ಬಿಡಿಎ ಸೈಟುಗಳ ಈ-ಹರಾಜು; ಕೊಳ್ಳಲು ಸಿದ್ಧರಾಗಿರಿ
ಬೆಂಗಳೂರು, ಜೂನ್ 15: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದು.
ಬಿಡಿಎ ನಿವೇಶನಗಳ ಈ-ಹರಾಜು ಕೊನೆಯ ಬಾರಿ ನಡೆದಿದ್ದು ಈ ವರ್ಷದ ಮಾರ್ಚ್‌ನಲ್ಲಿ. ಈಗ ಜುಲೈ ಮೊದಲ ವಾರದಲ್ಲಿ 149 ಮೂಲೆ ನಿವೇಶನ ಮಾರಾಟಕ್ಕೆ ಬಿಡಿಎ ಪ್ರಕ್ರಿಯೆ ನಡೆಸಲಿದೆ.

ನಗರದ ವಿವಿಧ ಭಾಗದಲ್ಲಿ ಲಭ್ಯವಿರುವ ಈ ಮೂಲೆ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಗುತ್ತದೆ. ಈ ನಿವೇಶನಗಳಿಗೆ ಕನಿಷ್ಠ ಬಿಡ್ ಬೆಲೆ ಎಷ್ಟು ಎಂದು ಇನ್ನೂ ಅಧಿಕೃತವಾಗಿ ಬೆಲೆ ನಿಗದಿ ಮಾಡಿಲ್ಲ.
ಸೈಟುಗಳ ಈ-ಹರಾಜು: ಬೆಂಗಳೂರು ನಗರದ ವಿವಿಧ ಬಡಾವಣೆಗಳನ್ನು ನಿರ್ಮಾಣ ಮಾಡಿದ ಬಳಿಕ ಉಳಿದಿರುವ 149 ಮೂಲೆ ನಿವೇಶನಗಳನ್ನು ಈಗ ಈ-ಹರಾಜು ಮೂಲಕ ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಜುಲೈ ಮೊದಲ ವಾರದ ಈ ಪ್ರಕ್ರಿಯೆ ನಡೆಯಲಿದೆ.
ಆದರೆ ಯಾವ-ಯಾವ ಪ್ರದೇಶದಲ್ಲಿ ಈ ಸೈಟುಗಳು ಲಭ್ಯವಿದೆ ಎಂದು ಬಿಡಿಎ ಇನ್ನೂ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. 54,000 ರೂ.ಗಳಿಂದ 1.47 ಲಕ್ಷದ ತನಕ ಸೈಟುಗಳ ಪ್ರಾಥಮಿಕ ಬಿಡ್ ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.
ಬನಶಂಕರಿ 6ನೇ ಹಂತ, ಅಂಜನಾಪುರ, ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್‌ಗಳಲ್ಲಿ ಬೆಲೆಗಳಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಹೆಚ್‌ಆರ್‌ಬಿಆರ್ 2ನೇ ಬ್ಲಾಕ್, ಹೆಚ್‌ಬಿಆರ್ 1ನೇ ಹಂತ, ಬನಶಂಕರಿ 2ನೇ ಹಂತದ ನಿವೇಶಗಳ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಜುಲೈ ಮೊದಲ ವಾರದಲ್ಲಿ ವಾರದ ವಿವಿಧ ದಿನಗಳು ಈ ನಿವೇಶನಗಳ ಹರಾಜು ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೈಬ್‌ಸೈಟ್‌ನಲ್ಲಿ e-auction ಪೇಜ್‌ನ ಅಪ್‌ಡೇಟ್‌ಗಳನ್ನು ನೋಡಬಹುದು.
ಜನರಿಂದ ಉತ್ತಮ ಪ್ರತಿಕ್ರಿಯೆ: ಜೂನ್ 15ರ ಶನಿವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಚಂದ್ರಾ ಬಡಾವಣೆ (3 ಬಿ.ಹೆಚ್.ಕೆ) (ಕೆಲವೇ ಫ್ಲಾಟ್ ಗಳು ಮಾತ್ರ ಹಂಚಿಕೆಗೆ ಲಭ್ಯವಿದೆ), ಕಣಿಮಿಣಿಕೆ (2 ಬಿ.ಹೆಚ್.ಕೆ) ಮತ್ತು ಕೋನದಾಸಪುರ ಹಂತ-2 (2 ಬಿ.ಹೆಚ್.ಕೆ) ರಲ್ಲಿ ವಸತಿ ಸಮುಚ್ಛಯವನ್ನು ಹಂಚಿಕೆ ಮಾಡಲು ಫ್ಲಾಟ್ ಮೇಳ ನಡೆಸುತ್ತಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರವು ಫ್ಲಾಟ್ ಮೇಳವನ್ನು ಕೋನದಾಸಪುರದ ವಸತಿ ಸಮುಚ್ಚಯದಲ್ಲಿ ನಡೆಸುತ್ತಿದೆ. ಈ ಮೇಳದಲ್ಲಿ ಭಾಗವಹಿಸಿದ ಜನರು ಫ್ಲಾಟ್‌ಗಳನ್ನು ಖರೀದಿಸಿ. ಸ್ಥಳದಲ್ಲಿಯೇ ಪ್ರಾರಂಭಿಕ ಠೇವಣಿಯನ್ನು ಪಾವತಿಸಿ, ಹಂಚಿಕೆ ಪತ್ರವನ್ನು ಸ್ವೀಕರಿಸಿ. ಹಂಚಿಕೆ ಪತ್ರವನ್ನು ಸ್ವೀಕರಿಸಿದ 10 ದಿನದೊಳಗೆ ಫ್ಲಾಟ್‌ನ ಪೂರ್ಣ ಮೊತ್ತವನ್ನು ಪಾವತಿಸಿದ್ದಲ್ಲಿ ನಂತರದ 10 ದಿನಗಳೊಳಗಾಗಿ ಫ್ಲಾಟ್ ನೋಂದಣಿ ಮಾಡಿಕೊಡಲಾಗುತ್ತದೆ.
ಈ ಫ್ಲಾಟ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸ್ಥಳದಲ್ಲಿಯೇ ಫ್ಲಾಟ್‌ಗಳನ್ನು ಕೊಂಡು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಮೇಳ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಬಿಡಿಎ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.












Click it and Unblock the Notifications