ಗಾಳಿ ಶುದ್ಧೀಕರಣ ಯಂತ್ರ ಖರೀದಿಯಿಂದ ಹಿಂದೆ ಸರಿದ ಬಿಬಿಎಂಪಿ
ಬೆಂಗಳೂರು, ಆಗಸ್ಟ್ 23; ಬೆಂಗಳೂರು ನಗರದಲ್ಲಿ ಮಲಿನ ಗಾಳಿಯನ್ನು ಶುದ್ಧೀಕರಿಸಲು ಹಡ್ಸನ್ ವೃತ್ತದ ಬಳಿ ಹೊಂಜು ಗೋಪುರ ಸ್ಥಾಪನೆ ಮಾಡಲಾಗಿತ್ತು. ಇದೇ ಮಾದರಿಯ ಯಂತ್ರಗಳನ್ನು ಖರೀದಿ ಮಾಡುವ ಪ್ರಸ್ತಾಪ ಪಾಲಿಕೆಯ ಮುಂದಿತ್ತು. ಆದರೆ ಈಗ ಈ ಪ್ರಸ್ತಾಪವನ್ನು ಬದಿಗೆ ಸರಿಸಲಾಗಿದೆ.
ನೂತನ್ ಲ್ಯಾಬ್ಸ್ ಕರ್ನಾಟಕ ಎಂಬ ಸ್ಟಾರ್ಟ್ ಅಪ್ ಕಂಪನಿ ತಯಾರು ಮಾಡಿದ ಹೊಂಜು ಗೋಪುರ (Smog tower) ಇದಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಇದಕ್ಕೆ ಸಹಕಾರ ನೀಡಿದೆ.
ವಿದೇಶದಿಂದಲೂ ಈ ಯಂತ್ರಕ್ಕೆ ಈಗಾಗಲೇ ಬೇಡಿಕೆ ಬರುತ್ತಿದೆ. ಬಿಬಿಎಂಪಿ ಪ್ರಾಯೋಗಿಕವಾಗಿ ಈ ಯಂತ್ರವನ್ನು ಬಿಬಿಎಂಪಿ ಕಚೇರಿ ಸಮೀಪದಲ್ಲೇ ಸ್ಥಾಪನೆ ಮಾಡಿತ್ತು. ಯಂತ್ರದ ಕಾರ್ಯ ವೈಖರಿಯನ್ನು ಅಧ್ಯಯನ ಮಾಡಲಾಗಿದೆ. ಆದರೆ ಯಂತ್ರವನ್ನು ಖರೀದಿ ಮಾಡುವ ಪ್ರಸ್ತಾಪ ಬದಿಗೆ ಸರಿದಿದೆ.

ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಗಾಳಿಯನ್ನು ಶುದ್ಧೀಕರಿಸಲು ಈ ಯಂತ್ರವನ್ನು ಖರೀದಿ ಮಾಡುವ ಪ್ರಸ್ತಾವನೆ ಇತ್ತು. ಈ ಯಂತ್ರಗಳ ಖರೀದಿಗಾಗಿ ಸುಮಾರು 10 ಕೋಟಿ ಅನುದಾನ ಸಹ ಮಂಜೂರಾಗಿತ್ತು. ಈಗ ಯಂತ್ರಗಳ ಖರೀದಿ ತೀರ್ಮಾನದಿಂದ ಹಿಂದೆ ಸರಿಯಲಾಗಿದೆ.
ಯಂತ್ರಗಳನ್ನು ಖರೀದಿ ಮಾಡುವ ಕುರಿತು ವಿವರವಾದ ಯೋಜನಾ ವರದಿ ತಯಾರು ಮಾಡಿದ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಲಭ್ಯವಿರುವ ವಿವಿಧ ತಂತ್ರಜ್ಞಾನಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಯೋಜನೆ ರೂಪಿಸಿದ್ದವು. 279 ಕೋಟಿ ರೂ.ಗಳ ಯೋಜನೆಯಡಿಯಲ್ಲಿಯೇ ಹೊಂಜು ಗೋಪುರ ಯಂತ್ರಗಳ ಖರೀದಿಯೂ ಸೇರಿತ್ತು.
ನೂತನ್ ಲ್ಯಾಬ್ಸ್ ಕರ್ನಾಟಕ ಈ ಯಂತ್ರದ ಕಾರ್ಯ ಕ್ಷಮತೆ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯೂ ಪರಿಶೀಲನೆ ನಡೆಸಲಿ ಎಂದು ಹೇಳಿದೆ. ಆದ್ದರಿಂದ ಒಂದು ವಾರಗಳ ಕಾಲ ಯಂತ್ರವನ್ನು ಹಡ್ಸನ್ ಸರ್ಕಲ್‌ನಿಂದ ಮಲ್ಲೇಶ್ವರಗೆ ಸ್ಥಳಾಂತರ ಮಾಡಲಾಗುತ್ತದೆ.
ಈ ಯಂತ್ರವನ್ನು ಸುಲಭವಾಗಿ ಸ್ಥಳಾಂತರ ಮಾಡಬಹುದಾಗಿದೆ. ಗೋಪುರ ಯಂತ್ರವು 15 ಅಡಿ ಎತ್ತರ, 6 ಅಡಿ ಸುತ್ತಳತೆ ಹೊಂದಿದೆ. ಯಂತ್ರ ಕಾರ್ಯ ನಿರ್ವಹಣೆ ಮಾಡಲು 11 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಬೇಕಾಗಿದೆ. ದಿನಕ್ಕೆ 10 ಗಂಟೆಗಳ ಕಾಲ ಯಂತ್ರವನ್ನು ಚಾಲನೆಯಲ್ಲಿಡಬೇಕು.
ಹಡ್ಸನ್ ಸರ್ಕಲ್‌ನಲ್ಲಿ ಯಂತ್ರ ಸ್ಥಾಪನೆ ಮಾಡಿದ ಮೇಲೆ ಆ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಶುದ್ಧವಾದ ಗಾಳಿ ಲಭ್ಯವಾಗುತ್ತಿದೆ. ಐಐಎಸ್‌ಸಿ ನಡೆಸಿದ ಅಧ್ಯಯನ ವರದಿ ಸಹ ಇದನ್ನು ಪ್ರಮಾಣೀಕರಿಸಿದೆ.
ನ್ಯಾನೊ ತಂತ್ರಜ್ಞಾನದ ಆಧಾರದ ಮೇಲೆ ಈ ಗೋಪುರ ಕೆಲಸ ಮಾಡುತ್ತದೆ. ವಾತಾವರಣದ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೊ ಕಣಗಳ ಮೂಲಕ ಹಾಯಿಸುತ್ತದೆ. ಬಿಬಿಎಂಪಿ ನಗರದಲ್ಲಿ ಸ್ಥಾಪನೆ ಮಾಡಲು ಈ ಯಂತ್ರವನ್ನು ಖರೀದಿ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ. ಅಧಿಕಾರಿಗಳೇ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ವಿವರವಾದ ಯೋಜನಾ ವರದಿ ಅಧಿಕಾರಿಗಳ ಕೈಗೆ ಸಿಕ್ಕ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬೆಂಗಳೂರು ನಗರದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿತ್ತು. ಈಗ ಪುನಃ ವಾಹನಗಳ ಸಂಚಾರ ಆರಂಭವಾಗಿದ್ದು, ಕೆಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications