ಬೆಂಗಳೂರು ಬೇಸಿಗೆ: ಉದ್ಯಾನಗಳಲ್ಲಿನ ಕೊಳವೆ ಬಾವಿಗಳ ಸ್ಥಿತಿ-ಗತಿ! ವರದಿ ಕೇಳಿದ BBMP
ಬೆಂಗಳೂರು, ಫೆಬ್ರವರಿ 24: ಬೇಸಿಗೆ ಬಂತೆಂದರೆ ಸಾಕು ಮನುಷ್ಯರಿಗೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುವುದಲ್ಲದೇ ಪ್ರಾಣಿ, ಪಕ್ಷ ನಿಸರ್ಗ ಸಂಕುಲಕ್ಕೂ ತೊಂದರೆ ಆಗುತ್ತದೆ. ಅತ್ಯಧಿಕ ಟ್ರಾಫಿಕ್ ಇರುವ ಬೆಂಗಳೂರಿನಲ್ಲಿ ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ಸೇವಿಸಿ, ನಮಗೆಲ್ಲ ಆಮ್ಲಜನಕ ನೀಡುವ ಗಿಡ ಮರಗಳು, ಸಸಿಗಳಿಗೂ ನೀರಿನ ಕೊರತೆ ಎದುರಾಗುತ್ತದೆ. ಇದಾಗದಂತೆ ನೋಡಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೂಕ್ತ ನಿರ್ದೇಶನ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸೋಮವಾರ ನಡೆದ ಸಭೆಯನ್ನು ಉದ್ದೇಶಿಸಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಡನಾಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ಕೊಳವೆಬಾವಿಗಳ ಸ್ಥಿತಿ-ಗತಿಯ ಕುರಿತು ವರದಿ ನೀಡಿ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ಯಾನವನಗಳ ಪೈಕಿ, ಎಷ್ಟು ಕೊಳವೆ ಬಾವಿಗಳು ಸುಸ್ಥಿತಿಯಲ್ಲಿವೆ, ಎಷ್ಟು ಕೊಳವೆ ಬಾವಿಗಳು ದುಸ್ಥಿತಿಯಲ್ಲಿವೆ ಎಂಬುದನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು.

ಕೊಳವೆ ಬಾವಿಗಳು ದುರಸ್ಥಿಯಲ್ಲಿರುವ ಉದ್ಯಾನವನಗಳಲ್ಲಿ ಕೂಡಲೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಸಂಬಂಧ ಜಲಮಂಡಳಿಯ ಜೊತೆ ಮಾತನಾಡಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಿದ ನೀರನ್ನು ಟ್ಯಾಂಕರ್ ಗಳ ಮೂಲಕ ಉದ್ಯಾನವನಗಳಲ್ಲಿರುವ ಸಸಿ/ಮರಗಳಿಗೆ ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದರು.
ಸಂಸ್ಕರಿಸಿದ ನೀರು ವ್ಯವಸ್ಥೆಗೆ ಸೂಚನೆ
ನಗರದಲ್ಲಿ ಬೇಸಿಗೆ ಕಾಲ ಆರಂಭವಾಗಿದೆ. ಉದ್ಯಾನವನಗಳು, ಕೆರೆಗಳು, ಮೀಡಿಯನ್ಸ್ ಗಳಲ್ಲಿರುವ ಸಸಿ/ಮರಗಳಿಗೆ ನೀರು ಅವಶ್ಯಕತೆಯಿದೆ. ಈ ಸಂಬಂಧ ಕೂಡಲೇ ಎಷ್ಟು ನೀರಿನ ಅಗತ್ಯವಿದೆ, ಎಷ್ಟು ಟ್ಯಾಂಕರ್ ಗಳು ಬೇಕಿದೆ ಎಂಬುದನ್ನು ಪಟ್ಟಿ ಮಾಡಿ ನೀರಿನ ವ್ಯವಸ್ಥೆ ಮಾಡಿಕೊಳ್ಳವುದು ಅಗತ್ಯವಿದೆ.
ಬಿದ್ದ ಎಲೆಗಳ ತೆರವು: 100 ಲೀವ್ಸ್ ಕಾಂಪೋಸ್ಟರ್ ಸ್ಥಾಪನೆ
ನಗರದಲ್ಲಿ ಬೇಸಿಗೆ ಕಾಲ ಆರಂಭವಾಗಿದ್ದು, ಮರದ ಎಲೆಗಳು ಸಾಕಷ್ಟು ಬೀಳುತ್ತಿವೆ. ಎಲ್ಲೆಂದರಲ್ಲಿ ಒಣಗಿದ ಎಲೆಗಳ ರಾಶಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಿಗದಿತ ಸ್ಥಳಗಳನ್ನು ಗುರುತಿಸಿ ಎಲೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿ.ಎಸ್.ಡಬ್ಲ್ಯೂ.ಎಂ.ಎಲ್ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸ್ವಚ್ಛತೆ ಮಾಡಬೇಕು ಎಂದು ತಿಳಿಸಿದರು.

ನಗರದಲ್ಲಿ 1280 ಉದ್ಯಾನವನಗಳು ಪಾಲಿಕೆಗೆ ವ್ಯಾಪ್ತಿಗೆ ಬರಲಿವೆ. ಈ ಪೈಕಿ 100 ಉದ್ಯಾನಗಳಲ್ಲಿ ಎಲೆ ಗೊಬ್ಬರ ತಯಾರಿಕಾ ಘಟಕ (ಲೀವ್ಸ್ ಕಾಂಪೋಸ್ಟರ್)ಗಳನ್ನು ಸ್ಥಾಪಿಸಲಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ಉದ್ಯಾನವನಗಳಲ್ಲಿ ಸಸಿ/ಮರಗಳಿಂದ ಬೀಳುವ ಎಲೆಗಳನ್ನು ಸ್ಥಳದಲ್ಲಿಯೇ ಗೊಬ್ಬರವನ್ನಾಗಿಸಿ ಅದನ್ನು ಉದ್ಯಾನವನಗಳಲ್ಲಿಯೇ ಬಳಸಿಕೊಳ್ಳಬೇಕೆಂದು ಹೇಳಿದರು.
ಸಭೆಯಕಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸತೀಶ್ ಮತ್ತಿತರ ಅಧಿಕಾರಿಗಳು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.












Click it and Unblock the Notifications