ಬಿಬಿಎಂಪಿ ವಿಭಜನೆ, ಪರಿಷತ್ತಿನಲ್ಲಿ 2 ಮತದಿಂದ ಸರ್ಕಾರಕ್ಕೆ ಸೋಲು
ಬೆಂಗಳೂರು, ಜುಲೈ 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ತಿದ್ದುಪಡಿ ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಸೋಲು ಉಂಟಾಗಿದೆ. ವಿಧೇಯಕ ಪಾಸು ಮಾಡಿಕೊಳ್ಳಲಾಗದ ಸರ್ಕಾರಕ್ಕೆ ಮುಖಭಂಗವಾಗಿದ್ದು, ವಿಧಾನಸಭೆಯಲ್ಲಿ ಮತ್ತೊಮ್ಮೆ ಮಂಡನೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ವಿಧಾನಸಭೆಯಲ್ಲಿ ಬಿಬಿಎಂಪಿಯನ್ನು ವಿಭಜನೆ ಮಾಡುವ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015 ಅಂಗೀಕಾರಗೊಂಡಿದೆ. ಸೋಮವಾರ ವಿಧಾನಪರಿಷತ್ತಿನಲ್ಲಿ ವಿಧೇಯಕವನ್ನು ಮಂಡನೆ ಮಾಡಲಾಯಿತು. ವಿಧೇಯಕದ ಪರ 28 ಮತ್ತು ವಿರುದ್ಧವಾಗಿ 30 ಮತಗಳು ಬಂದವು. 2 ಮತಗಳಿಂದ ವಿಧೇಯಕಕ್ಕೆ ಸೋಲು ಉಂಟಾಯಿತು. [ಬಿಬಿಎಂಪಿಯನ್ನು 5 ಭಾಗ ಮಾಡಿ: ಬಿಎಸ್ ಪಾಟೀಲ್ ಸಮಿತಿ]
ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ವಿಧೇಯಕವನ್ನು ಮಂಡನೆ ಮಾಡಿದರು, ಇದನ್ನು ಅನುಮೋದಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಸದಸ್ಯ ವಿ.ಸೋಮಣ್ಣ ಅವರು, ಬಿಬಿಎಂಪಿ ವಿಭಜನೆ ಬಗ್ಗೆ ಸ್ಪಷ್ಟತೆ ಇಲ್ಲ. ಸಮಿತಿ 5 ಪಾಲಿಕೆಗಳನ್ನು ಮಾಡುವಂತೆ ಶಿಫಾರಸು ಮಾಡಿದೆ. ಎಷ್ಟು ಪಾಲಿಕೆ ರಚಿಸಲಾಗುತ್ತದೆ? ಎಂದು ಸ್ಪಷ್ಟನೆ ನೀಡಿ ಎಂದರು. ಪರಿಷತ್ತಿನಲ್ಲಿ ನಡೆದ ಚರ್ಚೆಗಳು ಚಿತ್ರಗಳಲ್ಲಿ....

ಸರ್ಕಾರಕ್ಕೆ 2 ಮತಗಳ ಸೋಲು
ಬಿಬಿಎಂಪಿಯನ್ನು ವಿಭಜನೆ ಮಾಡುವ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ದನ್ನು ಸೋಮವಾರದ ವಿಧಾನಪರಿಷತ್ತಿನಲ್ಲಿ ಮಂಡನೆ ಮಾಡಲಾಯಿತು. ವಿಧೇಯಕದ ಪರ 28 ಮತ್ತು ವಿರುದ್ಧವಾಗಿ 30 ಮತಗಳು ಬಂದವು ಆದ್ದರಿಂದ ವಿಧೇಯಕ ಅಂಗೀಕಾರಗೊಂಡಿಲ್ಲ.

ಸರ್ಕಾರ ಹೇಳುವುದೇನು ?
ಪರಿಷತ್ತಿನಲ್ಲಿ ವಿಧೇಯಕ ಮಂಡನೆ ಮಾಡಿದ ಸಚಿವ ಟಿ.ಬಿ.ಜಯಚಂದ್ರ ಅವರು, ಬಿಬಿಎಂಪಿ ವಿಭಜನೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಲಾಗಿದೆ. ಬಿ.ಎಸ್.ಪಾಟೀಲ್ ನೇತತ್ವದ ಸಮಿತಿ ನೀಡಿರುವ ಅಂತಿಮ ವರದಿ ಕುರಿತು ಇನ್ನೂ ಪರಿಶೀಲನೆ ನಡೆಸಬೇಕಿದೆ ಎಂದರು.

ಸೆಲೆಕ್ಟ್ ಕಮಿಟಿ ವರದಿ ಬರಬೇಕು
ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಒಪ್ಪಿಗೆ ಪಡೆಯಲು ವಿಶೇಷ ವಿಧಾನಸಭೆ ಅಧಿಕವೇಶನ ನಡೆಸಲಾಗಿತ್ತು. ಆಗ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು. ವಿಧಾನಪರಿಷತ್‌ನಲ್ಲಿ ಚರ್ಚೆ ನಡೆದ ನಂತರ ಸೆಲೆಕ್ಟ್ ಕಮಿಟಿಗೆ ಒಪ್ಪಿಸಲಾಗಿದ್ದು, ಸಚಿವ ಎಸ್.ಆರ್.ಪಾಟೀಲ್ ನೇತೃತ್ವದ ಸಮಿತಿ ಇನ್ನೂ ವರದಿ ನೀಡಬೇಕಿದೆ.

ಮತಕ್ಕೆ ಹಾಕಲು ಒತ್ತಾಯ
ವಿಧೇಯವನ್ನು ಮಂಡಿಸಿದ ಬಳಿಕ ಇದನ್ನು ಮತಕ್ಕೆ ಹಾಕಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು. ಆಗ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮತಕ್ಕೆ ಹಾಕಿದರು. ವಿಧೇಯಕದ ಪರವಾಗಿ 28, ವಿರುದ್ಧವಾಗಿ 30 ಮತಗಳು ಬಂದವು. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧೇಯಕದ ವಿರುದ್ಧವಾಗಿ ಮತ ಹಾಕಿದರು. ವಿಧೇಯಕ ಎರಡು ಮತಗಳಿಂದ ತಿರಸ್ಕೃತಗೊಂಡಿದೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಕಟಿಸಿದರು.

ಸರ್ಕಾರ ಮುಂದೇನು ಮಾಡಬಹುದು
ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎಂದು ಹಠ ಹಿಡಿದಿರುವ ಸರ್ಕಾರ ವಿಧೇಯಕವನ್ನು ಮತ್ತೊಮ್ಮೆ ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಬಹುದು. ಕಾನೂನಿನಲ್ಲಿಯೂ ಇದಕ್ಕೆ ಅವಕಾಶವಿದೆ. ವಿಧಾನಪರಿಷತ್ತಿನಲ್ಲಿ ಅಂಗೀಕಾರಗೊಳ್ಳದ ವಿಧೇಯಕವನ್ನು ಮತ್ತೊಮ್ಮೆ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬಹುದಾಗಿದೆ.












Click it and Unblock the Notifications