ಬಿಬಿಎಂಪಿ 243 ವಾರ್ಡ್ ಪುನರ್ ವಿಂಗಡನೆ; ಹೊಸ ಗಡುವು ಕೊಟ್ಟ ಸರ್ಕಾರ!
ಬೆಂಗಳೂರು, ಅಕ್ಟೋಬರ್ 31; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡನೆ ಮಾಡಲು ಇದ್ದ ಗಡುವು ವಿಸ್ತರಣೆ ಮಾಡಲಾಗಿದೆ. 2022ರ ಜನವರಿ ತನಕ 243 ವಾರ್ಡ್‌ಗಳ ಪುನರ್ ವಿಂಗಡನೆಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ಸರ್ಕಾರ ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ -1976ರಂತೆ 198 ವಾರ್ಡ್‌ಗಳಿದ್ದ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಹೊಸದಾಗಿ ವಾರ್ಡ್ ಪುನರ್ ವಿಂಗಡನೆ ಆದ ಬಳಿಕ ಬಿಬಿಎಂಪಿ ಚುನಾವಣೆ ನಡೆಯಲಿದೆ.
ನೂತನವಾಗಿ ಬಿಬಿಎಂಪಿಗೆ ಸೇರಬೇಕಾದ ವಾರ್ಡ್‌ಗಳ ಪುನರ್ ವಿಂಗಡನೆ ಆಗಬೇಕಿದೆ. ಅದಕ್ಕಾಗಿ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವಾರ್ಡ್ ಪುನರ್ ವಿಂಗಡನಾ ಸಮಿತಿಯನ್ನು ರಚನೆ ಮಾಡಲಾಗಿದೆ. ಶನಿವಾರ ವಾರ್ಡ್ ಪುನರ್ ವಿಂಗಡನೆಗೆ 2022ರ ಜನವರಿ ತನಕ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.

ಬಿಬಿಎಂಪಿ ಆಯುಕ್ತರು ಈ ಸಮಿತಿಯ ಅಧ್ಯಕ್ಷರು. ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಬಿಬಿಎಂಪಿ ವಿಶೇಷ (ಕಂದಾಯ ಆಯುಕ್ತರು) ಈ ಸಮಿತಿಯಲ್ಲಿದ್ದಾರೆ. ಈ ಮೊದಲು ವಾರ್ಡ್ ಪುನರ್ ವಿಂಗಡನೆ ಮಾಡಲು ಸರ್ಕಾರ 6 ತಿಂಗಳ ಗಡುವು ನೀಡಿತ್ತು.
ಗಡುವು ವಿಸ್ತರಣೆ ಏಕೆ?; ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೋವಿಡ್‌ಗೆ ತುತ್ತಾದ ಪ್ರಮುಖ ಜಿಲ್ಲೆಯಾಗಿದೆ. ಲಾಕ್‌ಡೌನ್ ನಿರ್ವಹಣೆ ಸೇರಿದಂತೆ ವಿವಿಧ ಕೋವಿಡ್ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದರು. ಆದ್ದರಿಂದ ಸಮಿತಿಗೆ ನೀಡಿದ್ದ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.
2020 ಜನವರಿಯಲ್ಲಿ ಸರ್ಕಾರ ವಾರ್ಡ್‌ಗಳ ಪುನರ್ ವಿಂಗಡೆನೆ ಮಾಡಲು ಸಮಿತಿ ರಚನೆ ಮಾಡಿತ್ತು. ಆದರೆ ಮೊದಲ ಸಭೆ ನಡೆದಿದ್ದು ಜುಲೈನಲ್ಲಿ. ಮೊದಲು ಸಮಿತಿಗೆ ಜುಲೈಯ ಗಡುವು ನೀಡಲಾಗಿತ್ತು. ಆದರೆ ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಗಡುವನ್ನು 2022ರ ಜನವರಿ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವಾರ್ಡ್‌ಗಳ ಪುನರ್ ವಿಂಗಡನೆ ನಡೆದು, ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಿ, ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ನೂತನ ಮತದಾರರ ಪಟ್ಟಿ ಸಿದ್ಧವಾಗಲಿದೆ. ಬಳಿಕ ಹೊಸ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಬಳಿಕ ಬಿಬಿಎಂಪಿ ಚುನಾವಣೆ ನಡೆಯಲಿದೆ. ಇದರಿಂದಾಗಿ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ.
ಕೌನ್ಸಿಲ್ ಅವಧಿ ಅಂತ್ಯ; 2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಕೌನ್ಸಿಲ್ ಅವಧಿ ಪೂರ್ಣಗೊಂಡಿತು. ಬಳಿಕ ಸರ್ಕಾರ ಬಿಬಿಎಂಪಿ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿ ನೇಮಕ ಮಾಡಿತು. ಕಳೆದ ಒಂದೂವರೆ ವರ್ಷದಿಂದ ಬಿಬಿಎಂಪಿ ಆಡಳಿತವನ್ನು ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದಾರೆ.
ಕೋವಿಡ್ ಕಾರಣದಿಂದಾಗಿ ಹೊಸ ವಾರ್ಡ್‌ಗಳ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದ್ದರಿಂದ ಸರ್ಕಾರ ಈ ಸಮಿತಿಗೆ ಇನ್ನೂ 3 ತಿಂಗಳ ಕಾಲಾವಕಾಶ ನೀಡಿದೆ. ಜನವರಿ 2022ರಲ್ಲಿ ಹೊಸ ವಾರ್ಡ್ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
2007ರಲ್ಲಿ ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳೇ ಮೂರು ವರ್ಷಗಳ ಕಾಲ ಪಾಲಿಕೆಯ ಆಡಳಿತವನ್ನು ನಡೆಸಿದ್ದರು. ಈಗಲೂ ಕಳೆದ ಒಂದೂವರೆ ವರ್ಷಗಳಿಂದ ಮೇಯರ್, ಉಪ ಮೇಯರ್, ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಇಲ್ಲದೇ ಪಾಲಿಕೆ ಆಡಳಿತ ಅಧಿಕಾರಿಗಳ ಕೈಯಲ್ಲಿ ಇದೆ.
ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಪ್ರತಿ ವಾರ್ಡ್‌ಗೆ ಒಬ್ಬರು ನೋಡೆಲ್ ಆಫೀಸರ್ ನೇಮಿಸಲಾಗಿದ್ದು, ವಾರ್ಡ್‌ಗಳ ಕಾಮಗಾರಿಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಿಗಳು ಕೈಗೆ ಸಿಗುವುದಿಲ್ಲ ಎಂಬುದು ಜನರು ಆರೋಪವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಬೇಗ ನಡೆಸುವಂತೆ ನಿರ್ದೇಶನ ನೀಡುವಂಮತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಆದರೆ ವಾರ್ಡ್ ಪುನರ್ ವಿಂಗಡನೆ ಪೂರ್ಣಗೊಳ್ಳುವ ತನಕ ಚುನಾವಣೆ ನಡೆಸುವಂತಿಲ್ಲ.












Click it and Unblock the Notifications