73 ಅಂಗಡಿಗಳಿಗೆ ಬೀಗ ಜಡಿದ ಬಿಬಿಎಂಪಿ
ಬೆಂಗಳೂರು, ಜು. 11 : ಸುಮಾರು 1 ಕೋಟಿ ರೂ.ಗಳಷ್ಟು ಬಾಕಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪಾವತಿ ಮಾಡಬೇಕಾಗಿದ್ದ ಕೆ.ಆರ್.ಮಾರುಕಟ್ಟೆಯ 73 ಮಳಿಗೆಗಳಿಗೆ ಬಿಬಿಎಂಪಿ ಶುಕ್ರವಾರ ಬೀಗ ಜಡಿದಿದೆ. ಕಾಲಾವಕಾಶ ನೀಡಿದರೂ ಬಾಡಿಗೆ ಪಾವತಿ ಮಾಡದ ಅಂಗಡಿಗಳನ್ನು ಮಾರುಕಟ್ಟೆ ಸ್ಥಾಯಿ ಸಮಿತಿ ಮುಚ್ಚಿಸಿದೆ.
ಶುಕ್ರವಾರ ಕೆ.ಆರ್. ಮಾರುಕಟ್ಟೆಯಲ್ಲಿ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಅವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ವ್ಯಾಪಾರಿಗಳ ವಿರೋಧದ ನಡುವೆಯೂ ಮಳಿಗೆಗಳಿಗೆ ಬೀಗ ಹಾಕಲಾಗಿದೆ. [ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಬೆಳಗಿದ ಹಸಿ ತ್ಯಾಜ್ಯ]

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಗೌರಮ್ಮ ಅವರು, ಸುಮಾರು 25 ವರ್ಷಗಳಿಂದ ಕೆ.ಆರ್.ಮಾರುಕಟ್ಟೆಯ 73 ವ್ಯಾಪಾರಿಗಳು ಬಾಡಿಗೆ ಪಾವತಿ ಮಾಡಿರಲಿಲ್ಲ. ಗುತ್ತಿಗೆ ನವೀಕರಿಸುತ್ತಿರಲಿಲ್ಲ. ಈ ಬಗ್ಗೆ ಹಿಂದೆಯೇ ನೋಟಿಸ್ ನೀಡಿ ಜುಲೈ 10ರ ಗಡುವು ನೀಡಲಾಗಿತ್ತು. ಆದರೂ ಪಾವತಿ ಮಾಡದ ಹಿನ್ನಲೆಯಲ್ಲಿ ಬೀಗ ಹಾಕಲಾಗಿದೆ ಎಂದು ಹೇಳಿದರು. [ಬಿಬಿಎಂಪಿ ವಿಭಜನೆ ನಿರ್ಧಾರಕ್ಕೆ ಸದಸ್ಯರ ವಿರೋಧ]
ಈ ಮಳಿಗೆಗಳ ಮಾಲೀಕರಿಂದ ಪಾಲಿಕೆಗೆ ಸುಮಾರು 1 ಕೋಟಿ 25 ಲಕ್ಷ ರೂ. ಬಾಡಿಗೆ ಪಾವತಿಯಾಗಬೇಕಾಗಿದೆ. ಹಲವು ಬಾರಿ ನೋಟಿಸ್ ಜಾರಿಗೊಳಿಸಿದರೂ ವ್ಯಾಪಾರಿಗಳು ಸ್ಪಂದಿಸಿಲ್ಲ. ಆದ್ದರಿಂದ ಇಂದು ಎಲ್ಲಾ ಮಳಿಗೆಗಳಿಗೆ ಬೀಗ ಹಾಕುವ ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದರು.
ಕಾರ್ಯಾಚರಣೆ ನಂತರ ಮಾತನಾಡಿದ ಸಮಿತಿಯ ಸದಸ್ಯ ಬಿ.ಆರ್.ನಂಜುಂಡಪ್ಪ ಅವರು, ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಳಿಗೆಗಳಿಗೆ ಬೀಗ ಹಾಕಿದ್ದೇವೆ. ಆದರೆ ವ್ಯಾಪಾರಿಗಳು ದಂಡ ಸಮೇತ ಬಾಡಿಗೆ ಪಾವತಿಸಿದರೆ ಬೀಗ ಮುದ್ರೆ ತೆರವುಗೊಳಿಸಲಾಗುವುದು ಎಂದು ಹೇಳಿದರು.
ವ್ಯಾಪಾರಿಗಳ ವಿರೋಧ : ಬಿಬಿಎಂಪಿ ಅಧಿಕಾರಿಗಳ ಬೀಗ ಹಾಕುವ ಕಾರ್ಯಾಚರಣೆಯನ್ನು ವ್ಯಾಪಾರಿಗಳು ವಿರೋಧಿಸಿದರು. ಆದರೆ, ಯಾವುದೇ ಒತ್ತಡಕ್ಕೆ ಮಣಿಯದ ಅಧಿಕಾರಿಗಳು 73 ಮಳಿಗೆಗಳನ್ನು ಮುಚ್ಚಿಸಿದ್ದಾರೆ.












Click it and Unblock the Notifications