ಬಿಬಿಎಂಪಿ ವಿಭಜನೆ ಪ್ರಸ್ತಾಪ ರಾಜಭವನಕ್ಕೆ
ಬೆಂಗಳೂರು, ಏ.7 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಪ್ರಸ್ತಾಪ ಅಂತಿಮ ಹಂತಕ್ಕೆ ಬಂದಿದೆ. ಪಾಲಿಕೆ ವಿಭಜನೆ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಲು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಸೋಮವಾರ ಸರ್ಕಾರ ಈ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪ್ರಸ್ತಾವನೆ ಕಳಿಸಿದೆ. [ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]
ನಗರಾಭಿವೃದ್ಧಿ ಇಲಾಖೆ 198 ವಾರ್ಡ್‌ಗಳ ಬಿಬಿಎಂಪಿಯನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿ ಕೊಟ್ಟಿದೆ.

ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ನೀಡಿಲಿದ್ದಾರೆಯೇ? ಕಾದು ನೋಡಬೇಕು. ಅತ್ತ ಪಾಲಿಕೆ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಸುಗ್ರೀವಾಜ್ಞೆ ಹೊರಡಿಸಲು ಅನುಮತಿ ನೀಡಬಾರದು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ. [ಬಿಬಿಎಂಪಿ ಮೂರು ಭಾಗ ಮಾಡಲು ಸುಗ್ರೀವಾಜ್ಞೆ?]
ಮೇ.30ರೊಳಗೆ ಚುನಾವಣೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಪ್ರಸ್ತಾಪ ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡಬೇಡಿ, ಏ.22ಕ್ಕೆ ಬಿಬಿಎಂಪಿಯ ಆಡಳಿತಾವಧಿ ಕೊನೆಗೊಳ್ಳಲಿದ್ದು, ಮೇ.30ರೊಳಗೆ ಮರು ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. [ಸಕಾಲದಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ]
ಆದ್ದರಿಂದ, ಸರ್ಕಾರ ಕಳೆದ ವಾರ ತುರ್ತು ಸಚಿವ ಸಂಪುಟ ಸಭೆ ಕರೆದು ಪಾಲಿಕೆ ವಿಭಜನೆ ಕುರಿತು ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರವನ್ನು ಕೈಗೊಂಡಿತ್ತು. ಸೋಮವಾರ ಈ ಕುರಿತ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿದೆ.












Click it and Unblock the Notifications