Bengaluru: ಮಳೆಗಾಲದಲ್ಲಿ ರಸ್ತೆ ಗುಂಡಿ ಸಮಸ್ಯೆ ಎದುರಿಸಲು ಬಿಬಿಎಂಪಿ ಸಿದ್ಧತೆ: 11,000 ಚೀಲ ಕೋಲ್ಡ್ ಮಿಕ್ಸ್ ರೆಡಿ
ಬೆಂಗಳೂರು, ಜೂನ್ 8: ಕಳೆದ ವರ್ಷ ಬೆಂಗಳೂರಿನಲ್ಲಿ ಭಾರಿ ಮಳೆಯ ಜೊತೆ, ರಸ್ತೆ ಗುಂಡಿಗಳು ಸಾರ್ವಜನಿಕರ ನಿದ್ದೆ ಕೆಡಿಸಿದ್ದವು, ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿದ್ದರೂ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಮಾಡಲು ಆಗಿರಲಿಲ್ಲ, ಈ ಬಾರಿ ಮಳೆಗಾಲದ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾದ ನಂತರ, ಹೈಕೋರ್ಟ್ ಕೂಡ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಈ ಬಾರಿ ಬಿಬಿಎಂಪಿ ರಸ್ತೆ ಗುಂಡಿ ಸಮಸ್ಯೆಯನ್ನು ಸರಿಪಡಿಸಲು ಕೋಲ್ಡ್ ಮಿಕ್ಸ್ ಮೊರೆ ಹೋಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಫ್ರೀಡಂ ಪಾರ್ಕ್‌ನಲ್ಲಿ 11,000 ಚೀಲ ಕೋಲ್ಡ್ ಮಿಕ್ಸ್ ಅನ್ನು ಸಂಗ್ರಹಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೋಲ್ಡ್ ಮಿಕ್ಸ್‌ನಿಂದ ಕೇವಲ 10 ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬಹುದು ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 8 ರಸ್ತೆ ಮೂಲಸೌಕರ್ಯ ವಲಯಗಳಿದ್ದು, ಪ್ರತಿ ವಲಯಕ್ಕೆ 500 ಚೀಲಗಳನ್ನು ನೀಡಲಾಗುವುದು, ಪ್ರತಿ ವಾರ್ಡ್‌ಗೆ ಕೂಡ 50 ಚೀಲ ಕೋಲ್ಡ್ ಮಿಕ್ಸ್ ಹಂಚಲಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.
ಪಾಲಿಕೆ ಸ್ಥಾವರಲ್ಲಿ ಕೋಲ್ಡ್ ಮಿಕ್ಸ್ ತಯಾರಿ
ಇನ್ನು ಕೋಲ್ಡ್ ಮಿಕ್ಸ್ ತಯಾರಿಸಲು ಬಿಬಿಎಂಪಿ ಯಾವುದೇ ಖಾಸಗಿ ಸಂಸ್ಥೆಗಳನ್ನು ಆಶ್ರಯಿಸಿಲ್ಲ. ಬಿಬಿಎಂಪಿ ಸ್ಥಾವರದಲ್ಲೇ ಇದನ್ನು ಸಿದ್ದಪಡಿಸಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ತಯಾರಿಕೆಯ ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರತಿ ವಲಯದ ಬೇಡಿಕೆಗೆ ಅನುಗುಣವಾಗಿ ಕೋಲ್ಡ್ ಮಿಕ್ಸ್ ಪೂರೈಕೆ ಮಾಡಲಾಗುತ್ತಿದೆ.
ಪ್ರತಿ ಬ್ಯಾಗ್‌ನಲ್ಲಿ 10 ಕೆಜಿ ಕೋಲ್ಡ್ ಮಿಕ್ಸ್ ಇರುತ್ತದೆ, ಇವುಗಳನ್ನು ರಸ್ತೆ ಗುಂಡಿಗಳಲ್ಲಿ ಸುರಿದು ಸಣ್ಣ ರೋಲರ್ ಗಳನ್ನು ಅದರ ಮೇಲೆ ಹರಿಸಿದರೆ ಗುಂಡಿಗಳನ್ನು ಮುಚ್ಚುವ ಕೆಲಸ ಮುಕ್ತಾಯವಾಗುತ್ತದೆ. ಈ ತಂತ್ರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಬೇಕಾದ ಅಗತ್ಯವಿಲ್ಲ ಎಂದು ರಸ್ತೆ ಮೂಲಸೌಕರ್ಯ ವಿಶೇಷ ಆಯುಕ್ತ ಪಿ.ಎನ್.ರವೀಂದ್ರ ಹೇಳಿದರು.
ರಸ್ತೆ ಮೂಲಸೌಕರ್ಯ ತಜ್ಞ, ಇಂಡಿಯಾ ಇಂಟರ್‌ನ್ಯಾಶನಲ್ ಇನ್‌ಫ್ರಾಸ್ಟ್ರಕ್ಚರ್‌ನ ಯೋಜನಾ ನಿರ್ದೇಶಕರಾದ ಪ್ರಸಾದ್ ಡಿ, ಈ ಕೋಲ್ಡ್ ಮಿಕ್ಸ್ ತಂತ್ರಜ್ಞಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. "ಕೋಲ್ಡ್ ಮಿಕ್ಸ್ ಅನ್ನು ಬಿಸಿ ಮಾಡುವ ಅಗತ್ಯವಿಲ್ಲ, ಇತರೆ ವಿಧಾನಗಳಿಗೆ ಹೋಲಿಸಿರೆ ಇದು ಹೆಚ್ಚಿನ ಬಾಳಿಕೆ ಬರುವಂತದ್ದಾಗಿದೆ, ಎಂಜಿನಿಯರ್‌ಗಳು ಗುಂಡಿಯ ಸುತ್ತಲೂ ಬಾಕ್ಸ್ ಆಕಾರದಲ್ಲಿ ಕತ್ತರಿಸಿ, ಕೋಲ್ಡ್ ಮಿಕ್ಸ್ ಸೇರಿಸಿ, ರೋಲ್ ಮಾಡಿದರೆ ಕೆಲಸ ಮುಗಿಯುತ್ತದೆ" ಎಂದು ಹೇಳಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರು ಪೊಲೀಸರು ಕೂಡ ಬಿಬಿಎಂಪಿಯ ಕ್ರಮವನ್ನು ಸ್ವಾಗತಿಸಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಿದರೆ ಸಂಚಾರ ಸುಗಮವಾಗಲಿದೆ, ಅಲ್ಲದೆ ಗುಂಡಿ ಮುಚ್ಚವ ಸಂದರ್ಭದಲ್ಲಿ ರಸ್ತೆಗಳನ್ನು ಬಂದ್ ಮಾಡುವ ಅಗತ್ಯವಿಲ್ಲದೇ ಇರುವುದು ಸಂಚಾರದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.












Click it and Unblock the Notifications