿವೆ. ಇದಕ್ಕಾಗಿಯೇ ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ʻಸರ್ವಜನಾಂಗದ ಶಾಂತಿಯ ತೋಟʼ ಎಂದು ಕರೆದಿದ್ದಾರೆ. ಕನ್ನಡಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ. ಎಲ್ಲರೂ ತಮ್ಮ ತಮ್ಮ ಧರ್ಮಗಳನ್ನು ಅನುಸರಿಸುತ್ತಲೇ ಕನ್ನಡಿಗರಾಗಿ ಈ ನಾಡಿನ ಸೇವೆಯಲ್ಲಿ ತೊಡಗಿದರೆ ಅದಕ್ಕಿಂತ ದೊಡ್ಡ ಯಶಸ್ಸು ಇನ್ನೊಂದಿಲ್ಲ.
ಕರ್ನಾಟಕದ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಮುಸ್ಲಿಮರು ಕನ್ನಡ ಸಂಸ್ಕೃತಿಯೊಂದಿಗೆ ಬೆರೆತು ಬಾಳುತ್ತಿದ್ದಾರೆ. ಆದರೆ ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಇದು ಸಂಪೂರ್ಣ ಸಾಕಾರವಾಗಿಲ್ಲ. ಇದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಇದು ಸಮುದಾಯದ ಏಳಿಗೆಗೆ ಪೂರಕವಾಗಿಲ್ಲ ಎಂಬುದಂತೂ ನಿಜ. ಮುಸ್ಲಿಂ ಸಮುದಾಯದ ನಾಯಕರುಗಳು, ಧರ್ಮಗುರುಗಳು ಈ ಕುರಿತು ಕಾಳಜಿ ವಹಿಸಿದರೆ ಅದು ಅಸಾಧ್ಯವಂತೂ ಅಲ್ಲ.
ಗೆಳೆಯ ಹಾಗು ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷರಾಗಿರುವ ಸಮೀಯುಲ್ಲಾ ಖಾನ್ ಅವರು ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಬೆಂಗಳೂರಿನ ಮತ್ತಿಕೆರೆ ಮಸೀದಿಯಲ್ಲಿ ಕನ್ನಡ ಕಲಿಕಾ ಕೇಂದ್ರಕ್ಕೆ ಶಾಶ್ವತ ಕಟ್ಟಡ ನಿರ್ಮಿಸಲಾಗಿದೆ. ಮಸೀದಿಯ ಮುಖ್ಯ ದ್ವಾರಗಳಲ್ಲಿ ಕುರಾನ್ ಶ್ಲೋಕಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಹಾಕಲಾಗಿದೆ. ಮಸೀದಿಯಲ್ಲಿರುವ ಗ್ರಂಥಾಲಯದಲ್ಲಿ ಬಹುತೇಕ ಕನ್ನಡದ ಪುಸ್ತಕಗಳು. ಕನ್ನಡದ ಮೇಲಿನ ಪ್ರೀತಿ ಅವರಿಂದ ಇಷ್ಟೆಲ್ಲ ಕೆಲಸಗಳನ್ನು ಮಾಡಿಸಿದೆ. ಇದು ಎಲ್ಲ ಕಡೆ ಆದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೇನಿರಲು ಸಾಧ್ಯ ಎಂದಿದ್ದಾರೆ.
ಅತಿ ಶೀಘ್ರದಲ್ಲೇ ಮುಸ್ಲಿಂ ಧರ್ಮಗುರುಗಳು ಮತ್ತು ಮಸೀದಿಗಳ ಆಡಳಿತ ಮಂಡಳಿ ಮುಖ್ಯಸ್ಥರುಗಳನ್ನು ಆಹ್ವಾನಿಸಿ ಕರ್ನಾಟಕ ರಕ್ಷಣಾ ವೇದಿಕೆ ಒಂದು ಸಮಾವೇಶವನ್ನು ಮಾಡುವ ಉದ್ದೇಶ ಹೊಂದಿದೆ. ಇದು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ, ಒಗ್ಗೂಡಿ ತೀರ್ಮಾನಗಳನ್ನು ಕೈಗೊಳ್ಳುವ, ಪರಸ್ಪರರನ್ನು ಗೌರವಿಸುವ ಸಮಾವೇಶ. ದೂರ ಇದ್ದು ದೂಷಿಸುವುದಕ್ಕಿಂತ ಇಂಥ ಭೇಟಿ, ಮಾತುಕತೆಗಳಿಂದಲೇ ನಾವು ಸಮಾಜವನ್ನು ಇನ್ನಷ್ಟು ಭದ್ರವಾಗಿ ಕಟ್ಟಲು ಸಾಧ್ಯ ಎಂದು ನಂಬಿದವನು ನಾನು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications