Bengaluru Traffic: ಪೆರಿಫೆರಲ್ ರಿಂಗ್ ರಸ್ತೆ ಪ್ರಾಜೆಕ್ಟ್ ವಿಭಜನೆಗೆ ಮುಂದಾದ ಬಿಡಿಎ
ಬೆಂಗಳೂರು, ಜುಲೈ. 08: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಮಹತ್ವಾಕಾಂಕ್ಷೆಯ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಯನ್ನು ವಿಭಜಿಸುವ ಚಿಂತನೆಯಲ್ಲಿದೆ. ಬಿಡ್‌ದಾರರನ್ನು ಆಕರ್ಷಿಸುವ ಸಲುವಾಗಿ ಈ ವಿಭಜನೆಗೆ ಮುಂದಾಗಿದೆ.
ಇಲ್ಲಿಯವರೆಗೂ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಯಾವುದೇ ಬಿಡ್‌ದಾರರು ಮುಂದೆ ಬರದ ಕಾರಣ, ಉತ್ತಮ ಬಿಡ್‌ದಾರರನ್ನು ಸೆಳೆಯಲು ಈ 74 ಕಿಮೀ ಕಾರಿಡಾರ್ ಅನ್ನು ಮೂರು ಭಾಗಗಳಾಗಿ ವಿಭಜಿಸುವ ಸಾಧ್ಯತೆಯಿದೆ. ಈ ಮೂಲಕ ಮೂರು ಕಂಪನಿಗಳು ಇದನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಮೂರು ಭಾಗಗಳಾಗಿ ಪಿಆರ್‌ಆರ್ ಪ್ರಾಜೆಕ್ಟ್!
27,000 ಕೋಟಿ ಅಂದಾಜು ಮೊತ್ತದ ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಒಟ್ಟು ವೆಚ್ಚವನ್ನು ಮೂರು ಕಂಪನಿಗಳ ನಡುವೆ ವಿತರಿಸಲು ಇದನ್ನು ಮಾಡಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಸ್ತಾವನೆ ಮತ್ತು ಇತರ ವಿಧಾನಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.
ಬಿಡಿಎ ಅಧ್ಯಕ್ಷ ಎನ್.ಎ.ಹರೀಸ್, ಆಯುಕ್ತ ಎನ್.ಜಯರಾಮ್ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಸಭೆ ನಡೆದಿದೆ. ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಪ್ರಕಾರ, ಬೆಂಗಳೂರಿನ ಸುತ್ತಲೂ ಅರ್ಧವೃತ್ತವನ್ನು ರೂಪಿಸುವ 74 ಕಿಮೀ ರಸ್ತೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ.
ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ, ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ ಮತ್ತು ಹಳೆಯ ಮದ್ರಾಸ್ ರಸ್ತೆಯಿಂದ ಹೊಸೂರು ರಸ್ತೆ ಎಂದು ಮೂರು ಭಾಗಗಳಾಗಿ ವಿಭಜಿಸಲು ಚಿಂತಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇನ್ನು, ಯೋಜನೆಯನ್ನು ವಿಭಜಿಸುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದರಿಂದ ಉತ್ತಮ ಸ್ಪರ್ಧೆ ಉಂಟಾಗಲಿದೆ ಎಂಬುದು ಅವರ ಅಭಿಪ್ರಾಯ.

ಮೂಲ ಯೋಜನೆಯಲ್ಲಿ 100 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲು ಯೋಜಿಸಲಾಗಿತ್ತಿ. ಮಧ್ಯದಲ್ಲಿ ಮೆಟ್ರೊ ಅಥವಾ ಮೊನೊ ರೈಲ್‌ಗೆ ಸ್ಥಳಾವಕಾಶ ಮತ್ತು ಸೈಕ್ಲಿಸ್ಟ್‌ಗಳಿಗೆ ಮೀಸಲಾದ ಲೇನ್ ಅನ್ನು ನಿರ್ಮಿಸಲು ಚಿಂತಿಸಲಾಗಿತ್ತು. ಅದರೆ, ಈಗ ಸರ್ಕಾರವು ರಸ್ತೆ ಅಗಲವನ್ನು 60 ಮೀಟರ್‌ನಿಂದ 75 ಮೀಟರ್‌ಗೆ ಇಳಿಸುವ ಸಾಧ್ಯತೆಯಿದೆ. ಉಳಿದ ಜಾಗವನ್ನು ವಾಣಿಜ್ಯ ಅಭಿವೃದ್ಧಿಗೆ ಪರಿಗಣಿಸಲಾಗುತ್ತಿದೆ, ಪ್ರಸ್ತಾವನೆಯನ್ನು ಮೊದಲು 2016 ರಲ್ಲಿ ಮಂಡಿಸಲಾಗಿತ್ತು.
"ಒಟ್ಟು ಯೋಜನಾ ವೆಚ್ಚ 14,000 ಕೋಟಿ ಎಂದು ಅಂದಾಜಿಸಲಾಗಿತ್ತು. 50 ವರ್ಷಗಳ ಟೋಲ್ ಸಂಗ್ರಹಕ್ಕೆ ಒಪ್ಪಲಾಗಿತ್ತು. 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದರಿಂದ ಅಂದಾಜು 27 ಸಾವಿರ ಕೋಟಿ ರೂ.ಗೆ ಪರಿಷ್ಕರಿಸಿದ್ದೇವೆ. ಪಿಆರ್‌ಆರ್ ಉದ್ದಕ್ಕೂ 25 ಮೀಟರ್ ಜಾಗವನ್ನು ಪುನರಾಭಿವೃದ್ಧಿಗಾಗಿ ಬಳಸಲು ನಾವು ಯೋಚಿಸುತ್ತಿದ್ದೇವೆ" ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಡಿಎ ತನ್ನ ಹೊಸ ಬಡಾವಣೆಗಳಲ್ಲಿ ರೈತರಿಗೆ ನಗದು ಪರಿಹಾರದ ಬದಲು ಭೂಮಿ ನೀಡುವ ಬಗ್ಗೆಯೂ ಯೋಚಿಸುತ್ತಿದೆ.












Click it and Unblock the Notifications