New Flyover: ವಾಹನ ಸವಾರರಿಗೆ ಗುಡ್ ನ್ಯೂಸ್: ಹೆಬ್ಬಾಳ ಡೌನ್‌ಲೂಪ್ 15 ದಿನದಲ್ಲಿ ಪೂರ್ಣ: BDA
ಬೆಂಗಳೂರು, ನವೆಂಬರ್ 25: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸರ್ಕಾರ ಟ್ರಾಫಿಕ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ಹೆಬ್ಬಾಳ ಮೇಲ್ಸೇತುವೆಯಲ್ಲಿ ಕೈಗೊಂಡಿರುವ ನೂತನ ಲೂಪ್ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ)ವು ಎರಡು ವಾರಗಳ ಗಡುವು ನೀಡಿದೆ. ಜೊತೆಗೆ ಹೊಸ ಮೇಲ್ಸೇತುವೆ ಹಾಗೂ ರಸ್ತೆ, ಡಾಂಬರೀಕರಣದ ಅಪ್ಡೇಟ್ ನೀಡಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬಿಡಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಪರಿಶೀಲನೆ ನಡೆಸಿದರು. ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಹೊಸ 'ಲೂಪ್' ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅವರು ಅಧಿಕಾರಿಗಳು ಸೂಚಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೆ.ಆರ್. ಪುರಂ ಕಡೆಯಿಂದ ನಗರದೊಳಗೆ ಬರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಬಿಡಲಾಗಿದೆ. ಇದಕ್ಕೆ ಹೊಂದಿಕೊಂಡಂತೆ, ಹೊಸ ಮೇಲ್ಸೇತುವೆ ಹಾಗೂ ಹಳೆಯ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ಲೂಪ್ ಕಾಮಗಾರಿ ಪ್ರಗತಿಯಲ್ಲಿದೆ. ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದರು.
ಹೆಬ್ಬಾಳ ಮೇಲ್ಸೇತುವೆಗೆ ಹೊಂದಿಕೊಂಡಂತೆ ಹೊಸ ಲೂಪ್ ನಿರ್ಮಾಣ ಕಾಮಗಾರಿಯ ಮೊದಲ ಗರ್ಡರ್ ಈಗಾಗಲೇ ಅಳವಡಿಸಲಾಗಿದೆ. ಸದ್ಯ ಕಾಂಕ್ರೀಟ್ ಕೆಲಸಗಳು ನಡೆಯುತ್ತಿವೆ. ಉಳಿದ ಎರಡು ಗರ್ಡರ್‌ಗಳ ಅಳವಡಿಕೆ ಕಾರ್ಯ ಕೈಗೊಂಡು ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಸಬೇಕು ಎಂದು ಸೂಚಿಸಿದರು.
ಹೊಸ ಮೇಲ್ಸೇತುವೆಗೆ ಯೋಜನೆ
ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್‌ನಿಂದ ಮಾನ್ಯತಾ ಟೆಕ್ ಪಾರ್ಕ್‌ವರೆಗೆ 1.4 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣದ ಕುರಿತು ಈಗಾಗಲೇ ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅದನ್ನು ಶೀಘ್ರ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ಕೊಟ್ಟರು.

ಇನ್ನೂ ಹೆಬ್ಬಾಳ ಕೆರೆಯ ಪಕ್ಕದ ಪಾದಚಾರಿ ಮಾರ್ಗ ಕೆಲವೆಡೆ ಹಾನಿಗೊಳಗಾಗಿದ್ದು, ಅದರ ದುರಸ್ತಿಗೆ ಕ್ರಮವಹಿಸಬೇಕು. ಅಷ್ಟೇ ಅಲ್ಲದೇ ಅಲ್ಲಿ ಬಿದ್ದಿರುವ ಪೋಲ್‌ನ್ನು ಕೂಡಲೇ ತೆರವು ಮಾಡಿ, ರಸ್ತೆಬದಿಯ ತ್ಯಾಜ್ಯ ಸಹ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದರು.
ಮಿಲ್ಲಿಂಗ್ ಮಾಡಿ ಡಾಂಬರೀಕರಣ ಮಾಡಿ
ನಗರದ ಹೆಬ್ಬಾಳ ಮೇಲ್ಸೇತುವೆಯ ಒಂದು ಭಾಗದಲ್ಲಿ ಮಿಲ್ಲಿಂಗ್ ಮಾಡಿ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಉಳಿದ ಭಾಗದಲ್ಲಿಯೂ ಮಿಲ್ಲಿಂಗ್ ಕಾರ್ಯ ಕೈಗೊಂಡು ಕೂಡಲೇ ಡಾಂಬರೀಕರಣ ಪೂರ್ಣಗೊಳಿಸಬೇಕು. ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಡಾಂಬರೀಕರಣ ಕೈಗೊಳ್ಳುವ ಸಲುವಾಗಿ ಹೆಬ್ಬಾಳದ ಆರ್.ಎಂ.ವಿ 2ನೇ ಹಂತ ಹಾಗೂ ಬಸವೇಶ್ವರ ಬಡಾವಣೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆರ್.ಎಂ.ವಿ 2ನೇ ಹಂತದಲ್ಲಿ ಇರುವ ಪಾಲಿಕೆ ಜಾಗದ ಪಕ್ಕದಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಅಲ್ಲಿನ ಜಾಗವನ್ನು ಒತ್ತುವರಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮವಹಿಸಿ ಎಂದು ಹೇಳಿದರು.
ನಾಗವಾರ ಜಂಕ್ಷನ್ ಅಭಿವೃದ್ಧಿಗೆ ಕ್ರಮ
ನಾಗವಾರ ಜಂಕ್ಷನ್ ಬಳಿ ಐಬಿಸ್ ಹೋಟೆಲ್‌ನಿಂದ ನಾಗವಾರ ರಾಜಕಾಲುವೆಯವರೆಗೆ 1 ಕಿ.ಮೀ ಉದ್ದದಲ್ಲಿ ಜಲಮಂಡಳಿಯು 600/700 ಡಯಾ ಸ್ಯಾನಿಟರಿ ಪೈಪ್‌ಲೈನ್ ಅಳವಡಿಸಬೇಕಿದೆ. ಇದಕ್ಕೆ ಉತ್ತರ ಸಂಚಾರಿ ವಿಭಾಗದಿಂದ ಅನುಮತಿ ದೊರೆತಿದೆ. ಪೂರ್ವ ಸಂಚಾರಿ ವಿಭಾಗದ ಅನುಮತಿ ಮಾತ್ರ ಬಾಕಿಯಿದೆ. ಉತ್ತರ ಭಾಗದಿಂದ ಕೆಲಸ ಪ್ರಾರಂಭಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದರು.
ನಾಗವಾರ ಜಂಕ್ಷನ್‌ನಲ್ಲಿ ಬಿಸ್ಮೈಲ್ ವತಿಯಿಂದ ಹೊರ ವರ್ತುಲ ರಸ್ತೆಗೆ ಅಡ್ಡಲಾಗಿ 1000 ಎ.ಎಂ ಕಲ್ವರ್ಟ್ ಪೈಪ್‌ಲೈನ್ ಕೆಲಸ ಪೂರ್ಣಗೊಂಡಿದ್ದು, ಚೇಂಬರ್ ಕೆಲಸ ಬಾಕಿಯಿದೆ. ಅದನ್ನೂ ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು. ಜೊತೆಗೆ ನೀರಿನ ಲೀಕೇಜ್ ಸರಿಪಡಿಸಬೇಕೆಂದು ಸೂಚಿಸಿದರು.












Click it and Unblock the Notifications