BBMP Property Tax: ಆಸ್ತಿ ಮಾಲೀಕರೇ ಎಚ್ಚರ, 2025-26ರಲ್ಲಿ ತೆರಿಗೆ ಸಂಗ್ರಹಕ್ಕೆ ಮಾಸ್ಟರ್ ಪ್ಲಾನ್, ಟಾರ್ಗೆಟ್ ಎಷ್ಟು?
ಬೆಂಗಳೂರು, ಫೆಬ್ರವರಿ 28: ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಸವಾಲಾಗಿದೆ. ಈ ಸಂಬಂಧ ಒನ್ ಟೈಮ್ ಸಿಸ್ಟಮ್ ಜಾರಿಗೆ ತಂದರೂ ಸಹಿತ ಕಳೆದ ಸಾಲಿನಲ್ಲಿ (2024-25) ನಿಗದಿತ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿದೆ. ಈ ಸಂಬಂಧ ಮುಂದಿನ ಆರ್ಥಿಕ ವರ್ಷ 2025-26 ರಲ್ಲಿ ಅಧಿಕ ಆಸ್ತಿ ತೆರಿಗೆಗೆ ಟಾರ್ಗೆಟ್ ಹಾಕಿಕೊಂಡಿದೆ. ಆಸ್ತಿ ಮಾಲೀಕರಿಂದ ತೆರಿಗೆ ವಸೂಲಿಗೆ ಬಿಬಿಎಂಪಿ ಭರ್ಜರಿ ಪ್ಲಾನ್ ಮಾಡಿಕೊಂಡಿದೆ.
ಬಿಬಿಎಂಪಿಯು ಆಸ್ತಿ ತೆರಿಗೆಗಳ ಮೇಲಿನ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವ ಹಾಗೂ ತೆರಿಗೆದಾರರಿಗೆ ಒಂದಷ್ಟು ರಿಯಾಯಿತಿ ನೀಡುವ ಕ್ರಮ ಜಾರಿಗೊಳಿಸಿತ್ತು. ಹೀಗಿದ್ದರೂ ಕಳೆದ ವರ್ಷ 5,210 ಕೋಟಿ ರೂ. ಆಸ್ತಿ ಗಳಿಕೆಯಲ್ಲಿ ಬಿಬಿಎಂಪಿ ವಿಫಲವಾಗಿದೆ. ಒನ್ ಟೈಮ್ ವ್ಯವಸ್ಥೆ ಜಾರಿ ತಂದಿದ್ದರೂ ನಿಗದಿತ ಆಸ್ತಿ ಸಂಗ್ರಹಿಸುವಲ್ಲಿ ಹಿನ್ನಡೆ ಅನುಭವಿದ ಕಾರಣಕ್ಕೆ ಹೊಸ ಟಾರ್ಗೆಟ್ ಹಾಕಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2025-26ರ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ₹5,600 ಕೋಟಿಗಳ ಮಹತ್ವಾಕಾಂಕ್ಷೆಯ ಗುರಿ ಹಾಕಿಕೊಂಡಿದೆ. ಇದರ ವಸೂಲಾತಿಗಾಗಿ ಕೆಲವು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಿದೆ. ಈ ಸಂಬಂಧ ಬೆಂಗಳೂರು ಆಸ್ತಿ ತೆರಿಗೆ ಮಾಲೀಕರ ಎಚ್ಚರಿಕೆ ವಹಿಸಬೇಕಿದೆ. ಅಗತ್ಯ ತೆರಿಗೆ ಪಾವತಿ ಬಾಕಿ ಇದ್ದಲ್ಲಿ ಪಾವತಿಸುವುದು ಒಳಿತು.
