65 ಕೋಟಿ ಭೂಮಿಗೆ 4 ಕೋಟಿ ಪರಿಹಾರ ನೀಡಲು ಹೊರಟಿದೆಯಾ ಬಿಡಿಎ?
ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ 74-ಕಿಮೀ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್)ಗಾಗಿ ತಮ್ಮ ಜಮೀನುಗಳನ್ನು ಬಿಟ್ಟುಕೊಡುವ ಜನರಿಗೆ ಬಿಡಿಎ ಕಾಯ್ದೆ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆಯೇ ಹೊರತು 2013ರ ಭೂಸ್ವಾಧೀನ ಕಾನೂನಿನ ಅಡಿಯಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಮೂಲಕ ಯೋಜನೆಯ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ಈ ನಿರ್ಧಾರವು ಸುದೀರ್ಘ ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು, ಬೆಂಗಳೂರಿನ ಗ್ರಿಡ್ಲಾಕ್ಡ್ ರಸ್ತೆಗಳನ್ನು ಕಡಿಮೆ ಮಾಡಲು ಉದ್ದೇಶಿಸಿರುವ ಯೋಜನೆ ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 50 ವರ್ಷಗಳವರೆಗೆ ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಿಸಿ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ಆಧಾರದ ಮೇಲೆ ಯೋಜನೆಯನ್ನು ರಿಯಾಯಿತಿ ದರದಲ್ಲಿ ಅಭಿವೃದ್ಧಿಪಡಿಸುವವರನ್ನು ಆಯ್ಕೆ ಮಾಡಲು ಹೊಸ ಟೆಂಡರ್ ಕರೆದಿದೆ. ಈ ಹಂತದಲ್ಲಿ ಅಗತ್ಯವಿರುವ ಸುಮಾರು 2,560 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ವೆಚ್ಚವನ್ನು ರಿಯಾಯಿತಿದಾರರು ಪಾವತಿಸಬೇಕಾಗುತ್ತದೆ.

ನ್ಯಾಯುತ ಪರಿಹಾರ ನೀಡುವಂತೆ ಒತ್ತಾಯ
ಭೂಮಾಲೀಕರಿಗೆ ಹೇಗೆ ಪರಿಹಾರ ನೀಡಲಾಗುವುದು ಎಂಬ ವಿವಾದವು ಯೋಜನೆಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಭೂಮಾಲೀಕರು, ಹೆಚ್ಚಾಗಿ ರೈತಾಪಿ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಈ ಹಿನ್ನೆಲೆ ಭೂ ಸ್ವಾಧೀನ ಹಕ್ಕು, ಪುನರ್ ಸ್ಥಾಪನೆ ಮತ್ತು ಪುನರ್ವಸತಿ ಕಾಯಿದೆ, 2013ರ ಪಾರದರ್ಶಕತೆಯ ಅಡಿಯಲ್ಲಿ ನ್ಯಾಯಯುತ ಪರಿಹಾರಕ್ಕಾಗಿ ಹಕ್ಕು ಮಂಡಿಸುತ್ತಿದ್ದಾರೆ.
ಆದರೆ ಇಬ್ಬರು ಹಿರಿಯ ಬಿಡಿಎ ಅಧಿಕಾರಿಗಳು ಈ ವರ್ಷದ ಜನವರಿಯಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ 67 ಗ್ರಾಮಗಳಲ್ಲಿ 2,560 ಎಕರೆ ಭೂಮಿಯನ್ನು ಹಳೆಯ ಪರಿಹಾರ ದರಗಳ ಪ್ರಕಾರ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಿಡಿಎ ಅಧಿಕಾರಿಗಳು ಹೇಳುವುದೇನು?
"ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದಾಗ ನಾವು ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಅದರ ಮೇಲೆ ನಾವು ಶೇ.32ರಷ್ಟು ಸೊಲಾಟಿಯಂ ಮತ್ತು ಮಾರ್ಗದರ್ಶಿ ಮೌಲ್ಯದ ಮೇಲೆ ಶೇ.12ರಷ್ಟು ಬಡ್ಡಿದರವನ್ನು ಪಾವತಿಸುತ್ತೇವೆ," ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಪನಿಗೆ ಸಿಗುವುದು ಟೋಲ್ ಸಂಗ್ರಹಿಸುವ ಅಧಿಕಾರ
ಈ ಪರಿಹಾರ ರಚನೆಯ ಪ್ರಕಾರ, ಬಿಡಿಎ ಸುಮಾರು 2,560 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು 6,500 ಕೋಟಿ ರೂಪಾಯಿ ವೆಚ್ಚ ಮಾಡುತ್ತದೆ. ಎಂಟು ಪಥಗಳ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಇನ್ನೂ 6,500 ಕೋಟಿ ರೂಪಾಯಿ ವೆಚ್ಚವಾಗಲಿದೆ. ಟೆಂಡರ್ ಅನ್ನು ಪಡೆದಿರುವ ಕಂಪನಿಯು ನಿರ್ಮಾಣ ಮತ್ತು ಭೂ ಸ್ವಾಧೀನ ವೆಚ್ಚ ಎರಡಕ್ಕೂ ಬದಲಾಗಿ ಟೋಲ್ ಸಂಗ್ರಹಿಸುವ ಹಕ್ಕನ್ನು ಪಡೆಯುತ್ತದೆ.

