ಚಿತ್ರಗಳು; ಗಣರಾಜ್ಯೋತ್ಸವದಲ್ಲಿ ಪೌರ ಕಾರ್ಮಿಕರ ಪಥಸಂಚಲನ
ಬೆಂಗಳೂರು, ಜನವರಿ 26 : 71ನೇ ಗಣರಾಜ್ಯೋತ್ಸವವನ್ನು ಬೆಂಗಳೂರು ನಗರದಲ್ಲಿ ಆಚರಣೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಪೌರ ಕಾರ್ಮಿಕರು ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವ ಆಯೋಜನೆ ಮಾಡಿತ್ತು. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ದರು.
ಭಾನುವಾರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿ ಪರೇಡ್ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಸುಮಾರು 2 ಸಾವಿರ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. 44 ತುಕಡಿಗಳ ಪಥಸಂಚಲನ ನಡೆಸಿದವು.
ಗಣರಾಜ್ಯೋತ್ಸವದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಹೆಲ್ಮೆಟ್, ಛತ್ರಿ, ನೀರಿನ ಬಾಟಲ್ ತರುವುದನ್ನು ನಿಷೇಧಿಸಲಾಗಿತ್ತು. ಗರುಡಾ ಪಡೆ ಉಗ್ರರ ದಾಳಿ ನಡೆದಾಗ ನಡೆಸುವ ಕಾರ್ಯಾಚರಣೆಯ ಅಣಕು ಪ್ರದರ್ಶನವನ್ನು ನೀಡಿತು.

ಮೊದಲ ಬಾರಿಗೆ ಪರೇಡ್
ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಹೆಜ್ಜೆ ಹಾಕಿದರು. ಸುಮಾರು 1 ವಾರದಿಂದ ಪಥ ಸಂಚಲನದ ಬಗ್ಗೆ 33 ಪೌರ ಕಾರ್ಮಿಕರಿಗೆ ತರಬೇತಿ ನೀಡಲಾಗಿತ್ತು.

ಸ್ವಚ್ಛ ಭಾರತದ ಕಲ್ಪನೆ
ಸ್ವಚ್ಛ ಭಾರತದ ಸಂದೇಶವನ್ನು ಸಾರುವ ಫಲಕಗಳನ್ನು ಹಿಡಿದು ಪೌರ ಕಾರ್ಮಿಕರು ಪರೇಡ್‌ನಲ್ಲಿ ಹೆಜ್ಜೆ ಹಾಕಿದರು. "ನಮ್ಮ ಹೆಮ್ಮೆಯ ಸ್ವಚ್ಛತಾ ಸೇನಾನಿಗಳು ಭಾಗವಹಿಸಿ ಎಲ್ಲರ ಗಮನ ಸೆಳೆದರು" ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಬಿಬಿಎಂಪಿ ಆಯುಕ್ತರ ಜೊತೆ ಫೋಟೋ
ಪಥ ಸಂಚಲನದಲ್ಲಿ ಪಾಲ್ಗೊಂಡ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಬಿಬಿಎಂಪಿಯ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡರು.

ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲ
ಬೆಂಗಳೂರು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವ ನಡೆಯಿತು. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗೌರವ ವಂದನೆ ಸ್ವೀಕರಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಉಪಸ್ಥಿತರಿದ್ದರು.












Click it and Unblock the Notifications