ಒಟಿಎಸ್ ವ್ಯವಸ್ಥೆ ಇದ್ದರೂ ಬೆಂಗಳೂರಿನಲ್ಲಿ 02 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರು ತಮ್ಮ ತೆರಿಗೆ ಬಾಕಿ ಹಣ ಪಾವತಿಸದೇ ನಿರ್ಲಕ್ಷಿಸಿದ್ದಾರೆ. ಬಿಬಿಎಂಪಿ ಸುಸ್ತಿದಾರರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಹಾಗೂ ಹರಾಜು ಮಾಡಲು ಕ್ರಮಗಳನ್ನು ಆರಂಭಿಸಿದೆ. ಇಂತಹ ಕ್ರಮ ಆರಂಭಿಸಿ ವರ್ಷಗಳು ಕಳೆಯುತ್ತಾ ಬಂದರೂ ಕಳೆದ ವರ್ಷ ನಿರೀಕ್ಷಿತ ಆದಾಯ ಸಂಗ್ರಹವಾಗಿಲ್ಲ. ಈ ಬಾರಿ ಹಾಗಾಗದಂತೆ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ವಹಿಸಲಿದ್ದಾರೆ.
ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ: ಹೊಸ ಕ್ರಮಗಳೇನು?
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಾಣಿಜ್ಯ ಕಟ್ಟಡಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ. ಇದಕ್ಕಾಗಿ ಬೆಸ್ಕಾಂ (BESCOM) ಸಹಕಾರ ಕೋರಿದೆ. ಕಡಿಮೆ ತೆರಿಗೆ ಪಾವತಿಸಲು ಕೆಲವು ಆಸ್ತಿಗಳನ್ನು ವಸತಿ ಕಟ್ಟಡಗಳು ಎಂದು ತಪ್ಪಾಗಿ ವಿಂಗಡಿಸಲಾಗಿದೆ ಎಂಬ ಮಾಹಿತಿ ಪತ್ತೆ ಮಾಡಲಾಗಿದೆ.

ಈ ಸಂಬಂಧ ವಾಣಿಜ್ಯ ಕಟ್ಟಡಗಳ ನಿಖರ ಮಾಹಿತಿ ಪಡೆಯಲು ಬಿಬಿಎಂಪಿ 2-3 ಲಕ್ಷ ಆಸ್ತಿಗಳನ್ನು ನಿವ್ವಳ ತೆರಿಗೆ ಅಡಿಯಲ್ಲಿ ತರಲು ಮುಂದಾಗಿದೆ. ಹೊಸ ಆಸ್ತಿಗಳನ್ನು ಸಂಯೋಜಿಸುತ್ತದೆ. ವಾಣಿಜ್ಯ ಕಟ್ಟಡ, ವಸತಿ ಕಟ್ಟಡಗಳನ್ನು ಸೂಕ್ತವಾಗಿ ಗುರುತಿಸಿ ಮುಂದಿನ ವರ್ಷ ಅತ್ಯಧಿಕ ₹1,000 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಬಹುದು ಎಂದು ಅಂದಾಜಿಸಿದೆ. ಹೀಗಾಗಿ ಈ ಬಾರಿ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಹೆಚ್ಚಿಸಿಕೊಂಡಿದೆ.
ಬಿಬಿಎಂಪಿ ಆಸ್ತಿ ಮುಟ್ಟುಗೋಲು- ಹರಾಜು ಕ್ರಮ
ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಡಿ ಆಸ್ತಿ ತೆರಿಗೆ ಪಾವತಿಸದ ಆಸ್ತಿಗಳ ವಿರುದ್ಧ ಪಾಲಿಕೆ ಸಮರ ಸಾರಿತ್ತು. ತೆರಿಗೆ ಬಾಕಿದಾರರ 9,000 ಆಸ್ತಿಗಳನ್ನು ವಶಪಡಿಸಿಕೊಂಡಿತು. 83,000 ಆಸ್ತಿ ಮಾಲೀಕರ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿತ್ತು. 600 ಕ್ಕೂ ಹೆಚ್ಚು ಆಸ್ತಿ ಹರಾಜಿನ ಬಗ್ಗೆ ಪ್ರಕಟಿಸುತ್ತಿದ್ದಂತೆ 550 ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದರು. ಹೀಗೆ ಹಲವು ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ನಿರೀಕ್ಷಿತ ಆಸ್ತಿ ತೆರಿಗೆ ಸಂಗ್ರಹಿಸಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ.












Click it and Unblock the Notifications