ಲಾಕ್‌ಡೌನ್ ವೇಳೆ ಗಾರ್ಮೆಂಟ್ ಕಾರ್ಯನಿರ್ವಹಣೆಗೆ ಅನುಮತಿ ನೀಡಲು ಬಿಸಿಐಸಿ ಮನವಿ
ಬೆಂಗಳೂರು, ಏಪ್ರಿಲ್ 27: ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 27ರಿಂದ ಹದಿನಾಲ್ಕು ದಿನಗಳ ಅವಧಿ ಲಾಕ್‌ಡೌನ್ ಜಾರಿಮಾಡಲಾಗಿದೆ.
ಈ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಆಗಲಿದ್ದು, ಲಾಕ್‌ಡೌನ್ ನಿಂದ ಕಟ್ಟಡ ನಿರ್ಮಾಣ ಹಾಗೂ ಕೃಷಿ ಚಟುವಟಿಕೆಗೆ ಅನುಮತಿ ನೀಡಲಾಗಿದೆ.
ಗಾರ್ಮೆಂಟ್ಸ್ ಕ್ಷೇತ್ರಕ್ಕೂ ವಿನಾಯಿತಿ ನೀಡಬೇಕೆಂದು ಕೋರಿ ಬೆಂಗಳೂರು ಕೈಗಾರಿಕೆ ಹಾಗೂ ವಾಣಿಜ್ಯ ಮಂಡಳಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಕೈಗಾರಿಕೆಗಳಿಗೆ ಅನುಮತಿ ನೀಡಿರುವ ಸರ್ಕಾರದ ನಿಲುವನ್ನು ಬಿಸಿಐಸಿ ಸ್ವಾಗತಿಸಿದ್ದು, ಗಾರ್ಮೆಂಟ್‌ಗಳಲ್ಲಿಯೂ ಕಡಿಮೆ ನೌಕರರೊಂದಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಕೇಳಿಕೊಂಡಿದೆ.

ಗಾರ್ಮೆಂಟ್‌ಗಳಲ್ಲಿ ಜನಸಂದಣಿ ಇದ್ದು, ಕೊರೊನಾ ಮಾರ್ಗಸೂಚಿ ಪಾಲನೆ ಕಷ್ಟ ಎಂಬ ಕಾರಣಕ್ಕೆ ಕೆಲಸ ನಿರ್ವಹಿಸಲು ಅವಕಾಶ ನೀಡದಿರುವ ಸರ್ಕಾರದ ನಿರ್ಧಾರವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದರೆ ಕನಿಷ್ಠ ನೌಕರರೊಂದಿಗೆ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ಒಳ್ಳೆಯದು ಎಂಬ ಸಲಹೆ ನಮ್ಮದು. 50% ಇಂದ 30%ಗೆ ನೌಕರರ ಸಂಖ್ಯೆಯನ್ನು ಇಳಿಸಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗಾರ್ಮೆಂಟ್‌ಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಸಿಐಸಿ ಅಧ್ಯಕ್ಷ ಟಿಆರ್ ಪರಶುರಾಮ್ ಹೇಳಿದ್ದಾರೆ. ಜೊತೆಗೆ ದೇಶಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಲಸಿಕೆ ನೀಡಬೇಕು. ಆರ್ಥಿಕತೆಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications