ನಾಯಿಗಳನ್ನು ಸಾಕಲು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕೆ?
ಬೆಂಗಳೂರು, ಡಿಸೆಂಬರ್ 04 : ಮನೆಗಳಲ್ಲಿ ನಾಯಿಗಳನ್ನು ಸಾಕಬೇಕೆಂದರೆ ಬಿಬಿಎಂಪಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ.
ಸಾಕುಪ್ರಾಣಿ ಪ್ರಿಯರು ಪರವಾನಗಿ ಪಡೆಯಲು ಪಾಲಿಕೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಆನ್‌ಲೈನ್ ಪರವಾನಗಿ ನೀಡುವ ಚಿಂತನೆ ಇದೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ, ಶುಲ್ಕವನ್ನು ಇ-ಪಾವತಿ ಮಾಡಿ, ಸುಲಭವಾಗಿ ಪರವಾನಗಿ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಪಶುಪಾಲನಾ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ 2013ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಪರವಾನಗಿ ಶುಲ್ಕ ಮತ್ತು ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡದ ಮೊತ್ತದ ಬಗ್ಗೆ ಇಲಾಖೆ ವಿವರಣೆ ಕೇಳಿತ್ತು. ಪರಿಷ್ಕೃತ ಪ್ರಸ್ತಾವವನ್ನು 4 ತಿಂಗಳ ಹಿಂದೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲಿ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಅವರು ತಿಳಿಸಿದ್ದಾರೆ.
ನಾಯಿ ಸಾಕಲು ಪರವಾನಗಿ ಶುಲ್ಕ 110ರೂ. ನೀಡಬೇಕು. ಪರವಾನಗಿ ನವೀಕರಿಸಲು ವಾರ್ಷಿಕ 100ರೂ. ನೀಡಬೇಕು. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಮೂರು ನಾಯಿಗಿಂತ ಹೆಚ್ಚು ಸಾಕುವಂತಿಲ್ಲ, ಪರವಾನಗಿ ಇಲ್ಲದೆ ನಾಯಿ ಸಾಕಿದರೆ 500ರೂ. ದಂಡ ತೆರಬೇಕಾಗುತ್ತದೆ. ಪರವಾನಗಿ ನವೀಕರಿಸದಿದ್ದರೂ 500ರೂ. ದಂಡ ತೆರಬೇಕು.
ಪರವಾನಗಿ ಶುಲ್ಕ ಮತ್ತು ನವೀಕರಣ ಶುಲ್ಕ 250 ರೂ. ನಿಗದಿಪಡಿಸಲಾಗಿತ್ತು ಎನ್ನುವ ಕಾರಣಕ್ಕೆ 2013ರಲ್ಲಿ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು. ಅಲ್ಲದೆ, ಕೆಲವು ಅಪಾಯಕಾರಿ ನಾಯಿಗಳನ್ನು ಸಾಕಲು ಅನುಮತಿ ಕೊಡಬಾರದು ಎನ್ನುವ ಅಂಶ ಪ್ರಸ್ತಾವದಲ್ಲಿತ್ತು. ಇಂತಹ ನಿಯಮ ಜಾರಿಗೊಳಿಸುವುದರಿಂದ ಪಾಲಿಕೆಗೆ ಏನು ಲಾಭ ಎನ್ನುವ ಬಗ್ಗೆ ಸ್ಪಷ್ಟನೆ ಕೇಳಿದ್ದೆವು' ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.












Click it and Unblock the Notifications