ರೈತರಿಗೆ ಖುಷಿ ಕೊಡುತ್ತಿಲ್ಲ ಪರಿಹಾರದ ಮೊತ್ತ
ಭೂ ಸ್ವಾಧೀನಕ್ಕಾಗಿ ಪಾವತಿ ಆಗುತ್ತಿರುವ ಪರಿಹಾರದ ವಿರುದ್ಧ ರೈತರು ಸಾಲು ಸಾಲು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಸ್ವ-ಇಚ್ಛೆಯಿಂದ ಪರಿಹಾರವನ್ನು ಸ್ವೀಕರಿಸುವ ಸಾಧ್ಯತೆಗಳು ತೀರಾ ವಿರಳವಾಗಿದೆ. ಬಿಡಿಎ ಕಾಯ್ದೆಯ ಪ್ರಕಾರ, ಪ್ರತಿಭಟನೆಯಡಿ ಪರಿಹಾರವನ್ನು ಸ್ವೀಕರಿಸಲು ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಉತ್ತಮ ದರಕ್ಕೆ ಒತ್ತಾಯಿಸಲು ಅವಕಾಶವಿದೆ. ಭೂಸ್ವಾಧೀನ ವೆಚ್ಚದ ಬಗ್ಗೆ ಸ್ವಂತ ಮೌಲ್ಯಮಾಪನ ಮಾಡುವಂತೆ ಬಿಡಿಎ ಬಿಡ್‌ದಾರರಿಗೆ ಸೂಚಿಸಿರುವುದರಿಂದ, ಹಲವು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸದೇ ಹಿಂದೆ ಉಳಿಯುವ ಸಾಧ್ಯತೆಯಿದೆ.
2013ರ ಕಾನೂನಿನಂತೆ ಪರಿಹಾರ ನೀಡುವಂತೆ ಒತ್ತಾಯಿಸುತ್ತಿರುವ ಪ್ರತಿಭಟನೆ ಭಾಗವಾಗಿರುವ ಮಾವಲಿಪುರ ಶ್ರೀನಿವಾಸ್, ಬಿಡಿಎ ಹಳೆಯ ಪರಿಹಾರ ದರಗಳನ್ನು ಆಯ್ಕೆ ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ''ಬಿಡಿಎ ಕಾಯಿದೆ ಪ್ರಕಾರ ಮಾವಳ್ಳಿಪುರದಲ್ಲಿ ಪ್ರತಿ ಎಕರೆಗೆ ರೈತನಿಗೆ 65 ಲಕ್ಷ ರೂಪಾಯಿ ಆಗುತ್ತದೆ, ಆದರೆ ಅದೇ ಭೂಮಿಗೆ 2013ರ ಕಾನೂನಿನ ಪ್ರಕಾರ 4 ಕೋಟಿ ರೂಪಾಯಿವರೆಗೆ ಪರಿಹಾರ ನೀಡಲಾಗುವುದು,'' ಎಂದಿದ್ದಾರೆ.












Click it and Unblock the Notifications